Advertisement

IPL; ಲಕ್ನೋ ಸೂಪರ್‌ ಜೈಂಟ್ಸ್‌ ಎದುರಾಳಿ:ಚೆನ್ನೈಗೆ ಇದು ಸೇಡಿನ ಪಂದ್ಯ

12:24 AM Apr 23, 2024 | Team Udayavani |

ಚೆನ್ನೈ: ಚೆನ್ನೈ-ಲಕ್ನೋ ನಡುವೆ ನಾಲ್ಕೇ ದಿನಗಳ ಅಂತರದಲ್ಲಿ ದ್ವಿತೀಯ ಸುತ್ತಿನ ಹೋರಾಟಕ್ಕೆ ಕಾಲ ಕೂಡಿಬಂದಿದೆ. ಮಂಗಳವಾರ ಚೆನ್ನೈಯಲ್ಲಿ ಇತ್ತಂಡಗಳು ಸೆಣಸಾಟಕ್ಕೆ ಇಳಿಯಲಿವೆ. ಲಕ್ನೋದಲ್ಲಿ ಅನುಭವಿಸಿದ 8 ವಿಕೆಟ್‌ ಸೋಲಿಗೆ ತವರಿನ ಅಂಗಳದಲ್ಲಿ ಸೇಡು ತೀರಿಸಿಕೊಳ್ಳುವುದು ಹಾಲಿ ಚಾಂಪಿಯನ್‌ ಚೆನ್ನೈ ಗುರಿಯಾಗಿದೆ.

Advertisement

ಸದ್ಯ ಎರಡೂ ತಂಡಗಳು ಏಳರಲ್ಲಿ 4 ಪಂದ್ಯಗಳನ್ನು ಗೆದ್ದಿವೆ. ರನ್‌ರೇಟ್‌ನಲ್ಲಿ ಲಕ್ನೋ ತುಸು ಹಿಂದಿದೆ. ವಿಜೇತ ತಂಡಕ್ಕೆ 4ನೇ ಸ್ಥಾನವನ್ನು ಗಟ್ಟಿಗೊಳಿಸುವ ಅವಕಾಶ ಇದೆ.
ಚೆನ್ನೈ ಈವರೆಗೆ ತವರಿನಲ್ಲಿ ಅಜೇಯ ದಾಖಲೆ ಕಾಯ್ದುಕೊಂಡು ಬಂದಿದೆ. ಆಡಿದ ಮೂರರಲ್ಲೂ ಜಯ ಸಾಧಿಸಿದೆ. ಆರ್‌ಸಿಬಿ, ಗುಜರಾತ್‌ ಮತ್ತು ಕೆಕೆಆರ್‌ ವಿರುದ್ಧ ಈ ಗೆಲುವನ್ನು ಒಲಿಸಿಕೊಂಡಿದೆ. ಇನ್ನೊಂದು ಜಯ ಮುಂಬೈಯಲ್ಲಿ ಪಾಂಡ್ಯ ಪಡೆ ವಿರುದ್ಧ ಒಲಿದಿತ್ತು. ಉಳಿದಂತೆ ವಿಶಾಖಪಟ್ಟಣ, ಹೈದರಾಬಾದ್‌ ಮತ್ತು ಲಕ್ನೋದಲ್ಲಿ ಎಡವಿದೆ.

ಚೆನ್ನೈಯಲ್ಲಿ ಸತತ 3 ಪಂದ್ಯ
ಮಂಗಳವಾರದಿಂದ ಮೊದ ಲ್ಗೊಂಡು ಚೆನ್ನೈಯಲ್ಲಿ ಸತತ 3 ಪಂದ್ಯಗಳನ್ನಾಡುವುದು ಸಿಎಸ್‌ಕೆ ಪಾಲಿಗೊಂದು ವರದಾನ ಎಂದೇ ಹೇಳಬೇಕು. ಬಳಿಕ ಹೈದರಾಬಾದ್‌ ಮತ್ತು ಪಂಜಾಬ್‌ ತಂಡಗಳನ್ನು ತನ್ನದೇ ಅಂಗಳದಲ್ಲಿ ಎದುರಿಸಲಿದೆ. “ತವರಿನ ಅದೃಷ್ಟ’ ಮುಂದುವರಿದರೆ ಚೆನ್ನೈ ಪ್ಲೇ ಆಫ್ ಮಾರ್ಗ ಸುಗಮಗೊಳ್ಳಲಿದೆ.

ಆರಂಭದಲ್ಲಿ ಪ್ರಬಲವಾಗಿ ಗೋಚರಿಸಿದ್ದ ಚೆನ್ನೈ ತಂಡದಲ್ಲೀಗ ಕೆಲವು ಸಮಸ್ಯೆಗಳು ಉದ್ಭವಿಸಿವೆ. ಆರಂಭಕಾರ ರಚಿನ್‌ ರವೀಂದ್ರ ರನ್‌ ಬರಗಾಲದಲ್ಲಿದ್ದಾರೆ. ಆರಂಭಿಕನಾಗಿ ಭಡ್ತಿ ಪಡೆ ಅಜಿಂಕ್ಯ ರಹಾನೆ ಅಷ್ಟೇನೂ ಯಶಸ್ಸು ಕಾಣುತ್ತಿಲ್ಲ. ತಂಡಕ್ಕೆ ಮರಳಿದ ಮುಸ್ತಫಿಜುರ್‌ ರೆಹಮಾನ್‌ ಮೊದಲ ಪಂದ್ಯದ ಬೌಲಿಂಗ್‌ ಫಾರ್ಮ್ ಹೊಂದಿಲ್ಲ. ದೀಪಕ್‌ ಚಹರ್‌, ಎಡಗೈ ಸ್ಪಿನ್ನರ್‌ ರವೀಂದ್ರ ಜಡೇಜ, ತುಷಾರ್‌ ದೇಶಪಾಂಡೆ ಕೂಡ ಕ್ಲಿಕ್‌ ಆಗುತ್ತಿಲ್ಲ. ಹೀಗಾಗಿ ಮತೀಶ ಪತಿರಣ ಮೇಲೆ ಹೆಚ್ಚಿನ ಭಾರ ಬಿದ್ದಿದೆ. ಗಾಯಕ್ವಾಡ್‌, ದುಬೆ, ಧೋನಿ, ಮೊಯಿನ್‌ ಅಲಿ ಅವರ ಬ್ಯಾಟಿಂಗ್‌ ತಂಡಕ್ಕೆ ಆಧಾರವಾಗಬೇಕಿದೆ. ಆದರೆ ಇದು ತವರಿನ ಪಂದ್ಯವಾದ ಕಾರಣ ಚೆನ್ನೈ ತಿರುಗಿ ಬೀಳುವುದನ್ನು ನಿರೀಕ್ಷಿಸಲಡ್ಡಿಯಿಲ್ಲ.

ಮಾಯಾಂಕ್‌ ಗೈರು
ಲಕ್ನೋಗೆ ಶರವೇಗದ ಎಸೆತಗಾರ ಮಾಯಾಂಕ್‌ ಯಾದವ್‌ ಅವರ ಗೈರು ಕಾಡಿದೆ. ಈ ಪಂದ್ಯದಲ್ಲೂ ಅವರು ಆಡುತ್ತಿಲ್ಲ. ಚೇತರಿಸಿಕೊಳ್ಳುತ್ತಿರುವ ಅವರು ಎ. 27ರ ಪಂದ್ಯಕ್ಕೆ ಮರಳುವ ಸಾಧ್ಯತೆ ಇದೆ.

Advertisement

ಲಕ್ನೋ ಬ್ಯಾಟಿಂಗ್‌ ಅಗ್ರ ಕ್ರಮಾಂಕ ವನ್ನು ಹೆಚ್ಚು ಅವಲಂಬಿಸಿದೆ. ರಾಹುಲ್‌- ಡಿ ಕಾಕ್‌ ಕ್ರೀಸ್‌ ಆಕ್ರಮಿಸಿಕೊಂಡರೆ ಏನಾದೀತು ಎಂಬುದಕ್ಕೆ ಕಳೆದ ಚೆನ್ನೈ ಎದುರಿನ ಪಂದ್ಯವೇ ಸಾಕ್ಷಿ. ಪೂರಣ್‌, ಬದೋನಿ, ಸ್ಟೋಯಿನಿಸ್‌, ಕೃಣಾಲ್‌ ಪಾಂಡ್ಯ ಮಧ್ಯಮ ಕ್ರಮಾಂಕದಲ್ಲಿ ಆಧಾರವಾಗಬೇಕಿದೆ.

ಮೊದಲ ಸುತ್ತಿನಲ್ಲಿ…
ಇತ್ತಂಡಗಳ ನಡುವೆ ಶುಕ್ರವಾರವಷ್ಟೇ ಲಕ್ನೋದಲ್ಲಿ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಆತಿಥೇಯ ಲಕ್ನೋ 8 ವಿಕೆಟ್‌ಗಳಿಂದ ಭರ್ಜರಿಯಾಗಿ ಚೆನ್ನೈಯನ್ನು ಮಣಿಸಿತ್ತು. ಚೆನ್ನೈ 6 ವಿಕೆಟಿಗೆ 176 ರನ್‌ ಮಾಡಿದರೆ, ಲಕ್ನೋ 19 ಓವರ್‌ಗಳಲ್ಲಿ ಎರಡೇ ವಿಕೆಟಿಗೆ 180 ರನ್‌ ಬಾರಿಸಿತ್ತು. ನಾಯಕ ಕೆ.ಎಲ್‌. ರಾಹುಲ್‌ 82, ಕ್ವಿಂಟನ್‌ ಡಿ ಕಾಕ್‌ 54 ರನ್‌ ಮಾಡುವ ಜತೆಗೆ ಮೊದಲ ವಿಕೆಟಿಗೆ 15 ಓವರ್‌ಗಳಲ್ಲಿ 134 ರನ್‌ ಪೇರಿಸುವ ಮೂಲಕ ಭದ್ರ ಬುನಾದಿ ನಿರ್ಮಿಸಿದ್ದರು. ರಾಹುಲ್‌ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next