Advertisement

ನ್ಯಾಯ ಬೆಲೆಯಲ್ಲಿ ಅಗತ್ಯ ವಸ್ತು ಮಾರಾಟಕ್ಕೆ ಅವಕಾಶ: ಕೃಷ್ಣಪ್ಪ

04:25 PM Feb 11, 2021 | Team Udayavani |

ಕಲಬುರಗಿ: ಆಹಾರ ಇಲಾಖೆಯಡಿ ಪಡಿತರ ವಿತರಿಸುವ ನ್ಯಾಯ ಬೆಲೆ ಅಂಗಡಿಯಲ್ಲಿ ದಿನ ಬಳಕೆಯ ಅಗತ್ಯ ವಸ್ತುಗಳ ಮಾರಾಟಕ್ಕೂ ರಾಜ್ಯ ಸರ್ಕಾರ ಅವಕಾಶ
ಕಲ್ಪಿಸಿದೆ ಎಂದು ಕರ್ನಾಟಕ ರಾಜ್ಯ ಪಡಿತರ ವಿತರಕರ ಸಂಘದ ಅಧ್ಯಕ್ಷ ಟಿ. ಕೃಷ್ಣಪ್ಪ ತಿಳಿಸಿದರು. ನಗರದಲ್ಲಿ ಬುಧವಾರ ಪಡಿತರ ವಿತರಕರ ಸಂಘದ ಜಿಲ್ಲಾ ಘಟಕ ಉದ್ಘಾಟನೆ ಹಾಗೂ ಜಿಲ್ಲಾ ಮಟ್ಟದ ಪ್ರಥಮ ಸಮ್ಮೇಳನಕ್ಕೂ ಮುನ್ನ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

Advertisement

ಪಡಿತರ ಅಂಗಡಿಯಲ್ಲಿ ಅಕ್ಕಿ, ಗೋಧಿ ವಿತರಣೆ ಜತೆಗೆ ಚಾಯ್‌ ಪುಡಿ, ಸೋಪು, ಗಂಧದ ಕಡ್ಡಿ ಹೀಗೆ ಎಲ್ಲ ರೀತಿಯ ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಆದರೆ, ಯಾವುದೇ ಕಾರಣಕ್ಕೂ ಪಡಿತರ ಚೀಟಿದಾರರಿಗೆ ಅಗತ್ಯ ವಸ್ತುಗಳ ಖರೀದಿಗೆ ಒತ್ತಾಯ ಮಾಡುವುದು ಅಥವಾ ಕಡ್ಡಾಯ ಎಂಬಂತೆ ಮಾರಾಟ ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸಿದರು.

ಕಡಿಮೆ ದರದಲ್ಲಿ ವಸ್ತುಗಳ ಮಾರಾಟ ಮತ್ತು ಸರಬರಾಜು ಕುರಿತಂತೆ ದೊಡ್ಡ ಕಂಪನಿಗಳ ವಿತರಕರೊಂದಿಗೆ ಮಾತುಕತೆ ನಡೆಯುತ್ತಿದೆ. ಕೆಲ ವಸ್ತುಗಳನ್ನು ಕಡಿಮೆ ಬೆಲೆಗೆ ನೀಡುವಂತೆ ಕೋರಲಾಗಿದೆ. ಮಾರುಕಟ್ಟೆ ದರಕ್ಕಿಂತಲೂ ಸ್ವಲ್ಪ ಕಡಿಮೆ ದರದಲ್ಲಿ ವಸ್ತುಗಳು ಸಿಗುವಂತೆ ಮಾಡುವ ಉದ್ದೇಶ ಹೊಂದಲಾಗಿದೆ. ಇದರಿಂದ ಜನರಿಗೂ ಅನುಕೂಲವಾಗಲಿದೆ ಎಂದು ಹೇಳಿದರು.

ಸದ್ಯ ಪಡಿತರ ಚೀಟಿದಾರರಿಗೆ ತಲಾ 5 ಕೆ.ಜಿ ಅಕ್ಕಿ, ಗೋಧಿ ವಿತರಿಸಲಾಗುತ್ತಿದೆ. ಇದರಿಂದ ಬಡವರಿಗೆ ಸಮಸ್ಯೆಯಾಗುತ್ತಿದ್ದು, ಆಹಾರ ಧಾನ್ಯಗಳ ವಿತರಣೆ
ಹೆಚ್ಚಿಸಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ. ಹೀಗಾಗಿ ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಹಂಚಿಕೆ ಮಾಡುತ್ತಿದ್ದಂತೆ ಪಡಿತರ ಚೀಟಿದಾರರಿಗೆ 10 ಕೆ.ಜಿ ಅಕ್ಕಿ, ಗೋಧಿ, ಸಕ್ಕರೆ, ಉಪ್ಪು, ಅಡುಗೆ ಎಣ್ಣೆ ವಿತರಿಸಿದಂತೆ ವಿತರಿಸಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಪಡಿತರ ಅಂಗಡಿಗಳಲ್ಲಿ ಹೆಚ್ಚಿನ ಆಹಾರ ನೀಡುವುದರಿಂದ ಸರ್ಕಾರಕ್ಕೆ ಯಾವುದೇ ನಷ್ಟವಾಗುವುದಿಲ್ಲ. ಪಡಿತರ ವಿತರಕರಾದ ನಾವು ಸರ್ಕಾರಕ್ಕೆ ಮುಂಗಡ ಹಣ ಪಾವತಿಸಿಯೇ ಆಹಾರ ಧಾನ್ಯ ಪಡೆಯುತ್ತೇವೆ. ಜನರು ಹಣ ನೀಡಿಯೇ ಪಡಿತರ ಪಡೆಯುತ್ತಾರೆ. ಆದ್ದರಿಂದ ಹೆಚ್ಚಿನ ಆಹಾರ ಧಾನ್ಯ ಹಂಚಿಕೆ ಮಾಡಲು ಮುಂದಾಗಬೇಕು. ಅಲ್ಲದೇ, ಹೈಕೋರ್ಟ್‌ ಆದೇಶದಂತೆ ಸೀಮೆ ಎಣ್ಣೆ ವಿತರಣೆಗೂ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

Advertisement

ಪಡಿತರ ವಿತರತರು ಯಾವುದೇ ಕಾರಣಕ್ಕೂ ಆಹಾರ ಧಾನ್ಯಗಳನ್ನು ಕಾಳ ಸಂತೆಗೆ ಮಾರಾಟ ಮಾಡಲು ಸಂಘ ಅವಕಾಶ ಕೊಡುವುದಿಲ್ಲ ಎಂದು ಹೇಳಿದರು. ಸಂಘದ ರಾಷ್ಟ್ರೀಯ ಸಹ ಕಾರ್ಯದರ್ಶಿ ಟಿ.ಆರ್‌. ಸುಬ್ಬರಾಜ, ರಾಜ್ಯ ಉಪಾಧ್ಯಕ್ಷ ಚನ್ನಕೇಶವಗೌಡ, ಜಿಲ್ಲಾಧ್ಯಕ್ಷ ಅಣ್ಣಾರಾವ್‌ ಪಾಟೀಲ, ಉಪಾಧ್ಯಕ್ಷರಾದ ಜಗದೀಶ ಪಡಶೆಟ್ಟಿ, ಶಾಂತಪ್ಪ ಪಾಟೀಲ, ಪ್ರಧಾನ ಕಾರ್ಯದರ್ಶಿ ಪರಮೇಶ್ವರ ಚೀಲಿ, ಯಾದಗಿರಿ ಜಿಲ್ಲಾಧ್ಯಕ್ಷ ಆರ್‌. ಮಹಾದೇವಪ್ಪ ಅಬ್ಬೆತುಮಕೂರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next