Advertisement

ತೆಂಗು ಮಾರಾಟಕ್ಕೆ ಎಪಿಎಂಸಿ ಕೇಂದ್ರಗಳಲ್ಲಿ ಅವಕಾಶ

10:40 PM Apr 17, 2020 | Sriram |

ಉಡುಪಿ: ಎಪಿಎಂಸಿ ಪರವಾನಿಗೆ ಹೊಂದಿದ ಡೀಲರ್ ಗಳಲ್ಲಿ, ಎಣ್ಣೆಮಿಲ್‌ಗ‌ಳಲ್ಲಿ ಕೃಷಿ ಉತ್ಪನ್ನ ತೆಂಗು ಖರೀದಿ ಮತ್ತು ಮಾರಾಟಕ್ಕೆ ಅವಕಾಶವಿದೆ. ಇಷ್ಟಿದ್ದರೂ ಸಾಗಾಟ ವಿಷಯದಲ್ಲಿರುವ ಗೊಂದಲದಿಂದ ತೆಂಗು ಬೆಳೆಗಾರರು ಮಾರಾಟ ಕೇಂದ್ರಕ್ಕೆ ಬಾರದಂತಾಗಿದೆ.

Advertisement

ಜಿಲ್ಲೆಯಲ್ಲಿ 1.5 ಲಕ್ಷ ಮಂದಿ ತೆಂಗು ಬೆಳೆಗಾರರಿದ್ದಾರೆ. 11 ಲಕ್ಷ ತೆಂಗಿನ ಮರಗಳಿವೆ. ಬೆಳೆಗಾರರು ಮಳೆ ಬರುವುದರೊಳಗೆ ತಮ್ಮ ತೆಂಗಿನಕಾಯಿಗಳನ್ನು ಮಾರಿ ಆದಾಯ ಗಳಿಸುವುದು ವಾಡಿಕೆ. ಆದರೆ ಲಾಕ್‌ ಡೌನ್‌ ಕಾರಣದಿಂದ ಅದು ಸಾಧ್ಯವಾಗುತ್ತಿಲ್ಲ. ಈಗ ಎಪಿಎಂಸಿ ಕೇಂದ್ರಗಳಲ್ಲಿ ಸಿದ್ಧವಿದ್ದರೂ, ಸಾಗಾಟದ ಗೊಂದಲ ಬಗೆಹರಿದಿಲ್ಲ.

ಖರೀದಿ- ಮಾರಾಟಕ್ಕೆ ಅವಕಾಶ
ಸರಕಾರ ರೈತರಿಗೆ ಲಾಕ್‌ಡೌನ್‌ ವಿಸ್ತರಣೆ ವೇಳೆ ಕೆಲವು ವಿನಾಯಿತಿ ನೀಡಿದ್ದು, ಕೃಷಿ ಉತ್ಪನ್ನ ಮಾರಾಟ ಸಾಗಾಟಕ್ಕೆ ಯಾವುದೇ ತೊಂದರೆಗಳಿರಲಿಲ್ಲ. ಕೃಷಿ ಉತ್ಪನ್ನ ಪಟ್ಟಿಯಲ್ಲಿ ತೆಂಗು ಸೇರಿರುವುದರಿಂದ ಜಿಲ್ಲಾದ್ಯಂತ ಎಪಿಎಂಸಿ ಪರವಾನಿಗೆ ಹೊಂದಿದ ಕೇಂದ್ರಗಳಲ್ಲಿ ಖರೀದಿಗೆ ಸಿದ್ಧವಿದೆ. ಬೆಳಗ್ಗೆ 7ರಿಂದ 11 ಗಂಟೆ ತನಕ ಖರೀದಿಗೆ ಅವಕಾಶ ನೀಡಲಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಭುವನೇಶ್ವರಿ ತಿಳಿಸಿದ್ದಾರೆ.

ರೈತರ ಹಿಂದೇಟು
ಉಡುಪಿ, ಕಾರ್ಕಳ, ಕುಂದಾಪುರ ತಾಲೂಕುಗಳಲ್ಲಿ ಎಪಿಎಂಸಿ ಕೇಂದ್ರಗಳಿವೆ. ತೆಂಗು ಬೆಳೆಗಾರರು ಗುರುತಿನ ಚೀಟಿ, ಆರ್‌ಟಿಸಿ ಪಹಣಿ ಪತ್ರ ತೋರಿಸಿದರೆ ಮಾರಾಟ-ಖರೀದಿಗೆ ಏನೂ ಅಡ್ಡಿಯಿಲ್ಲ. ಆದರೇ, ತೆಂಗು ಬೆಳೆಗಾರರು ಕೇಂದ್ರಗಳತ್ತ ಬರುತಿಲ್ಲ. ಲಾಕ್‌ಡೌನ್‌ ಬಿಗು ನಿಯಮಾ ವಳಿಗಳಿಗೆ ಹೆದರಿ ರೈತರು ಫ‌ಲವಸ್ತುಗಳನ್ನು ತರುತ್ತಿಲ್ಲ. ವಾಹನಗಳಿಗೆ ತುಂಬಿಸಿ ಕೊಂಡೊಯ್ಯವಾಗ ರಸ್ತೆಯಲ್ಲಿ ಪೊಲೀಸರು ತಡೆದರೆ ವಾಪಸು ಬರಬೇಕಾದೀತು. ಅದೇ ಭಯ ಎನ್ನುತ್ತಾರೆ ರೈತರು.

ಕಿಸಾನ್‌ ಸಂಘ ಮನವಿ
ತೆಂಗು ಬೆಳೆಗಾರರು ಮಳೆಗಾಲಕ್ಕೆ ಮೊದಲು ಎಪ್ರಿಲ್‌, ಮೇ ತಿಂಗಳಲ್ಲಿ ಮಾರುವುದು ಸಾಮಾನ್ಯ ಪ್ರಕ್ರಿಯೆ. ಈ ಬಾರಿ ಅಂಗಡಿಗಳೆಲ್ಲ ಮುಚ್ಚಿರುವ ಕಾರಣ ಕೆಲ ವ್ಯಾಪಾರಸ್ಥರು ಕಡಿಮೆ ದರಕ್ಕೆ ಮಾರುತ್ತಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ತೆಂಗು ಖರೀದಿಗೆ ಅವಕಾಶ ಮಾಡಿಕೊಡಬೇಕು ಅನ್ನುವ ಬೇಡಿಕೆ ಸಹಿತ ಎಲ್ಲ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಖರೀದಿಗೆ ಅವಕಾಶ ಕಲ್ಪಿಸುವಂತೆ ಭಾ.ಕಿ.ಸಂ. ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದೆ.

Advertisement

ತರಕಾರಿ ಹಾಗೂ ಹಣ್ಣು- ಹಂಪಲು ಗಳಿಗೆ ಚಿಲ್ಲರೆ ಅಂಗಡಿಗಳಲ್ಲಿ ಖರೀದಿಗೆ ಅವಕಾಶವಿದ್ದು, ತೆಂಗಿನ ಕಾಯಿಗೆ ಎಪಿಎಂಸಿ ಪರವಾನಿಗೆ ಹೊಂದಿದ ಕೇಂದ್ರಗಳಲ್ಲಿ ಮಾತ್ರ ಅವಕಾಶ ಕಲ್ಪಿಸ ಲಾಗಿದೆ. ತೆಂಗಿನಕಾಯಿಗಳು ಬೇಗನೇ ಹಾಳಾಗುವುದಿಲ್ಲ ಎಂಬ ಕಾರಣಕ್ಕೆ ಚಿಲ್ಲರೆ ಅಂಗಡಿಗಳಲ್ಲಿ ಮಾರಲು ಅವಕಾಶ ನೀಡಲಾಗಿಲ್ಲ ಎನ್ನಲಾಗುತ್ತಿದೆ.

ತೆಂಗು ಬೆಳೆಗಾರರಲ್ಲಿ ಆತಂಕ ಬೇಡ
ಕೃಷಿ ಉತ್ಪನ್ನ ಮಾರಾಟ ಮತ್ತು ಖರೀದಿಗೆ ಅವಕಾಶವಿದೆ. ಅದರಂತೆ ತೆಂಗಿನಕಾಯಿ ಮಾರಾಟಕ್ಕೆ ಎಪಿಎಂಸಿ ಪರವಾನಿಗೆ ಹೊಂದಿದ ಕೇಂದ್ರಗಳಲ್ಲಿ ಖರೀದಿ ಮಾರಾಟ ಮಾಡಬಹುದು. ಕೃಷಿ ಉತ್ಪನ್ನ ಮಾರಾಟಗಾರರನ್ನು ತಡೆಯದಂತೆ ಪೊಲೀಸರಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಹೀಗಾಗಿ ಕೃಷಿಕರು ಆತಂಕವಿಲ್ಲದೆ ನಿಗದಿಪಡಿಸಿದ ಸ್ಥಳ ಮತ್ತು ಅವಧಿಯಲ್ಲಿ ಖರೀದಿ-ಮಾರಾಟದಲ್ಲಿ ತೊಡಗಬಹುದು.
-ಜಿ. ಜಗದೀಶ್‌ ಜಿಲ್ಲಾಧಿಕಾರಿಗಳು, ಉಡುಪಿ

ನಿಮ್ಮ ಬೆಳೆ ಮಾಹಿತಿ ನೀಡಿ
ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸಾವಿರಾರು ರೈತರು ತಾವು ಬೆಳೆದ ತರಕಾರಿ, ಹಣ್ಣು ಹಾಗೂ ಆಹಾರ ಬೆಳೆಗಳನ್ನು ಮಾರಲಾಗದೇ ಸಂಕಷ್ಟದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಉದಯವಾಣಿಯು ಗ್ರಾಹಕರೊಂದಿಗೆ ಸಂಪರ್ಕ ಕಲ್ಪಿಸಲು ಮುಂದಾಗಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ರೈತರು, ತರಕಾರಿ ಬೆಳೆಗಾರರು ಈ ಅಂಕಣದ ಪ್ರಯೋಜನ ಪಡೆಯಬಹುದು. ತಮ್ಮ ಬೆಳೆ ಹಾಗೂ ಸಂಪರ್ಕ ಸಂಖ್ಯೆಯನ್ನು ನಮ್ಮ ವಾಟ್ಸಪ್‌ಗೆ ಕಳಿಸಿದರೆ ಪ್ರಕಟಿಸಲಾಗುವುದು. ನೀಡಬೇಕಾದ ಮಾಹಿತಿ: ಹೆಸರು, ಉತ್ಪನ್ನದ ಹೆಸರು, ಲಭ್ಯವಿರುವ ಬೆಳೆ ಪ್ರಮಾಣ, ಊರಿನ ಹೆಸರು, ಸಂಪರ್ಕ ಸಂಖ್ಯೆ, ಉತ್ಪನ್ನದ ಬೆಲೆ.

ವಾಟ್ಸಪ್‌ ಸಂಖ್ಯೆ: 76187 74529

Advertisement

Udayavani is now on Telegram. Click here to join our channel and stay updated with the latest news.

Next