ಬೆಂಗಳೂರು: ಕೇಂದ್ರ ಸರ್ಕಾರದ ನೂತ ಹಾಲ್‌ಮಾರ್ಕ್ ನೀತಿಗೆ ಕರ್ನಾಟಕ ಜ್ಯುವೆಲ್ಲರ್ಸ್ ಅಸೋಸಿಯೇಷನ್ ಆಕ್ಷೇಪ ವ್ಯಕ್ತಪಡಿಸಿದೆ. ಆಭರಣ ಕ್ಷೇತ್ರದಲ್ಲಿ ಪಾರದರ್ಶಕತೆ ತರಲು “ಹಾಲ್ ಮಾರ್ಕಿಂಗ್ ಯೂನಿಕ್ ಐಡಿ’ ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದ್ದು ಇದನ್ನು ಕರ್ನಾಟಕ ಜ್ಯುವೆಲ್ಲರಿ ಅಸೋಸಿಯೇಷನ್ ವಿರೋಧಿಸಿದೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಕರ್ನಾಟಕ ಜ್ಯುವೆಲ್ಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಟಿ.ಎ.ಶರವಣ, ಹಾಲ್ ಮಾರ್ಕಿಂಗ್ ವ್ಯವಸ್ಥೆಯನ್ನು ನಾವು ಸ್ವಾಗತಿಸುತ್ತೇವೆ. ಆದರೆ ಯೂನಿಕ್ ಐಡಿ ವ್ಯವಸ್ಥೆಯನ್ನು ವಿರೋಧಿಸುತ್ತೇವೆ. ಈ ವ್ಯವಸ್ಥೆಯಿಂದ ಆಭರಣ ವ್ಯಾಪಾರಿಗಳಿಗೆ ಮತ್ತು ಗ್ರಾಹಕರಿಗೆ ತೊಂದರೆ ಉಂಟಾಗಲಿದೆ ಎಂದು ಹೇಳಿದರು.
ಯೂನಿಕ್ ಐಡಿ ವ್ಯವಸ್ಥೆಯಿಂದ ಗ್ರಾಹಕರಿಗೆ ಕಿರಿಕಿರಿ ಉಂಟಾಗಲಿದೆ. ಗ್ರಾಹಕರ ಮತ್ತು ಆಭರಣ ಖರೀದಿದಾರರ ನಡುವಿನ ಬಾಂಧವ್ಯಕ್ಕೆ ಧಕ್ಕೆ ಉಂಟಾಗಲಿದೆ. ಎಲ್ಲದಕ್ಕೂ ಮಿಗಿಲಾಗಿ ಖರೀದಿದಾರರ ಖಾಸಗಿ ತನಕ್ಕೆ ಧಕ್ಕೆ ಉಂಟಾಗಲಿದೆ. ಆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ನೂತನ ಹಾಲ್ ಮಾರ್ಕ್ ನೀತಿಯನ್ನು ವಿರೋಧಿಸುತ್ತಿರುವುದಾಗಿ ತಿಳಿಸಿದರು.
ಈ ವ್ಯವಸ್ಥೆಯನ್ನು ಜಾರಿ ಮಾಡಿ ಕೇಂದ್ರ ಸರ್ಕಾರ ಪರೋಕ್ಷವಾಗಿ ಮಾನಸಿಕ ಒತ್ತಡ ಹೇರುವ ಜತೆಗೆ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗುವಂತಾಗಲು ಸರ್ಕಾರವೇ ಅನುವು ಮಾಡಿಕೊಟ್ಟಂತಿದೆ. ಕೆಲವು ತುರ್ತು ಸಂದರ್ಭದಲ್ಲಿ ಮದುವೆ ಮತ್ತಿತರರ ಸಮಾರಂಭಗಳಿಗೆ ಮಾಂಗಲ್ಯ, ಬಳೆ, ಉಂಗುರ ಮತ್ತಿತರರ ಆಭರಣಗಳನ್ನು ಖರೀದಿಸಲು ಗ್ರಾಹಕರಿಗೆ ತೊಂದರೆ ಆಗುತ್ತಿದೆ ಎಂದು ದೂರಿದರು.
ಆಭರಣ ವ್ಯಾಪಾರಿಗಳು 2ಲಕ್ಷ ರೂ.ಗೂ ಹೆಚ್ಚು ಮೊತ್ತದ ಖರೀದಿ ಮಾಡುವವರಿಂದ ಸೂಕ್ತ ದಾಖಲೆ ಪಡೆದು ಆಭರಣ ಮಾರಾಟ ಮಾಡಲಾಗುತ್ತದೆ. ಕೇಂದ್ರ ಸರ್ಕಾರದ ಈ ಆದೇಶದ ವಿರುದ್ಧ ಆಭರಣ ಅಸೋಸಿಯೇಷನ್ ನ್ಯಾಯಾಲಯದ ಮೆಟ್ಟಿಲನ್ನು ಏರಲಿದೆ ಎಂದು ಹೇಳಿದರು. ಜ್ಯುವೆಲ್ಲರಿ ಅಸೋಸಿಯೇಷನ್ ಬೆಂಗಳೂರು ಅಧ್ಯಕ್ಷ ವೈ.ಎಸ್.ರವಿಕುಮಾರ್, ಕೇಂದ್ರ ಸರ್ಕಾರ ಈ ವ್ಯವಸ್ಥೆಯನ್ನು ಜಾರಿಗೊಳಿಸುವ ಮೊದಲು ಇದರ ಸಾಧಕ ಬಾಧಕಗಳ ಬಗ್ಗೆ ಸರ್ಕಾರ ಗಮನಹರಿಸಬೇಕಾಗಿತ್ತು. ಆಭರಣ ಹಾಲ್ ಮಾರ್ಕ್ ಕೇಂದ್ರಗಳನ್ನು ಸೂಸುತ್ರವಾಗಿ ತೆರೆದು ಆ ನಂತರ ಹಾಲ್‌ಮಾರ್ಕ್ ಐಡಿ ಜಾರಿಗೆ ಮುಂದಾಗಬೇಕಾಗಿತ್ತು ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಜನವಿರೋಧಿ ಹಾಲ್‌ಮಾರ್ಕ್ ಪದ§ತಿಯನ್ನು ಹಿಂಪಡಯಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇದರ ವಿರುದ್ಧ ಬೀದಿ ಹೋರಾಟ ನಡೆಸುವುದಾಗಿ ಎಚ್ಚರಿಸಿದರು. ಸಂಘದ ಪದಾಧಿಕಾರಿಗಳಾದ ರವಿಕುಮಾರ್,ಪ್ರಕಾಶ್, ನೇಮಿಚಂದ್ರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.