Advertisement

ಚುನಾವಣೆಯಲ್ಲಿ ಉಂಗುರಕ್ಕೆ ಆಕ್ಷೇಪ !

09:50 AM Apr 05, 2019 | keerthan |

ವಿಟ್ಲ: ಮತ ಚಲಾಯಿಸಲು ಬರುವಾಗ ಉಂಗುರ ಧರಿಸಿರಬಾರದು ಎಂಬ ನಿಯಮವೇನೂ ಇಲ್ಲ. ಆದರೂ ಅದೇ ಕಾರಣಕ್ಕೆ ಮತದಾರರೊಬ್ಬರು ಮತಗಟ್ಟೆಯಲ್ಲಿ ಸಮಸ್ಯೆಗೀಡಾದ ಘಟನೆ ಅಂದು ನಡೆದಿತ್ತು!

Advertisement

2009ರ ಲೋಕಸಭಾ ಚುನಾವಣೆ ಸಂದರ್ಭ ನಡೆದ ಘಟನೆಯಿದು. ವಿಟ್ಲದ ಅಳಿಕೆಯ ಮತಗಟ್ಟೆಗೆ ಓರ್ವ ಮತದಾರ ಎರಡು ಕೈಗಳ ಎಂಟು ಬೆರಳುಗಳಿಗೆ ಉಂಗುರ ಧರಿಸಿಕೊಂಡು ಬಂದಿದ್ದರು. ತನ್ನ ಹಕ್ಕು ಚಲಾಯಿಸಲು ಸಿದ್ಧರಾಗುತ್ತಿದ್ದಂತೆ ಅಭ್ಯರ್ಥಿಗಳ ಪರವಾಗಿ ಕೇಂದ್ರದಲ್ಲಿ ಕುಳಿತಿದ್ದ ಏಜೆಂಟ್‌ ಓರ್ವನಿಂದ ದಿಢೀರ್‌ ಆಕ್ಷೇಪ ವ್ಯಕ್ತವಾಯಿತು. ಮತದಾರ ಕಕ್ಕಾಬಿಕ್ಕಿ.

ಮತಗಟ್ಟೆ ಅಧಿಕಾರಿಗಳು ಗೊಂದಲದಲ್ಲಿ ಬಿದ್ದರು. ಮತದಾರರ ಪಟ್ಟಿಯಲ್ಲಿ ಅವರ ಹೆಸರಿದೆ. ಅವರ ಹೆಸರಿನಲ್ಲಿ ಅನ್ಯರಾರೂ ಮತ ಚಲಾಯಿಸಿರಲಿಲ್ಲ. ಎಲ್ಲವೂ ಸರಿಯಾಗಿಯೇ ಇದೆ. ಆದರೂ ಆಕ್ಷೇಪಕ್ಕೆ ಕಾರಣವೇನು ಎಂದು ಅಧಿಕಾರಿಗಳಿಗೆ ಏಜೆಂಟರಲ್ಲಿ ಪ್ರಶ್ನಿಸಿದರು.

ವಾಸ್ತವದಲ್ಲಿ ಕಣದಲ್ಲಿದ್ದ ಓರ್ವ ಪಕ್ಷೇತರ ಅಭ್ಯರ್ಥಿಯ ಚಿಹ್ನೆ ಕೂಡ ಉಂಗುರವಾಗಿದ್ದು, ಈ ಮತದಾರ ಎಂಟು ಬೆರಳಿಗೆ ಉಂಗುರ ಹಾಕಿಕೊಂಡು ಬಂದಿರುವುದು ಆ ಅಭ್ಯರ್ಥಿಯ ಪರ ಪ್ರಚಾರಕ್ಕೆ ಎಂಬುದು ಏಜೆಂಟ್‌ನ ಆಕ್ಷೇಪವಾಗಿತ್ತು. ವಿಷಯ ಸ್ಪಷ್ಟವಾದ ಬಳಿಕ ಈ ಆಕ್ಷೇಪವನ್ನು ಶುದ್ಧ ತಮಾಷೆಯ ನೆಲೆಯಲ್ಲಿ ತಳ್ಳಿ ಹಾಕಿ ಮತದಾರರಿಗೆ ಮತದಾನಕ್ಕೆ ಅವಕಾಶ ನೀಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next