ಬೆಂಗಳೂರು: ಕಳೆದ ಲೋಕಸಭೆ ಚುನಾವಣೆಯಲ್ಲಿ ಇವಿಎಂ ದುರುಪಯೋಗದ ಬಗ್ಗೆ ಅನುಮಾನವಿದೆ. ಇವಿಎಂ ವಿರುದ್ಧ ಎಲ್ಲ ರಾಜಕೀಯ ಪಕ್ಷಗಳು ಒಂದಾಗಬೇಕೆಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಪಕ್ಷದ ಕಚೇರಿಯಲ್ಲಿ ನಡೆದ ಹಿಂದುಳಿದ ವರ್ಗಗಳ ಘಟಕದ ಕಾರ್ಯಕಾರಿಣಿಯಲ್ಲಿ ಪಾಲ್ಗೊಂಡು ಮಾತನಾಡಿ, ಮುಂದುವರಿದ ರಾಷ್ಟ್ರಗಳಾದ ಅಮೆರಿಕ, ಯುರೋಪ್, ರಷ್ಯಾಗಳಲ್ಲಿ ಇವಿಎಂ ಬಳಕೆ ತಿರಸ್ಕಾರ ಮಾಡಿದ್ದಾರೆ. ನಮ್ಮ ದೇಶದಲ್ಲಿಯೂ ಚುನಾವಣಾ ಆಯೋಗ ಇವಿಎಂ ಬಳಕೆ ಬದಲಾಯಿಸಿ, ಬ್ಯಾಲೆಟ್ ಪೇಪರ್ ಬಳಸಬೇಕೆಂದು ತಿಳಿಸಿದರು. ನಾನು ಅಧಿಕಾರದಲ್ಲಿದ್ದಿದ್ದರೆ ಇವಿಎಂ ಬಳಕೆ ನಿಷೇಧಿಸುತ್ತಿದ್ದೆ.
ಇವಿಎಂ ವಿರುದ್ಧ ಎಲ್ಲ ರಾಜಕೀಯ ಪಕ್ಷಗಳು ಒಂದಾಗಬೇಕು. ಕಾಂಗ್ರೆಸ್ ಇದರ ನೇತೃತ್ವ ವಹಿಸಿಕೊಳ್ಳಲಿದೆ ಎಂದರು. ಇದೇ ವೇಳೆ, ಕೇಂದ್ರ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದ ಅವರು, ಪ್ರಧಾನಿ ನರೇಂದ್ರ ಮೋದಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ದೇಶದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೇ ರಾಷ್ಟ್ರೀಯ ಪಕ್ಷಗಳಿರುವುದು. ಕಾಂಗ್ರೆಸ್ ಮುಗಿಸಿದರೆ ಎಲ್ಲವನ್ನೂ ಮುಗಿಸಿದಂತಾಗುತ್ತದೆ ಎಂದುಕೊಂಡಿದ್ದಾರೆ. ಆದರೆ, ಯಾವುದೇ ಕಾರಣಕ್ಕೂ ಅದು ಸಾಧ್ಯವಿಲ್ಲ ಎಂದರು.
ದೇಶದ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಹಾಳಾಗಿದೆ. ಕೇಂದ್ರ ಸರ್ಕಾರ ನೀಡಿರುವ ಮಾಹಿತಿಯ ಪ್ರಕಾರವೇ ಜಿಡಿಪಿ ಶೇ.5ರಷ್ಟಿದೆ. ವಾಸ್ತವವಾಗಿ ಶೇ.3ರಷ್ಟು ಮಾತ್ರ ದೇಶದ ಜಿಡಿಪಿ ಇದೆ. ನೋಟ್ ಬ್ಯಾನ್, ಜಿಎಸ್‌ಟಿಯಂತಹ ಕೇಂದ್ರ ಸರ್ಕಾರದ ಕೆಟ್ಟ ಆರ್ಥಿಕ ನೀತಿಗಳಿಂದಾಗಿ ಸಣ್ಣ ಕೈಗಾರಿಕೆಗಳು ಸೇರಿ ಬಹುತೇಕ ಕೈಗಾರಿಕೆಗಳು ಮುಚ್ಚಿ ಹೋಗಿವೆ. ಇದಕ್ಕೆಲ್ಲ ಪ್ರಧಾನಿ ನರೇಂದ್ರ ಮೋದಿ ನೇರ ಕಾರಣ. ಈಗ ದೇಶ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ನೆನಪಿಸಿಕೊಳ್ಳುತ್ತಿದೆ ಎಂದು ಹೇಳಿದರು.
ರಾಜ್ಯ ಸರ್ಕಾರದ ವಿರುದ್ಧವೂ ವಾಗ್ಧಾಳಿ ನಡೆಸಿದ ಸಿದ್ದರಾಮಯ್ಯ, ಯಡಿಯೂರಪ್ಪ ಜನಾದೇಶದಿಂದ ಮುಖ್ಯಮಂತ್ರಿಯಾಗಿಲ್ಲ. ಅವರು ಇನ್ನೆಷ್ಟು ದಿನ ಮುಖ್ಯಮಂತ್ರಿಯಾಗಿರುತ್ತಾರೆಯೋ ಗೊತ್ತಿಲ್ಲ. ಹಾಲು ಕುಡಿದ ಮಕ್ಕಳೇ ಬದುಕುವುದಿಲ್ಲ. ವಿಷ ಕುಡಿದ ಮಕ್ಕಳು ಬದುಕುತ್ತಾರಾ ಎಂದು ಪ್ರಶ್ನಿಸಿದರು. ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಲಕ್ಷ್ಮೀನಾರಾಯಣ ಹಾಜರಿದ್ದರು.
ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾಗೆ ಇಷ್ಟವಿರಲಿಲ್ಲ. ವಿಧಾನಸಭಾಧ್ಯಕ್ಷ, ರಾಜ್ಯಾಧ್ಯಕ್ಷರ ನೇಮಕ ವಿಚಾರದಲ್ಲಿ ಹೈಕಮಾಂಡ್ ಯಡಿಯೂರಪ್ಪ ಮನವಿಗೆ ಮಾನ್ಯತೆ ನೀಡಿಲ್ಲ. ಯಡಿಯೂರಪ್ಪ ಅವರನ್ನು ಕಟ್ಟಿ ಹಾಕಲು ಮೂವರು ಉಪ ಮುಖ್ಯಮಂತ್ರಿಗಳನ್ನಾಗಿ ಮಾಡಿದ್ದಾರೆ. 34 ಜನರನ್ನೂ ಡಿಸಿಎಂ ಮಾಡಲಿ. ಅದರಿಂದ ಆಡಳಿತಕ್ಕೆ ಯಾವುದೇ ಅನುಕೂಲವಾಗುವುದಿಲ್ಲ. ಸರ್ಕಾರದ ವೆಚ್ಚ ಹೆಚ್ಚಾಗುತ್ತದೆ.
-ಸಿದ್ದರಾಮಯ್ಯ, ಮಾಜಿ ಸಿಎಂ