Advertisement

ಗೌರವಯುತ ಕಾಯಕದ ಅವಕಾಶ

06:14 PM Dec 16, 2021 | Team Udayavani |

ಬೆಳಗಾವಿ: ರಾಜ್ಯದ ಪ್ರತಿಯೊಬ್ಬರೂ ಗೌರವಯುತ ಕಾಯಕದ ಜೀವನ ನಡೆಸಲು ಅಗತ್ಯ ಅವಕಾಶಗಳನ್ನು ಒದಗಿಸಲು ಸರ್ಕಾರ ಬದ್ಧವಾಗಿದ್ದು ಇದಕ್ಕಾಗಿ ಇಚ್ಛಾಶಕ್ತಿ ಹೊಂದುವುದು ಮುಖ್ಯವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ನಗರದ ಸರ್ದಾರ್‌ ಹೈಸ್ಕೂಲ್‌ ಮೈದಾನದಲ್ಲಿ ಬುಧವಾರ ನಡೆದ ರಾಷ್ಟ್ರೀಯ ಗ್ರಾಮೀಣ ಹಾಗೂ ನಗರ ಜೀವನೋಪಾಯ ಅಭಿಯಾನ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸ್ವ ಸಹಾಯ ಗುಂಪಿನ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.

ಹುಟ್ಟಿದ ದೇವರು ಹುಲ್ಲು ಮೇಯಿಸುವುದಿಲ್ಲ ಎಂಬ ಗಾದೆಯಂತೆ ಇಂದು ಪ್ರತಿಯೊಬ್ಬರೂ ಹೊಟ್ಟೆ ತುಂಬಿಸಿಕೊಳ್ಳಲು ಒಂದಿಲ್ಲೊಂದು ಕಾಯಕ ಮಾಡುತ್ತಿದ್ದಾರೆ. ತಲಾ ಆದಾಯದಲ್ಲಿ ಮೂರನೇ ಸ್ಥಾನದಲ್ಲಿರುವ ರಾಜ್ಯವನ್ನು ಮೊದಲನೇ ಸ್ಥಾನಕ್ಕೆ ತರುವ ನಿಟ್ಟಿನಲ್ಲಿ ಮಹಿಳಾ ಸ್ವ-ಸಹಾಯ ಸಂಘಗಳಿಗೆ ಹೆಚ್ಚಿನ ಅವಕಾಶ ಹಾಗೂ ತರಬೇತಿ ನೀಡಲಾಗುತ್ತಿದೆ. ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸಲು ಇಂತಹ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದರು.

ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ ಸಿ.ಎನ್‌ ಮಾತನಾಡಿ, ಸ್ವ ಸಹಾಯ ಸಂಘಗಳು ರಾಜ್ಯದ ಉದ್ದಗಲಕ್ಕೂ ಬೆಳೆದಿದ್ದು ಇವುಗಳ ಮೂಲಕ ಹಲವಾರು ಉತ್ಪನ್ನಗಳನ್ನು ಉತ್ಪಾದನೆ ಮಾಡಲಾಗುತ್ತಿದೆ. ಇಲ್ಲಿಯ ಉತ್ಪನ್ನಗಳು ರಾಷ್ಟ್ರೀಯ, ಅಂತಾರಾಷ್ಟೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ಪ್ರತಿಯೊಂದು ಗ್ರಾಮ ಪಂಚಾಯತಿಗಳಲ್ಲಿ ಸ್ವ ಸಹಾಯ ಸಂಘಗಳಿಂದ ತಯಾರಿಸಲಾಗುವ ಉತ್ಪನ್ನಗಳ ಮಾರಾಟಕ್ಕೆ ಅಗತ್ಯದ ಕಟ್ಟಡ ನಿರ್ಮಾಣಕ್ಕೆ ಶೀಘ್ರವೆ ಕ್ರಮ ಕೈಗೊಳ್ಳಲಾಗುವದು. ಅಲ್ಲದೇ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಇಲಾಖೆಯಿಂದ ಉತ್ಪಾದಿಸುವ ಉತ್ಪನ್ನಗಳನ್ನು ಇತರೆ ಇಲಾಖೆಗಳಿಗೆ ಮಾರಾಟ ಮಾಡಲು ಸುಲಭವಾಗುವಂತಹ ಎಲ್ಲ ಕ್ರಮಗಳನ್ನು ಜರುಗಿಸಲಾಗುವದು ಎಂದರು.

Advertisement

ಶಾಸಕ ಅನಿಲ್‌ ಬೆನಕೆ, ಅಭಿವೃದ್ಧಿ ಆಯುಕ್ತರಾದ ವಂದಿತಾ ಶರ್ಮಾ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಇಲಾಖೆ ಕಾರ್ಯದರ್ಶಿ ಡಾ. ಎಸ್‌. ಸೆಲ್ವಕುಮಾರ, ಬೆಳಗಾವಿ ಪ್ರಾದೇಶಿಕ ಆಯುಕ್ತ ಆದಿತ್ಯ ಆಮ್ಲಾನ ಬಿಸ್ವಾಸ, ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ, ಜಿ.ಪಂ. ಸಿಇಒ ಎಚ್‌.ವಿ. ದರ್ಶನ, ಮಹಿಳಾ ಸ್ವ ಸಹಾಯ ಗುಂಪುಗಳ ಸದಸ್ಯರು ಇದ್ದರು. ರಾಷ್ಟೀಯ ಜೀವನೋಪಾಯ ಅಭಿಯಾನದ ಅಭಿಯಾನ ನಿರ್ದೇಶಕಿ ಮುಂಜುಶ್ರೀ ಎನ್‌. ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next