Advertisement
ಮಂಗಳೂರಿನ ಬೋಳದ ರಂಜೇಶ್ ಶೆಟ್ಟಿ ಅವರು ಕಿಡ್ನಿ, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಕೊರೊನಾ ಪಾಸಿಟಿವ್ ಬಂದು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದರು. ಆದರೆ, ಗಂಭೀರ ಸ್ಥಿತಿಯಲ್ಲಿದ್ದ ಕಾರಣ ಐಸಿಯುವಿಗೆ ದಾಖಲು ಮಾಡುವಂತೆ ವೈದ್ಯರು ತಿಳಿಸಿದ್ದಾರೆ. ಬಡ ಕುಟುಂಬವಾದ ಕಾರಣ ಹಣ ಹೊಂದಿಸಲು ಕಷ್ಟಪಡುತ್ತಿದ್ದ ಅವರ ಪತ್ನಿ ಗೀತಾ ಅವರ ನೆರವಿಗೆ ಬಂದದ್ದು, ಸಾಮಾಜಿಕ ಕಾರ್ಯಕರ್ತ ಆಸಿಫ್ ಆಪತ್ಭಾಂಧವ. ಆಸಿಫ್ ಅವರು ತಮ್ಮ ಮೊಬೈಲ್‌ನಲ್ಲಿ ಗೀತಾ ಅವರ ಮನವಿಯನ್ನು ವೀಡಿಯೋ ಮಾಡಿ, ಬ್ಯಾಂಕ್ ಖಾತೆ ಸಂಖ್ಯೆ, ಮೊಬೈಲ್ ಸಂಖ್ಯೆಯೊಂದಿಗೆ ಸಾಮಾಜಿಕ ತಾಣಗಳಲ್ಲಿ ಹರಿಯಬಿಟ್ಟಿದ್ದರು. ಆಸಿಫ್ ವೀಡಿಯೋ ನೋಡಿದ ಹಲವಾರು ಮಂದಿ ಗೀತಾ ಮನವಿಗೆ ಸ್ಪಂದಿಸಿದ್ದು, ಒಂದೇ ದಿನದಲ್ಲಿ 14 ಲಕ್ಷ ರೂ. ಗೀತಾ ಅವರ ಖಾತೆಗೆ ಜಮಾಯಿಸಿದ್ದಾರೆ.
ಗಂಭೀರ ಸ್ಥಿತಿಯಲ್ಲಿದ್ದ ಪತಿಯನ್ನು ಹೇಗಾದರೂ ಉಳಿಸಿಕೊಳ್ಳಬೇಕೆಂಬ ಗೀತಾ ಅವರ ಮನವಿ ವಿಧಿಗೆ ಕೇಳಿಸಲೇ ಇಲ್ಲ. ಮಂಗಳವಾರ ಆಸ್ಪತ್ರೆಗೆ ದಾಖಲಾಗಿದ್ದ ಗೀತಾರ ಪತಿ ರಂಜೇಶ್ ಶೆಟ್ಟಿ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಸಂಜೆ ಪ್ರಾಣ ಕಳೆದುಕೊಂಡಿದ್ದಾರೆ. ತಂದೆಯ ಅಗಲಿಕೆಯಿಂದ ಪುಟ್ಟ ಮಗನೂ ದುಃಖದ ಮಡುವಿನಲ್ಲಿದ್ದಾನೆ.