ತುಮಕೂರು/ಚಿತ್ರದುರ್ಗ: ವಿಧಾನಸಭಾ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿದ್ದರೂ ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಅನುಕೂಲ ಸಿಂಧು ರಾಜಕಾರಣದಿಂದ ಸರ್ಕಾರ ರಚಿಸಲು ಆಗಲಿಲ್ಲ. ಆದ್ದರಿಂದ ಜನಾಶೀರ್ವಾದಕ್ಕೆಮನ್ನಣೆ ನೀಡಿ ವಿರೋಧ ಪಕ್ಷದಲ್ಲೇ ಕೂರುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ
ಬಿ.ಎಸ್. ಯಡಿಯೂರಪ್ಪ ತಿಳಿಸಿದರು.
ತುಮಕೂರು ಹಾಗೂ ಚಿತ್ರದುರ್ಗಗಳಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಗೊಂದಲ ಮುಂದುವರೆದಿದೆ. ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಸಚಿವ ಸಂಪುಟ ರಚನೆ ಬಳಿಕ ಪರಿಸ್ಥಿತಿ ಗೊತ್ತಾಗುತ್ತದೆ. ಅಲ್ಲಿಯವರೆಗೂ ಕಾದು ನೋಡೋಣ. ರಾಜ್ಯದ ಆರು ಕೋಟಿ ಜನರ ವಿರುದ್ಧವಾಗಿರುವ ಅವಕಾಶವಾದಿ ರಾಜಕಾರಣ ನಡೆಯುತ್ತಿದೆ. ಇದೆಲ್ಲವನ್ನು ರಾಜ್ಯದ ಜನ ಗಮನಿಸುತ್ತಿದ್ದಾರೆ. ಜನರ ಒಪ್ಪಿಗೆ ಇಲ್ಲದೆ ನಡೆಯುತ್ತಿರುವ ಅವಕಾಶವಾದಿ ಮೈತ್ರಿ ಕೂಟದ ರಾಜಕಾರಣಕ್ಕೆ ಶೀಘ್ರದಲ್ಲಿಯೇ ಅಂತ್ಯ ಬೀಳಲಿದೆ ಎಂದು ಭವಿಷ್ಯ ನುಡಿದರು.
ಸಮ್ಮಿಶ್ರ ಸರ್ಕಾರದಲ್ಲಿ ಸಾಕಷ್ಟು ಗೊಂದಲ ಇರುವುದರಿಂದ ರಾಜ್ಯದ ಅಭಿವೃದಿಟಛಿ ಕುಂಠಿತವಾಗಲಿದೆ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನಡವಳಿಕೆ, ಆಡಳಿತ ವೈಖರಿ ಬೇಸರ ಮೂಡಿಸಿದೆ. ಈ ಹಿಂದೆ 20 ತಿಂಗಳ ಆಡಳಿತದ ಅನುಭವ ನಮಗಾಗಿದೆ. ತಂದೆ-ಮಕ್ಕಳು ನೀಡಿದ ಹಿಂಸೆ ತಾಳದೆ ರಾಜೀನಾಮೆ ಬಿಸಾಕಿ ಜನಾದೇಶ ಪಡೆದು ಮತ್ತೆ ಮುಖ್ಯಮಂತ್ರಿಯಾದೆ ಎಂದರು.
ಕಾಂಗ್ರೆಸ್ ಸಭೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಗೈರಾಗಿರುವುದು ಆ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದಕ್ಕೆ ಸಾಕ್ಷಿ. ನಾವೀಗ ಏನೇ ಹೇಳಿದರೂ ಅಪಾರ್ಥ ಕಲ್ಪಿಸುವ ಸಾಧ್ಯತೆ ಇದೆ. ಹಾಗಾಗಿ ಕಾಂಗ್ರೆಸ್‌ನಲ್ಲಿನ ಬೆಳವಣಿಗೆಗಳ ಬಗ್ಗೆ ಹೆಚ್ಚು ಮಾತನಾಡಲಾರೆ ಎಂದರು.
ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಉತ್ತಮ ಆಡಳಿತ ನಡೆಸುತ್ತಿದ್ದು, 2025ರ ವೇಳೆಗೆ ನವಭಾರತ ನಿರ್ಮಾಣ ಮಾಡಲು ಹೊರಟಿದ್ದಾರೆ. ಅಂತೆಯೇ ರಾಜ್ಯವನ್ನೂ ನವ ಕರ್ನಾಟಕವನ್ನಾಗಿ ನಿರ್ಮಾಣ ಮಾಡಲು ಬಿಜೆಪಿಯನ್ನು ಬೆಂಬಲಿಸಲೇಬೇಕಾಗಿದೆ ಎಂದರು.