Advertisement

ಉದ್ಯಮಿಯಾಗಲು ಕಲ್ಯಾಣದಲ್ಲಿ ಅವಕಾಶ ವಿಫುಲ‌

10:18 AM Jan 04, 2022 | Team Udayavani |

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗ ಅಭಿವೃದ್ಧಿ ಹೊಂದಲು ಮತ್ತು ಇಲ್ಲಿನ ಜನರು ಉದ್ಯಮಿಗಳಾಗಲು ಹಲವು ಅವಕಾಶಗಳು ಇವೆ. ಈ ಭಾಗದ ಪ್ರಗತಿಗೆ ಈ ಭಾಗದವರೇ ಉದ್ಯಮಿಯಾಗಿ ಹೊರಹೊಮ್ಮಬೇಕೆಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಹೇಳಿದರು.

Advertisement

ನಗರದ ಗುಲಬರ್ಗಾ ವಿಶ್ವವಿದ್ಯಾಲಯದ ಡಾ|ಬಿ.ಆರ್‌. ಅಂಬೇಡ್ಕರ್‌ ಭವನದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಮತ್ತು ಕರ್ನಾಟಕ ಉದ್ಯೋಗ ಮಿತ್ರ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ “ಉದ್ಯಮಿಯಾಗು-ಉದ್ಯೋಗ ನೀಡು’ ಕಾರ್ಯಾಗಾರದ ಉದ್ಘಾಟಿಸಿ ಅವರು ಮಾತನಾಡಿದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಪಾರವಾದ ನೈಸರ್ಗಿಕ ಸಂಪನ್ಮೂಲಗಳು ಇವೆ. ಈ ಭಾಗದ ಯುವಕರು ಅವುಗಳನ್ನು ಸದುಪಯೋಗ ಪಡೆದುಕೊಳ್ಳಬೇಕು. ಬೇರೆಯವರು ಬಂದು ಇಲ್ಲಿ ಉದ್ಯಮ ಸ್ಥಾಪಿಸಿದ ಮೇಲೆ ಅವರ ಬಳಿ ಕೆಲಸ ಮಾಡುವ ಬದಲು, ನಿಮ್ಮ ಸಂಪನ್ಮೂಲ, ಸಂಪತ್ತನ್ನು ನೀವೇ ಪ್ರಗತಿಯತ್ತ ಹೆಜ್ಜೆ ಹಾಕಿ ಎಂದು ಕರೆ ನೀಡಿದರು.

ಉದ್ಯಮ ಸ್ಥಾಪನೆ ಮತ್ತು ಉದ್ಯಮಿಯಾಗಲು ಹೊರಟಾಗ ಸಮಸ್ಯೆ, ಸವಾಲುಗಳು ಎದುರಾಗುವುದು ಸಾಮಾನ್ಯ. ಅದನ್ನು ಎದುರಿಸಿ ಮುನ್ನಡೆದರೆ ಯಶಸ್ಸು ಖಂಡಿತವಾಗಿಯೂ ಸಾಧ್ಯ ಇದೆ. ಒಂದು ಕೋಟಿ ಆದಾಯದವರೆಗೆ ಮಾತ್ರ ಕಷ್ಟವಾಗುತ್ತದೆ. ಪ್ರಸ್ತುತ ದಿನಮಾನಗಳಲ್ಲಿ ಒಂದು ಕೋಟಿ ಆದಾಯ ದಾಟಿದರೆ, ಆ ಹಣವೇ ನಿಮಗೆ ಹಣ ಮಾಡಿಕೊಡುತ್ತದೆ. ಉದ್ಯಮಿಯಾಗುವ ಅವಕಾಶವನ್ನು ಬಳಸಿಕೊಳ್ಳಲು ಯುವಕರು ಮುಂದೆ ಬರಬೇಕು. ಇದುವೇ “ಉದ್ಯಮಿಯಾಗು-ಉದ್ಯೋಗ ನೀಡು’ ಕಾರ್ಯಕ್ರಮದ ಉದ್ದೇಶ ಎಂದರು.

ಈ ಭಾಗದಲ್ಲಿ ಜವಳಿ ಪಾರ್ಕ್‌, ಜ್ಯುವೆಲ್ಲರಿ ಪಾರ್ಕ್‌ ಮತ್ತು ಡ್ರಗ್‌ ಪಾರ್ಕ್‌ ಸೇರಿ ವಿವಿಧ ಯೋಜನೆಗಳ ಸ್ಥಾಪನೆ ಬಗ್ಗೆ ಚಿಂತನೆ ನಡೆದಿದೆ. “ಉದ್ಯಮಿಯಾಗು- ಉದ್ಯೋಗ ನೀಡು’ ಕಾರ್ಯಕ್ರಮದಲ್ಲಿ ನೋಂದಣಿ ಮಾಡಿಸಿಕೊಂಡವರಿಗೆ ತರಬೇತಿ, ಉತ್ತೇಜನ, ಮಾರ್ಗದರ್ಶನ, ಆರ್ಥಿಕ ನೆರವು, ಕಚ್ಚಾ ಸಾಮಾಗ್ರಿ ಸೇರಿ ಉದ್ಯಮಕ್ಕೆ ಪೂರಕವಾದ ನೆರವು ಸರ್ಕಾರದಿಂದ ಸಿಗಲಿದೆ ಎಂದು ವಿವರಿಸಿದರು.

Advertisement

ಉದ್ಯಮಿಯಾಗಲು ಮುಂದೆ ಬರುವ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದವರಿಗೆ ಶೇ.70ರಷ್ಟು ರಿಯಾಯಿತಿ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಶೇ.75ರಷ್ಟು ರಿಯಾಯಿತಿಯನ್ನು ಸರ್ಕಾರ ನೀಡುತ್ತಿದೆ. ಕೈಗಾರಿಕೆಗಳಿಗೆ ಶೇ.30ರಷ್ಟು ತೆರಿಗೆ ಸಹ ವಿನಾಯಿತಿ ನೀಡಲಾಗುತ್ತಿದೆ. ಇವುಗಳ ಸದ್ಬಳಕೆ ಮಾಡಿಕೊಳ್ಳಬೇಕೆಂದು ಸಚಿವರು ಹೇಳಿದರು.

ಸಂಸದ ಡಾ|ಉಮೇಶ ಜಾಧವ್‌ ಮಾತನಾಡಿದರು. ಈ ಭಾಗದ ಜಿಲ್ಲೆಗಳಲ್ಲೂ ಈ ಕಾರ್ಯಾಗಾರದ ನೇರ ಪ್ರಸಾರದ ವ್ಯವಸ್ಥೆ ಮಾಡಲಾಗಿತ್ತು. ಸುಮಾರು ಐದು ಸಾವಿರ ವಿದ್ಯಾರ್ಥಿಗಳು, ಯುವ ಉದ್ಯಮಿಗಳು, ಉದ್ಯೋಗಾಂಕ್ಷಿಗಳು ನೇರ ಪ್ರಸಾರದ ಮೂಲಕ ಭಾಗವಹಿಸಿದ್ದರು. ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಅಧ್ಯಕ್ಷತೆ ವಹಿಸಿದ್ದರು. ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಕೆಕೆಆರ್‌ ಟಿಸಿ ಅಧ್ಯಕ್ಷ ರಾಜಕುಮಾರ ಪಾಟೀಲ ತೇಲ್ಕೂರ, ವಿಧಾನ ಪರಿಷತ್‌ ಸದಸ್ಯರಾದ ಬಿ.ಜಿ.ಪಾಟೀಲ, ಶಶೀಲ್‌ ನಮೋಶಿ, ಕ್ರೆಡಲ್‌ ಅಧ್ಯಕ್ಷ ಚಂದು ಪಾಟೀಲ ಇತರರಿದ್ದರು.
ಕೈಗಾರಿಕಾ ಅದಾಲತ್‌ “ಉದ್ಯಮಿಯಾಗು-ಉದ್ಯೋಗ ನೀಡು’ ಕಾರ್ಯಾಗಾರದ ನಂತರ ಮಧ್ಯಾಹ್ನ ಕೈಗಾರಿಕಾ ಅದಾಲತ್‌ ನಡೆಯಿತು. ಇದರಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳಿಂದ 78 ಅರ್ಜಿಗಳು ಬಂದಿದ್ದವು. ಈ ಅರ್ಜಿಗಳನ್ನು ಪರಿಶೀಲಿಸಿ ಸಲಹೆ ನೀಡಲಾಯಿತು. ಕೆಲವು ಅರ್ಜಿಗಳ ಇತ್ಯರ್ಥ ಮಾಡುವುದಾಗಿ ಇಲಾಖೆಯ ಅಧಿಕಾರಿಗಳು ಭರವಸೆ ನೀಡಿದರು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಲವಾರು ಅವಕಾಶಗಳು ಇದ್ದರೂ ಅವುಗಳನ್ನು ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಆಸಕ್ತಿ ತೋರಿಸುತ್ತಿಲ್ಲ. ಈ ಭಾಗದ ಸ್ಥಳೀಯರ ಒಂದೇ ಒಂದು ಬೃಹತ್‌ ಕೈಗಾರಿಕೆಗಳು ಇಲ್ಲ. ಈ ಬಗ್ಗೆ ಅವಲೋಕನ ಮಾಡಿಕೊಳ್ಳುವುದು ಅಗತ್ಯವಾಗಿದೆ. -ಮುರುಗೇಶ ನಿರಾಣಿ, ಕೈಗಾರಿಕಾ ಸಚಿವ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next