ಉಪ್ಪಿನಂಗಡಿ: ಬಜತ್ತೂರು ಗ್ರಾ.ಪಂ.ನ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ 2019-20ನೇ ಸಾಲಿನ ಪ್ರಥಮ ಹಂತದ ಸಾಮಾಜಿಕ ಪರಿಶೋಧನೆಯ ವಿಶೇಷ ಗ್ರಾಮಸಭೆ ಬಜತ್ತೂರು ಗ್ರಾ.ಪಂ. ಸಭಾಭವನದಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸುರೇಶ್ ಕುಮಾರ್ ಮಾತನಾಡಿ,
ಉದ್ಯೋಗ ಖಾತ್ರಿ ಯೋಜನೆಯಡಿ ವೈಯಕ್ತಿಕ ಹಾಗೂ ಸಾರ್ವಜನಿಕ ಕಾಮಗಾರಿ ನಿರ್ವಹಣೆ ಸಾಧ್ಯವಿದೆ. ರಸ್ತೆ, ಜಲ ಮರುಪೂರಣ, ಶಾಲೆಗಳಿಗೆ ಆವರಣ ಗೋಡೆ ರಚನೆ, ಕಟ್ಟಡ, ಕೈತೋಟ ರಚನೆಯೂ ಉದ್ಯೋಗ ಖಾತ್ರಿ ಯೋಜನೆಯಡಿ ಮಾಡಲು ಸಾಧ್ಯವಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು. ವೈಯಕ್ತಿಕ ಅಭಿವೃದ್ಧಿಯೊಂದಿಗೆ ಗ್ರಾಮದ ಅಭಿವೃದ್ಧಿಗೆ ಉದ್ಯೋಗ ಖಾತರಿ ಯೋಜನೆಯನ್ನು ಹೆಚ್ಚಾಗಿ ಬಳಸಿಕೊಳ್ಳಬೇಕೆಂದು ಹೇಳಿದರು.
ಗ್ರಾ.ಪಂ. ಅಧ್ಯಕ್ಷ ಸಂತೋಷ್ ಕುಮಾರ್ ಮಾತನಾಡಿ, ಗ್ರಾ.ಪಂ.ಗೆ ಸರಕಾರದಿಂದ ಹೆಚ್ಚಿನ ಅನುದಾನ ಬರುತ್ತಿಲ್ಲ. ಉದ್ಯೋಗ ಖಾತ್ರಿ ಯೋಜನೆಯಡಿ ಅತೀ ಹೆಚ್ಚಿನ ಅಭಿವೃದ್ಧಿ ಕಾಮಗಾರಿ ಮಾಡಲು ಸಾಧ್ಯವಿದೆ. 2019-20ನೇ ಸಾಲಿನ ಪ್ರಥಮ ಹಂತದಲ್ಲಿ ಗ್ರಾಮಸ್ಥರ ಸಹಕಾರದಿಂದ 31 ಲಕ್ಷ ರೂ. ಮೊತ್ತದ ಕಾಮಗಾರಿ ನಡೆದಿದೆ. ಗ್ರಾ.ಪಂ.ಗೆ 5 ಕಿಂಡಿ ಅಣೆಕಟ್ಟು ನಿರ್ಮಾಣದ ಟಾರ್ಗೆಟ್ ನೀಡಲಾಗಿತ್ತು. ಆದರೆ 1 ಕಿಂಡಿ ಅಣೆಕಟ್ಟು ಮಾತ್ರ ನಿರ್ಮಾಣ ಸಾಧ್ಯವಾಗಿದೆ. ಕಿಂಡಿ ಅಣೆಕಟ್ಟು ರಚನೆಗೆ ನರೇಗಾ ಯೋಜನೆಯ ಫಲಾನುಭವಿಗಳು ಒತ್ತು ನೀಡಬೇಕು. ನರೇಗಾ ಯೋಜನೆಯಡಿ ನಿರ್ಮಾಣಗೊಳ್ಳುತ್ತಿರುವ ರಾಜೀವ ಗಾಂಧಿ ಸೇವಾ ಕೇಂದ್ರ ಕಟ್ಟಡದ ಕಾಮಗಾರಿ ಅಂತಿಮ ಹಂತದಲ್ಲಿದ್ದು ಮುಂದೆ ಹಿಂದೂ ರುದ್ರಭೂಮಿಯ ಕಟ್ಟಡ ಕಾಮಗಾರಿ ಮಾಡಲಾಗುವುದು ಎಂದರು.
ಗ್ರಾ.ಪಂ. ಉಪಾಧ್ಯಕ್ಷೆ ಸುಜಾತಾ ಎನ್. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಿಡಿಒ ಪ್ರವೀಣ್ ಕುಮಾರ್ ಸ್ವಾಗತಿಸಿ, ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಗ್ರಾಮ ಸಂಪನ್ಮೂಲ ವ್ಯಕ್ತಿ ರಮೇಶ್ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಸ್ಯರಾದ ಪ್ರಸಿಲ್ಲಾ ಡಿ’ಸೋಜಾ, ಶಶಿತಾ, ಲೀಲಾವತಿ, ಮಾಧವ ಪೂಜಾರಿ, ಗಣೇಶ್ ಕೆ., ತೇಜಕುಮಾರಿ, ರಾಜೇಶ್ ಕುಮಾರ್, ಆನಂದ ಕೆ.ಎಸ್., ಯೋಜನೆಯ ಗ್ರಾಮ ಸಂಪನ್ಮೂಲ ವ್ಯಕ್ತಿಗಳಾದ ಜಯಮಣಿ, ಸುಪ್ರಿಯಾ, ಶ್ವೇತಾಕ್ಷಿ ಸಭೆಯಲ್ಲಿ ಉಪಸ್ಥಿತರಿದ್ದರು. ಸಿಬಂದಿ ರಮೇಶ, ವಿ.ಕೆ. ಮಹಮ್ಮದ್, ಮಮತಾ, ಮೀನಾಕ್ಷಿ ಸಹಕರಿಸಿದರು.
31 ಲಕ್ಷ ರೂ. ಖರ್ಚು
2018ರ ಅ. 1ರಿಂದ 2019ರ ಮಾ. 31ರ ತನಕದ ಪ್ರಥಮ ಹಂತದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾ.ಪಂ.ನಲ್ಲಿ ಒಟ್ಟು 31,00,573 ರೂ. ವೆಚ್ಚ ಮಾಡಲಾಗಿದೆ. ಒಟ್ಟು 104 ಕಾಮಗಾರಿಗಳು ಅನುಷ್ಠಾನಗೊಂಡಿದ್ದು, 16,57,842 ರೂ. ಕೂಲಿ ಮೊತ್ತ ಹಾಗೂ 14,42,731 ರೂ. ಸಾಮಗ್ರಿ ಮೊತ್ತ ಪಾವತಿಯಾಗಿದೆ. 146 ಕುಟುಂಬಗಳ 281 ಮಂದಿ ಕೆಲಸ ಮಾಡಿದ್ದು, 6,658 ಮಾನವ ದಿನ ಸೃಜನೆಯಾಗಿದೆ ಎಂದು ಲೆಕ್ಕ ಪರಿಶೋಧನೆ ನಡೆಸಿದ ಗ್ರಾಮ ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಿದರು.