ಹುಟ್ಟು ಮತ್ತು ಸಾವು ಈ ಜೀವನ ಚಕ್ರದ ನಡುವೆ ಏನಾದರೂ ಸಾಧಿಸಿ ಸಮಾಜದಲ್ಲಿ ಗುರುತಿಸಿಕೊಳ್ಳಬೇಕೆಂದು ನಾವು ಹೋರಾಡುತ್ತಿರುತ್ತೇವೆ. ಇಲ್ಲಿ ಪ್ರತಿಯೊಬ್ಬರೂ ಒಂದು ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ. ಆದರೆ ಎಷ್ಟೋ ಬಾರಿ ಅವಕಾಶಗಳು ಮರುಭೂಮಿಯಲ್ಲಿ ಕಂಡ ನೀರಿನಂತೆ ಇನ್ನೇನು ಸಿಕ್ಕಿತು ಎನ್ನುವಷ್ಟರಲ್ಲೇ ಕೈ ಜಾರಿ ಹೋಗಿರುತ್ತದೆ. ಹಾಗೆಂದು ಒಂದು ಅವಕಾಶ ಕೈತಪ್ಪಿತೆಂದು ಅದಕ್ಕಾಗಿ ನಾವು ಪರಿತಪಿಸಿದರೆ ನಮ್ಮ ಬದುಕಿನ ಯಶಸ್ಸಿಗೆ ನಾವೇ ಅಡ್ಡಗಾಲು ಇಟ್ಟಂತೆ.
“ಅವಕಾಶ’ ಎಂಬುದೇ ಹೀಗೆ, ಸದ್ದಿಲ್ಲದೆ ಬಂದು ಹೊರಟುಹೋಗುತ್ತದೆ. ಹಲವರು ಕೈತಪ್ಪಿತೆಂದು ದುಃಖಪಡುತ್ತಾರೆಯೇ ಹೊರತು ಅದು ಯಾಕೆ ದೂರವಾಯಿತು ಎಂದು ತಿಳಿದುಕೊಳ್ಳುವ ಗೋಜಿಗೆ ಹೋಗು ವುದಿಲ್ಲ. ಕೆಲವೊಮ್ಮೆ ಸಣ್ಣಪುಟ್ಟ ಅವಕಾಶ ಗಳು ನಮ್ಮ ಮನೆಯ ಬಾಗಿಲು ತಟ್ಟಿದರೂ ಅದನ್ನು ಅವಗಣಿಸಿ ಬಿಡುತ್ತೇವೆ.
ಹಲವಾರು ವರ್ಷಗಳ ಹಿಂದೆ ಒಬ್ಬ ತರುಣ ದೇಶವೊಂದರ ರಾಜ ನಾಗುತ್ತಾನೆ. ಅವನು ಆಡಳಿತಕ್ಕೆ ಬೇಕಾದ ಜ್ಞಾನವನ್ನು ಪಡೆದಿರು ತ್ತಾನೆ. ಬೇಟೆಯಲ್ಲೂ ತಾನು ನಿಷ್ಣಾತ ನಾಗಬೇಕೆಂಬುದು ಅವನ ಆಸೆ. ಅದಕ್ಕೆಂದೇ ಪರಿಣತ ಬೇಟೆಗಾರ ನಿಂದ ತರಬೇತಿ ಪಡೆದು ಬೇಟೆಗೆಂದು ಪರಿವಾರದೊಡನೆ ಕಾಡಿಗೆ ನಡೆದ. ಅವನಿಗೋಸ್ಕರ ಒಂದು ಪುಟ್ಟ ಬಯಲಿ ನಲ್ಲಿ ಮರದ ಅಟ್ಟಣಿಗೆ ಕಟ್ಟಿದ್ದರು. ಆತ ಅದರ ಮೇಲೆ ತನ್ನ ಬಿಲ್ಲು ಬಾಣಗಳೊಂದಿಗೆ ಸಜ್ಜಾಗಿ ನಿಂತ. ಇವನ ಪರಿವಾರದವರು ಸುತ್ತಲಿನ ಕಾಡಿನಲ್ಲಿ ಗದ್ದಲವನ್ನೆಬ್ಬಿಸಿದರು. ಪ್ರಾಣಿ ಗಳು ಗಾಬರಿಯಾಗಿ ಬಯಲಿಗೆ ನುಗ್ಗಿದಾಗ ಅವುಗಳನ್ನು ರಾಜ ಬೇಟೆಯಾಡಲಿ ಎಂಬುದು ಅವರ ಯೋಜನೆಯಾಗಿತ್ತು.
ಮರುಕ್ಷಣವೇ ಒಂದು ಪುಟ್ಟ ಮೊಲ ಕುಪ್ಪಳಿಸುತ್ತ ಈತನ ಮುಂದೆಯೇ ನಿಂತಿತು. ರಾಜ ಬಿಲ್ಲಿಗೆ ಬಾಣ ಹೂಡಲು ಮುಂದಾದ. ಇನ್ನೇನು ಬಾಣ ಬಿಡ ಬೇಕೆನ್ನುವಷ್ಟರಲ್ಲಿ ಒಂದು ತೋಳ ಅಲ್ಲಿಗೆ ಓಡಿ ಬಂದಿತು. ಆಗ ರಾಜ “ಈ ಮೊಲವನ್ನು ಹೊಡೆಯುವುದು ಎಂಥ ಬೇಟೆ? ತೋಳವನ್ನು ಹೊಡೆದರೆ ಅದರ ಚರ್ಮಕ್ಕೆ ಬೇಕಾದಷ್ಟು ಬೆಲೆ ಇದೆ, ಅದನ್ನೇ ಹೊಡೆಯುತ್ತೇನೆ’ ಎಂದು ಗುರಿ ಬದಲಿಸಿದ. ಅಷ್ಟರಲ್ಲಿ ಒಂದು ಕಪ್ಪು ಜಿಂಕೆ ಹಾರಿ ಬಂದಿತು. ಅಂದದ ಜಿಂಕೆಯನ್ನು ಬೇಟೆಯಾಡಿ ಅದರ ಚರ್ಮವನ್ನು ತನ್ನ ಸಿಂಹಾಸನದ ಮೇಲೆ ಹಾಕಿಕೊಳ್ಳಬೇಕೆಂದು ತೀರ್ಮಾನಿಸಿ ಬಿಲ್ಲನ್ನು ಆ ದಿಕ್ಕಿಗೆ ಹೊರಳಿಸಿದ.
ಆಗ ತಲೆಯ ಮೇಲೆ ಶಿಳ್ಳೆ ಹೊಡೆದಂತೆ ಸದ್ದಾಯಿತು. ತಲೆ ಎತ್ತಿ ನೋಡಿ ದರೆ ಒಂದು ಗರುಡ ಹಾರುತ್ತಿದೆ! ಮೊದಲ ಬೇಟೆಯಲ್ಲೇ ಆಕಾಶದಲ್ಲಿ ಹಾರಾಡುವ ಗರುಡವನ್ನು ಹೊಡೆದರೆ ತನ್ನ ಕೀರ್ತಿ ಹರಡುತ್ತದೆ ಎಂದುಕೊಂಡ ರಾಜ ಇನ್ನೇನು ಬಾಣ ಬಿಡುವಷ್ಟರಲ್ಲಿ ಗರುಡ ಹಾರಿ ಹೋಯಿತು. ಅರೇ! ಗರುಡ ತಪ್ಪಿಸಿಕೊಂಡಿತಲ್ಲ ಎಂದು ಮರಳಿ ಜಿಂಕೆಯತ್ತ ನೋಡಿದರೆ ಅದೆಲ್ಲಿದೆ? ಹಾರಿ ಮಾಯವಾಗಿತ್ತು ಜಿಂಕೆ. ಆಯಿತು ತೋಳವನ್ನಾದರೂ ಹೊಡೆಯುತ್ತೇನೆ ಎಂದು ತಿರುಗಿದರೆ ತೋಳವೂ ಇಲ್ಲ! ಕೊನೆಗೆ ಉಳಿದಿದ್ದು ಮೊಲ ಮಾತ್ರ. ಅದೇನು ಇವನಿಗೋಸ್ಕರ ಕಾಯ್ದುಕೊಂಡು ಕುಳಿತಿರುತ್ತದೆಯೇ? ಎಲ್ಲೋ ಮರೆಯಾಗಿತ್ತು.
ನಾವು ಬಂದ ಅವಕಾಶಗಳನ್ನು ಅವಗ ಣಿಸಿ ಇನ್ಯಾವುದನ್ನೋ ಪಡೆಯಲು ಹೋಗಿ ಕೊನೆಗೆ ಯಾವುದೂ ದಕ್ಕದೆ ಪ್ರಾಪಂಚಿಕ ಸುಖದ ಹುಡುಕಾಟದಲ್ಲಿ ಜೀವನವನ್ನು ಕಳೆದುಬಿಡುತ್ತೇವೆ. ಹಣ ಮತ್ತು ಯಶಸ್ಸಿನ ಬೆನ್ನಹಿಂದೆ ಓಡದೆ, ಬಂದ ಅವಕಾಶಗಳನ್ನು ಸದುಪಯೋಗಿಸಿ ಕೊಂಡರೆ ಎಲ್ಲವೂ ತಾನಾಗಿಯೇ ದಕ್ಕುತ್ತದೆ. ಒಂದು ಅವಕಾಶ ಕಣ್ಣೆದುರು ಇದ್ದಾಗ, ಅದನ್ನು ಬಿಟ್ಟು ಹೆಚ್ಚಿನ ಲಾಭಗಳಿಸುವ, ಸಮ್ಮಾನ ಪಡೆಯುವ ಹುಚ್ಚು ಆಸೆಯಲ್ಲಿ ನಮ್ಮ ಗುರಿ ಬದಲಾಯಿಸುತ್ತಲೇ ಹೋದರೆ ಕೊನೆಗೆ ರಾಜನಿಗಾದ ಸ್ಥಿತಿ ನಮ್ಮದಾಗುತ್ತದೆ. ಯಾವುದೇ ಲೋಭಕ್ಕೆ ಒಳಗಾಗದೆ ಬದುಕಿನಲ್ಲಿ ಬರುವ ಮೊದಲ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡರೆ . ನಮ್ಮ ಮುಂದಿನ ಯಶಸ್ಸಿಗೆ ಅದೇ ದಾರಿದೀಪವಾಗುತ್ತದೆ.
-ಪೂಜಶ್ರೀ ತೋಕೂರು