ಮಂಗಳೂರು: ಕಾಶಿ ಜ್ಞಾನವಾಪಿ ಮಂದಿರದಲ್ಲಿ ನ್ಯಾಯಾಲಯವು ಪೂಜೆಗೆ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ವತಿಯಿಂದ ಕದ್ರಿಯ ಶ್ರೀ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಬೆಳಗ್ಗೆ ವಿಹಿಂಪ ಮುಖಂಡ ಪ್ರೊ| ಎಂ.ಬಿ. ಪುರಾಣಿಕ್ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಕಾಶಿ ವಿಶ್ವನಾಥ ದೇಗುಲ ಬಳಿಯ ಜ್ಞಾನವಾಪಿ ಮಂದಿರದಲ್ಲಿ 32 ವರ್ಷಗಳಿಂದ ನಿಂತಿದ್ದ ಪೂಜೆಗೆ ನ್ಯಾಯಾಲಯ ಅವಕಾಶ ನೀಡಿದೆ, ಜ್ಞಾನವಾಪಿ ಮಸೀದಿಯಲ್ಲಿ ದೇವಾಲಯದ ಕುರುಹುಗಳು, ದೇವರ ಮೂರ್ತಿಗಳು, ಶಿವಲಿಂಗ ಇತ್ಯಾದಿ ಪತ್ತೆಯಾಗಿವೆ.
ದೇವಾಲಯವನ್ನು ಕೆಡವಿ ಮಸೀದಿ ಕಟ್ಟಿರುವುದಕ್ಕೆ ಇದು ಸಾಕ್ಷಿ. ಅಲ್ಲಿರುವ ಇನ್ನಷ್ಟು ಕಾನೂನು ತೊಡಕುಗಳು ನಿವಾರಣೆಯಾಗಬೇಕು, ಅಲ್ಲಿ ಕಾಶಿ ವಿಶ್ವನಾಥನ ಭವ್ಯ ಮಂದಿರ ನಿರ್ಮಾಣವಾಗಲಿ ಎಂದು ಪ್ರಾರ್ಥಿಸಿ ಈ ವಿಶೇಷ ಪೂಜೆ ಸಲ್ಲಿಸಿದ್ದೇವೆ ಎಂದು ಪ್ರೊ| ಪುರಾಣಿಕ್ ತಿಳಿಸಿದರು.
ವಿಭಾಗ ಸಂಯೋಜಕ ಭುಜಂಗ ಕುಲಾಲ್, ಜಿಲ್ಲಾಧ್ಯಕ್ಷ ಎಚ್.ಕೆ. ಪುರುಷೋತ್ತಮ, ವಿಭಾಗ ಸಹ ಸಂಯೋಜಕ ಪುನೀತ್ ಅತ್ತಾವರ, ಜಿಲ್ಲಾ ಸಹ ಸಂಯೋಜಕ ಪ್ರೀತಮ್ ಕಾಟಿಪಳ್ಳ ಮುಂತಾದವರು ಪಾಲ್ಗೊಂಡರು.