Advertisement

ಮುಕ್ತ ವಿವಿಯಲ್ಲಿದೆ ವಿವಿಧ ಕೋರ್ಸ್‌ಗಳ ಅವಕಾಶ

10:32 PM May 17, 2019 | Lakshmi GovindaRaj |

ಪ್ರಸಕ್ತ ಸಾಲಿನಲ್ಲಿ ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ಪದವಿ, ವೃತ್ತಿ ಶಿಕ್ಷಣ ಹೀಗೆ ಹಲವು ಕೋರ್ಸ್‌ಗಳು ಲಭ್ಯವಿದೆ ಮತ್ತು ಸುಲಭದಲ್ಲಿ ದಾಖಲಾತಿಯೂ ದೊರೆಯುತ್ತದೆ. ಕುಟುಂಬದ ಆರ್ಥಿಕ ಪರಿಸ್ಥಿತಿ ಅಥವಾ ಇನ್ಯಾವುದೋ ಕಾರಣಕ್ಕೆ ಪಿಯುಸಿ ನಂತರ ಶಿಕ್ಷಣ ಮಾಡಲು ಸಾಧ್ಯವಾಗದವರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಪದವಿ, ಡಿಪ್ಲೊಮಾ ಅಥವಾ ಪ್ರಮಾಣ ಪತ್ರ ಕೋರ್ಸ್‌ಗಳಿಗೆ ಅತಿ ಸುಲಭವಾಗಿ ಸೇರಿಕೊಳ್ಳಬಹುದಾಗಿದೆ.

Advertisement

ದೂರ ಶಿಕ್ಷಣದ ಕೋರ್ಸ್‌ ಎಂದಾಕ್ಷಣ ಅನೇಕರಲ್ಲಿ ಅಸಡ್ಡೆ ಇದೆ. ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಸಿಜಿ)ದ ಮಾನ್ಯತೆ ಇಲ್ಲ ಎಂಬ ಅಪನಂಬಿಕೆಯೂ ಇದೆ. ಈಗ ಅದ್ಯಾವುದೇ ಸಮಸ್ಯೆ ಇಲ್ಲ. ಅಲ್ಲದೆ ಯುಜಿಸಿ 2017ರಲ್ಲಿ ದೂರ ಶಿಕ್ಷಣಕ್ಕೆ ಸಂಬಂಧಿಸಿದಂತೆ ಹೊರಡಿಸಿದ ನಿಯಮಾವಳಿಗಳ ಪ್ರಕಾರ, ಸಾಮಾನ್ಯ ವಿಶ್ವವಿದ್ಯಾಲಯದ ಪದವಿ ಹಾಗೂ ಮುಕ್ತ ವಿಶ್ವವಿದ್ಯಾಲಯದ ಪದವಿಗೆ ಯಾವುದೇ ವ್ಯತ್ಯಾಸ ಇರುವುದಿಲ್ಲ.

ಹೀಗಾಗಿ ಯಾವ ಆತಂಕವೂ ಇಲ್ಲದೆ ಸುಲಭವಾಗಿ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದ ಪದವಿ ಕೋರ್ಸ್‌ಗಳಿಗೆ ಸೇರಿಕೊಳ್ಳಬಹುದಾಗಿದೆ. ಪದವಿ ಪೂರೈಸಿದವರು ವಿವಿಧ ಸ್ನಾತಕೋತ್ತರ ಪದವಿಗೆ ಸೇರಿಕೊಳ್ಳಬಹುದಾಗಿದೆ. ಮುಕ್ತ ವಿಶ್ವವಿದ್ಯಾಲಯದಿಂದ ಪಡೆದ ಪದವಿಗೆ ಸರ್ಕಾರದ ಮಾನ್ಯತೆ ಇಲ್ಲ ಎಂಬ ಆತಂಕ ಅನೇಕರಲ್ಲಿದೆ. ಆದರೆ, ಈಗ ಹಾಗಿಲ್ಲ.

ಸಾಮಾನ್ಯ ವಿವಿಯ ಪದವಿಗೂ ಮುಕ್ತ ವಿವಿಯ ಪದವಿಗೂ ಯಾವುದೇ ವ್ಯತ್ಯಾಸ ಇಲ್ಲದೇ ಇರುವುದರಿಂದ ಸರ್ಕಾರಿ ಉದ್ಯೋಗ, ಮುಂಬಡ್ತಿ, ಸಂಶೋಧನೆ ಸಹಿತವಾಗಿ ಎಲ್ಲ ವಿಷಯದಲ್ಲೂ ಸಾಮಾನ್ಯ ಪದವಿಯಂತೆ ಇದನ್ನು ಪರಿಗಣಿಸಲಾಗುತ್ತದೆ. //ksoumysore.karnataka.gov.in/ ವೆಬ್‌ಸೈಟ್‌ನಲ್ಲಿ ಅರ್ಜಿಗೆ ಸಂಬಂಧಿಸಿದ ಎಲ್ಲ ಮಾಹಿತಿ ಹಾಗೂ ಕೋರ್ಸ್‌ಗಳು ಲಭ್ಯವಿದೆ. ರಾಜ್ಯದ 18 ಪ್ರಾದೇಶಿಕ ಕೇಂದ್ರ ಹಾಗೂ 62 ಅಧ್ಯಯನ ಕೇಂದ್ರದಲ್ಲಿಯೂ ಈ ಸಂಬಂಧ ಮಾಹಿತಿ ಲಭ್ಯವಿದೆ. ಹಾಗೆಯೇ ಎಲ್ಲ ಅಧ್ಯಯನ ಕೇಂದ್ರವು ಸರ್ಕಾರಿ ಅಥವಾ ಅನುದಾನಿತ ಪದವಿ ಕಾಲೇಜಿನ ಆರವಣದಲ್ಲೇ ಇರಲಿದೆ.

ಮುಕ್ತ ವಿವಿಯಲ್ಲಿ ವಿವಿಧ ಪದವಿ, ಸ್ನಾತಕೋತ್ತರ ಪದವಿಗೆ ದಾಖಲಾದ ವಿದ್ಯಾರ್ಥಿಗಳಿಗೆ ವಿವಿಯಿಂದಲೇ ಅಧ್ಯಯನ ಪರಿಕರ(ಸ್ಟಡಿ ಮೆಟಿರಿಯಲ್‌) ಒದಗಿಸಲಾಗುತ್ತದೆ. ಅದರ ಜತೆಗೆ ವರ್ಷದಲ್ಲಿ ಒಂದು ಅಥವಾ ಎರಡು ಬಾರಿ ವಿಶೇಷ ತರಗತಿ ನಡೆಸಲಾಗುತ್ತದೆ. ಅಸೈನ್‌ಮೆಂಟ್‌ಗಳನ್ನು ನೀಡಲಾಗುತ್ತದೆ. ಯಾವುದೇ ಗೊಂದಲವಿದ್ದರೂ ಅಧ್ಯಯನ ಕೇಂದ್ರದಲ್ಲಿ ಪ್ರತಿ ವಾರಾಂತ್ಯದಲ್ಲಿ ಸಂಬಂಧಪಟ್ಟ ಪ್ರಾಧ್ಯಾಪಕರ ಮೂಲಕ ಅದನ್ನು ಬಗೆಹರಿಸಿಕೊಳ್ಳುವ ವ್ಯವಸ್ಥೆಯೂ ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next