Advertisement

ಎನ್‌ಎಂಪಿಟಿಯಲ್ಲಿ ಬೋಟ್‌ಗಳಿಗೆ ಅವಕಾಶ: ಆಗ್ರಹ

01:16 AM Sep 22, 2020 | mahesh |

ಪಣಂಬೂರು: ಕರಾವಳಿಯಲ್ಲಿ ವರ್ಷಧಾರೆ ಹಿನ್ನೆಲೆಯಲ್ಲಿ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಬೋಟ್‌ಗಳು ನವ ಮಂಗಳೂರು ಬಂದರಿನಲ್ಲಿ ಆಶ್ರಯ ಪಡೆದಿದ್ದು ಇದೀಗ ತೆರಳುವಂತೆ ಒತ್ತಾಯಿಸಲಾಗುತ್ತಿದೆ. ಸೆ. 24ರ ವರೆಗೆ ರೆಡ್‌ ಅಲರ್ಟ್‌ ಇರುವುದರಿಂದ ತಂಗಲು ಅವಕಾಶ ಕೊಡಬೇಕು ಎಂದು ಟ್ರಾಲ್‌ ಬೋಟ್‌ ಪರ್ಸಿನ್‌ ಮೀನುಗಾರರ ಸಂಘದ ಅಧ್ಯಕ್ಷ ಶಶಿ ಕುಮಾರ್‌ ಬೆಂಗ್ರೆ ಆಗ್ರಹಿಸಿದ್ದಾರೆ.

Advertisement

ರೆಡ್‌ ಅಲರ್ಟ್‌ಗೂ ಮುಂಚೆ ಮಂಗಳೂರಿನಿಂದ ಆಳಸಮುದ್ರಕ್ಕೆ ತೆರಳಿದ್ದ ಬೋಟ್‌ಗಳು ಹವಾಮಾನ ವೈಪರೀತ್ಯವಾದಾಗ ಎನ್‌ಎಂಪಿಟಿ ಆಶ್ರಯ ಪಡೆದಿದ್ದವು. ಇದೀಗ ದಿಢೀರ್‌ ಆಗಿ ಯಾವುದೇ ಕಾರಣ ನೀಡದೆ ಹೊರ ಹೋಗುವಂತೆ ಹೇಳಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ದೇಶದ ರಕ್ಷಣೆಗೆ ಮೀನುಗಾರರು ಸದಾ ಬದ್ಧರು. ಮೀನುಗಾರರು ಬೋಟ್‌ನಲ್ಲಿಯೇ ಇರುತ್ತಾರೆ. ಬಂದರಿಗೆ ಅವರಿಂದ ಯಾವುದೇ ತೊಂದರೆಯಾಗದು ಎಂದು ಹೇಳಿದ್ದಾರೆ.

ಸದ್ಯ ಅನಿವಾರ್ಯ
ಅಳಿವೆ ಬಾಗಿಲಿನಲ್ಲಿ ಸಮುದ್ರ ಬಿರುಸಾಗಿರುವುದರಿಂದ ಮೀನುಗಾರಿಕಾ ಬಂದರಿಗೆ ಮರಳುವುದು ಅಸಾಧ್ಯ. ಈ ನಿಟ್ಟಿನಲ್ಲಿ 175ಕ್ಕೂ ಮಿಕ್ಕಿ ಅಳಸಮುದ್ರ ದೋಣಿಗಳು ಎನ್‌ಎಂಪಿಟಿಯಲ್ಲಿ ಆಶ್ರಯ ಪಡೆದಿದ್ದು 1,500ಕ್ಕೂ ಮಿಕ್ಕಿ ಮೀನುಗಾರರು ಇದ್ದಾರೆ. ಸೆ. 24ರವರೆಗೆ ರೆಡ್‌ ಅಲರ್ಟ್‌ ಘೋಷಣೆ ಇರುವುದರಿಂದ ಸುರಕ್ಷೆ ಅಗತ್ಯವಾಗಿದ್ದು ಜೀವ ಹಾನಿ, ಲಕ್ಷಾಂತರ ರೂ. ಮೌಲ್ಯದ ಬೋಟಿಗೆ ಹಾನಿಯಾಗದಂತೆ ಇಲ್ಲೇ ಇರುವುದು ಸದ್ಯದ ಮಟ್ಟಿಗೆ ಅನಿವಾರ್ಯ. ಬಂದರಿನ ಅಮಾನವೀಯ ನಿರ್ಧಾರದ ವಿರುದ್ಧ ಮೀನುಗಾರಿಕಾ ಸಚಿವರಿಗೆ, ಸಂಸದರಿಗೆ ದೂರು ನೀಡಿದ್ದೇವೆ.
– ಮೋಹನ್‌ ಬೆಂಗ್ರೆ, ನಿಕಟಪೂರ್ವ ಅಧ್ಯಕ್ಷ, ಪರ್ಸಿನ್‌ ಮೀನುಗಾರರ ಸಂಘ ಮಂಗಳೂರು

ಮಾನವೀಯ ನೆಲೆಯಲ್ಲಿ ಬಿಟ್ಟಿದ್ದವು
ಸಮುದ್ರ ಹವಾಮಾನ ವೈಪರೀತ್ಯದಿಂದ ಪ್ರಕ್ಷುಬ್ಧಗೊಳ್ಳಲಿದೆ ಎಂಬ ಮಾಹಿತಿ ಇದ್ದುದರಿಂದ ನಾವು ಮೀನುಗಾರಿಕಾ ಇಲಾಖೆಗೆ ಕಳೆದ ಒಂದು ತಿಂಗಳ ಹಿಂದೆಯೇ ಪತ್ರ ಬರೆದು ಸೂಕ್ತ ಡೇಟಾ ಸಂಗ್ರಹಿಸಿ ಮೀನುಗಾರರ ಮಾಹಿತಿ ಇಟ್ಟುಕೊಂಡು ಹಂಚಿಕೊಳ್ಳಿ ಎಂದು ಹೇಳಿದ್ದೆವು. ಅಂತಾರಾಷ್ಟ್ರೀಯ ಸುರಕ್ಷಾ ನಿಯಮದ ಪ್ರಕಾರ ಇಂಟರ್‌ನ್ಯಾಶನಲ್‌ ಶಿಪ್‌ ಆಂಡ್‌ ಪೋರ್ಟ್‌ ಸೇಫ್ಟಿ ಸರ್ಟಿಫಿಕೇಟ್‌ ಕೇಂದ್ರದ ಗೃಹ ಇಲಾಖೆಯದ್ದು ಹೊಂದಿರಬೇಕಾಗುತ್ತದೆ. ಇದು ಅಂತಾರಾಷ್ಟ್ರೀಯ ಸುರಕ್ಷತೆಯ ದಾಖಲೆಯೂ ಹೌದು. ಆದರೆ ಮೀನುಗಾರರು ಏಕಾಏಕಿ ದಾಖಲೆ ಇಲ್ಲದೆ ಒಳ ಬರುವುದರಿಂದ ಭದ್ರತೆಗೆ ಧಕ್ಕೆಯಾಗುತ್ತದೆ. ಇದರಿಂದ ಅಂತಾರಾಷ್ಟ್ರೀಯ ಹಡಗುಗಳು ಬರಲು ಹಿಂದೇಟು ಹಾಕುತ್ತವೆ. ಮಾನವೀಯ ನೆಲೆಯಲ್ಲಿ ಜೀವ ರಕ್ಷಣೆಗಾಗಿ ನಾವು ಮೀನುಗಾರರನ್ನು ಒಳಬಿಟ್ಟಿದ್ದೆವು.
– ಎ.ವಿ. ರಮಣ, ಚೇಯರ್‌ಮನ್‌, ಎನ್‌ಎಂಪಿಟಿ

Advertisement

Udayavani is now on Telegram. Click here to join our channel and stay updated with the latest news.

Next