Advertisement

ಮಕ್ಕಳ ಬೆಳವಣಿಗೆಗೆ ವೇದಿಕೆ ಅಗತ್ಯ : ನರಹರಿ ಕಳತ್ತೂರು

09:45 AM Apr 09, 2018 | Team Udayavani |

ಬದಿಯಡ್ಕ: ಮಕ್ಕಳಿಗೆ ಬೇಕಾದುದನ್ನು ಒದಗಿಸಿಕೊಡುವ ಜವಾಬ್ದಾರಿ ಅಧ್ಯಾಪಕರಿಗಿದೆ. ಶಾಲೆಯೆಂದರೆ ದೇವಾಲಯವಿದ್ದಂತೆ. ಮಕ್ಕಳ ಬೆಳವಣಿಗೆಗೆ ಬೇಕಾದ ವೇದಿಕೆಯನ್ನು ನಿರ್ಮಿಸಿ ಅವರಲ್ಲಿರುವ ಕೀಳರಿಮೆ, ಹಿಂಜರಿಕೆ, ಹೆದರಿಕೆಯನ್ನು ಹೋಗಲಾಡಿಸಿ ಬೌದ್ಧಿಕ, ಮಾನಸಿಕ ಹಾಗೂ ಸಾಮಾಜಿಕ ವಿಕಾಸ ಹೊಂದುವಂತೆ ಮಾಡುವುದಕ್ಕೆ ರಂಗಸಂಸ್ಕೃತಿಯಂತಹ ಶಿಬಿರಗಳು ಸೂಕ್ತವಾಗಿವೆ. ಎಂದು ನಿವೃತ್ತ ಮುಖ್ಯೋಪಾಧ್ಯಾಯ ನರಹರಿ ಕಳತ್ತೂರು ಅಭಿಪ್ರಾಯಪಟ್ಟರು. ಅವರು ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ‘ರಂಗಚಿನ್ನಾರಿ’ ಕಾಸರಗೋಡು ಆಯೋಜಿಸಿದ ದ್ವಿದಿನ ರಂಗ ಸಂಸ್ಕೃತಿ ಶಿಬಿರದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.

Advertisement

ಎಲ್ಲರಿಗೂ ಎಲ್ಲವೂ ಸಿಗಬೇಕೆಂದೇನಿಲ್ಲ. ಆದರೆ ಪ್ರಯತ್ನಿಸುವುದು ತಪ್ಪಲ್ಲ. ಈ ಶಾಲೆಯ ಮಕ್ಕಳಿಗೆ ಇಂತಹ ವಿಪುಲವಾದ ಅವಕಾಶಗಳನ್ನು ಸದಾ ನೀಡುತ್ತಿರುವ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಅಧ್ಯಾಪಕರ ಶ್ರಮ ಶ್ಲಾಘನೀಯವಾಗಿದೆ. ಅಂತೆಯೇ ರಂಗಚಿನ್ನಾರಿಯು ಹತ್ತು ಹಲವು ಕನ್ನಡಪರವಾದ ಚಟುವಟಿಕೆಗಳನ್ನು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳುತ್ತಿರುವುದು ಸಂತೋಷದಾಯಕವಾಗಿದೆ. ಇದರಿಂದಾಗಿ ಎಷ್ಟೋ ಮೂಲೆಯಲ್ಲಿರುವ ಮಕ್ಕಳಿಗೆ ವೇದಿಕೆ ಸಿಗುವಂತಾಗಿದೆ ಎಂದರು.


ಶಾಲಾ ಸಂಚಾಲಕ ಜಯಪ್ರಕಾಶ ಪಜಿಲ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಇನ್ನು ಮುಂದೆಯೂ ಇಂತಹ ಹಲವಾರು ಮಕ್ಕಳ ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ಮಕ್ಕಳ ಸೃಜನಶೀಲತೆಯನ್ನು ಬೆಳೆಸುವಲ್ಲಿ ನಿಮ್ಮೆಲ್ಲರ ಸಹಕಾರ ಬಯಸುತ್ತೇವೆ ಎಂದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಪ್ರಕಾಶ್‌ ನಾಯಕ್‌ ಮಂಗಳೂರು ಮಕ್ಕಳಿಗೆ ವಿವಿಧ ರೀತಿಯ ಮುಖವಾಡಗಳ ತಯಾರಿಯನ್ನು ಸರಳವಾಗಿ ತಯಾರಿಸುವ ಕೌಶಲವನ್ನು ಸ್ವಯಂ ತಾವೇ ಮಾಡುತ್ತಾ ಹುರಿದುಂಬಿಸಿದರು. ಅಂತಿಮವಾಗಿ ಮಕ್ಕಳು ತಯಾರಿಸಿದ ಮುಖವಾಡಗಳನ್ನು ಪ್ರದರ್ಶನಕ್ಕಿಡಲಾಯಿತು. ರಂಗಚಿನ್ನಾರಿಯ ನಿರ್ದೇಶಕ ಕಾಸರಗೋಡು ಚಿನ್ನಾ, ಗಾಯಕ ಕಿಶೋರ್‌ ಪೆರ್ಲ, ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಉಪಸ್ಥಿತರಿದ್ದರು. ಮಕ್ಕಳೇ ಈ ಎಲ್ಲಾ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಎರಡು ದಿನಗಳ ಶಿಬಿರದಲ್ಲಿ ಮಕ್ಕಳೊಂದಿಗೆ ಅಧ್ಯಾಪಕರಾದ ಮಹೇಶ್‌ ಕೆ., ಸೂರ್ಯನಾರಾಯಣ ವಳಮಲೆ, ರಶ್ಮಿ ಪೆರ್ಮುಖ, ರಾಜೇಶ್ವರಿ ಪಿ., ಸರೋಜಾ ವಳಕ್ಕುಂಜ ಸಹಕರಿಸಿದರು.

– ಚಿತ್ರ : ಅಶ್ವಿ‌ನಿ ಸ್ಟುಡಿಯೋ, ಬದಿಯಡ್ಕ

Advertisement

Udayavani is now on Telegram. Click here to join our channel and stay updated with the latest news.

Next