ಬೆಂಗಳೂರು: ಸರ್ಕಾರದಿಂದ ಮಂಜೂರಾಗಿರುವ ನಿವೇಶನಗಳನ್ನು ಉಪನೋಂದಣಿ ಕಚೇರಿಯಲ್ಲಿ ನೋಂದಣಿ ಮಾಡಿಸಲು ಕಾವೇರಿ ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, 94 ಸಿ ಮತ್ತು 94 ಸಿಸಿ ಯಡಿ ಬಡವರು ಮನೆ ಕಟ್ಟಿಕೊಂಡಿದ್ದು ಯಡಿಯೂರಪ್ಪ ನವರು ಮುಖ್ಯಮಂತ್ರಿಯಾಗಿದ್ದಾಗ ಹಕ್ಕುಪತ್ರ ನೀಡಲಾಗಿತ್ತು. ಆ ನಿವೇಶನ ಉಪನೋಂದಣಿ ಕಚೇರಿಯಲ್ಲಿ ನೋಂದಣಿ ಮಾಡಿಸಲು, ಕಾವೇರಿ ತಂತ್ರಾಂಶದಲ್ಲಿ ‘ಹಕ್ಕುಪತ್ರ’ ಎಂದು ಆಯ್ಕೆ ಮಾಡಲು ಅವಕಾಶ ಇರಲಿಲ್ಲ. ಇದೀಗ, ಹಕ್ಕುಪತ್ರಗಳನ್ನು ನೋಂದಾಯಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ:ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ 731.03 ಕೋಟಿ ರೂಪಾಯಿ ಅನುದಾನ ಬಿಡುಗಡೆ
ಸರ್ಕಾರಿ ಜಮೀನಿನಲ್ಲಿ ಹಲವಾರು ವರ್ಷಗಳಿಂದ ಅನಧಿಕೃತವಾಗಿ ಸಾಗುವಳಿ ಮಾಡುತ್ತಿರುವ ಭೂರಹಿತರು, ಸಣ್ಣ ರೈತರುಗಳ ಜಮೀನಿನನ್ನು ಸಕ್ರಮಗೊಳಿಸಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ಕೆಲವು ರೈತರು ನಮೂನೆ-50, ನಮೂನೆ-57 ರಲ್ಲಿ ಅರ್ಜಿಸಲ್ಲಿಸದೇ ಇರುವವರಿಗೆ ಮತ್ತೂಂದು ಅವಕಾಶವನ್ನು ನೀಡಬೇಕೆಂದು ಮನವಿ ಬಂದಿದೆ. ಹಾಗಾಗಿ ಇನ್ನೂ ಒಂದು ವರ್ಷ ಅವಧಿಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಮಠ-ಮಾನ್ಯಗಳು, ಸಂಸ್ಥೆ, ಟ್ರಸ್ಟ್‌ಗಳಿಗೆ ಸರ್ಕಾರಿ ಜಮೀನು ನೀಡುವಾಗ ಪರಾಮರ್ಶೆ ನಡೆಸಬೇಕು. ಟ್ರಸ್ಟ್ ನೋಂದಣಿಯಾಗಿ ಎಷ್ಟು ವರ್ಷ ಆಗಿರಬೇಕು, ಅದರ ಕೆಲಸ ಕಾರ್ಯಗಳೇನು, ಸಾಮಾಜಿಕ ಬದ್ಧತೆಯೊಂದಿಗೆ ಕೆಲಸ ಮಾಡುತ್ತಿದೆಯೆ ಈ ಎಲ್ಲಾ ವಿಚಾರ ತಿಳಿದು ಭೂಮಿ ನೀಡಲಾಗುವುದು ಎಂದು ಹೇಳಿದರು.