Advertisement

ಸಹಜ ಸ್ಥಿತಿಗೆ ಮರಳುತ್ತಿದೆ ಮುಂಬಯಿ 

06:00 AM Aug 31, 2017 | Team Udayavani |

ಮುಂಬಯಿ: ಭಾರೀ ಗಾಳಿ ಮಳೆಯಿಂದ ರಸ್ತೆಯಲ್ಲಿ ಆಳೆತ್ತರದ ವರೆಗೆ ನಿಂತ ನೀರು, ನಿಲ್ದಾಣ ಬಿಟ್ಟು ಹೊರಡದ ಬಸ್‌ಗಳು, ರೈಲು ಸಂಪರ್ಕವೂ ಬಂದ್‌, ಭಾರೀ ಟ್ರಾಫಿಕ್‌ ಜಾಮ್‌ನಿಂದಾಗಿ ಶಾಲಾ ವಾಹನಗಳು, ಉದ್ಯೋಗ ಮುಗಿಸಿ ಮನೆಗೆ ಹೊರಟವರು ನಡು ರಸ್ತೆಯಲ್ಲಿ, ದೂರದಿಂದ ನಗರಕ್ಕೆ ಬಂದವರು ದಿಕ್ಕು ತೊಚದಂತಾಗಿ ನಿಂತಿರುವ ದೃಶ್ಯ…ಇದು ಮಂಗಳವಾರ ಮುಂಬಯಿ ನಗರದಲ್ಲಿ ಕಂಡುಬಂದ ದೃಶ್ಯ. 


ಆದರೆ ಬುಧವಾರದ ಚಿತ್ರಣ ಇದಕ್ಕಿಂತಲೂ ವಿಭಿನ್ನ.ಮಹಾಮಳೆಯಿಂದಾಗಿ ವಾಣಿಜ್ಯನಗರಿಯ ಪ್ರಮುಖ ಸ್ಥಳಗಳಾದ ನವಿ ಮುಂಬಯಿ, ಬಾಂದ್ರಾ, ಅಂಧೇರಿ, ಎಲ್ಫಿನ್‌ಸ್ಟೋನ್‌ ರೋಡ್‌, ದಾದರ್‌ ಪ್ರದೇಶದ ರಸ್ತೆ, ಸಿಟಿ ರೈಲ್ವೇ ನಿಲ್ದಾಣ…ಪೂರ್ತಿ ಜಲಾವೃತ. ಈ ಪ್ರದೇಶದ ರಸ್ತೆಗಳಲ್ಲಿ  ಹೆಚ್ಚಿನ ಪ್ರಮಾಣದಲ್ಲಿ  ನೀರು ನಿಂತಿತ್ತು. ಹೀಗಾಗಿ ಅಲ್ಲಿಗೆ ಬಂದ ವಾಹನಗಳು ಹೆಚ್ಚಿನ ಸಮಯ ಮುಂದೂ ಹೋಗ ಲಾಗದೆ ಹಿಂದಕ್ಕೂ ತೆರಳಲಾಗದೆ ಅತಂತ್ರ ಸ್ಥಿತಿಯಲ್ಲಿ ನಿಂತಿದ್ದವು. ಅಂಗಡಿ  ಮುಂಗಟ್ಟುಗಳ ಮಾಲಕರು ಮಳೆ ಜೋರಾಗುತ್ತಿದ್ದಂತೆ ಬಾಗಿಲು ಮುಚ್ಚಿ ಮನೆಯತ್ತ ಹೆಜ್ಜೆ ಇಟ್ಟಿದ್ದಾರೆ. ಅದೃಷ್ಟವಶಾತ್‌ ರಾತ್ರಿ 8 ಗಂಟೆಯ ಅನಂತರ ನಿಧಾನಕ್ಕೆ ಮಳೆಯ ಪ್ರಮಾಣ ಕುಗ್ಗಿದೆ. 


ಬುಧವಾರ ಏನಾಯಿತು?: ಬೆಳಗಿನ ಜಾವ ಸಣ್ಣ ಪ್ರಮಾಣದ ಮಳೆ ನಗರದ ವಿವಿಧೆಡೆ ಸುರಿಯುತ್ತಿತ್ತು. ಗಾಳಿಯ ಪ್ರಮಾಣ ಸಂಪೂರ್ಣ ನಿಂತಿತ್ತು. ಸುಮಾರು 10 ಗಂಟೆಯ ಅನಂತರ ಮೋಡದ ವಾತಾವರಣ ಕಂಡುಬಂದರೂ ಮಳೆ ಇರಲಿಲ್ಲ. ಹೀಗಾಗಿ ಇಲ್ಲಿಯ ನಿವಾಸಿಗಳು ನಿಟ್ಟುಸಿರುವ ಬಿಟ್ಟಿದ್ದಾರೆ. ಅಂಗಡಿ ಮುಂಗಟ್ಟುಗಳ ಮಾಲಕರ ಸ್ಥಿತಿ ಹೇಳತೀರದು. ರಸ್ತೆಯ ಅಕ್ಕಪಕ್ಕ ಇರುವ ಮೊಬೈಲ್‌, ಬಟ್ಟೆ, ಎಲೆಕ್ಟ್ರಿಕಲ್‌, ಪಾತ್ರೆ, ಪೈಬರ್‌…ಹೀಗೆ ಎಲ್ಲಾ ಅಂಗಡಿಗಳಲ್ಲಿಯೂ ನೀರನ್ನು ಹೊರಹಾಕುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.


ರಸ್ತೆಗಿಂತ ಕೆಳಭಾಗದಲ್ಲಿದ್ದ ಅಂಗಡಿಗಳಲ್ಲಿ ಪಂಪ್‌ಸೆಟ್‌ ಮೂಲಕ ನೀರನ್ನು ಹೊರಹಾಕುತ್ತಿದ್ದರು. ಸಾರ್ವಜನಿಕ ಸ್ಥಳಗಳಾದ ಬಸ್‌ ನಿಲ್ದಾಣ, ರೈಲ್ವೇ ನಿಲ್ದಾಣ, ದೇವ ಸ್ಥಾನ, ಚರ್ಚ್‌, ಮಸೀದಿಗಳಲ್ಲಿಯೂ ನೀರನ್ನು ಹೊರ ಹಾಕುವ ದೃಶ್ಯ ಕಂಡುಬಂತು. ಮನೆಯಲ್ಲಿ ನೀರಲ್ಲಿ ನೆನೆದಿ ರುವ ವಸ್ತುಗಳನ್ನು ರಸ್ತೆ ಬದಿಗೆ ತಂದು ಒಣಗಿಸುತ್ತಿದ್ದರು.


 ಸಾಂಕ್ರಾಮಿಕ ರೋಗದ ಭೀತಿ: ಬಸ್‌ ನಿಲ್ದಾಣ, ಬಾಂದ್ರಾದ ರೈಲ್ವೇ ನಿಲ್ದಾಣ, ನಗರದ ವಿವಿಧ ರಸ್ತೆಗಳ ಅಕ್ಕ ಪಕ್ಕ ಕಸಕಡ್ಡಿ ಸಂಗ್ರಹವಾಗಿದೆ. ಹೀಗಾಗಿ ಇಂತಹ ಪ್ರದೇಶದಲ್ಲಿ ನಡೆದಾಡದ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವು ಸ್ಥಳಗಳಲ್ಲಿ ರಸ್ತೆಯಲ್ಲಿ ನಿಂತಿರುವ ನೀರು ಹಾಗೆ ಇದೆ. ಇದರಿಂದಾಗಿ ಮಹಾನಗರದ ಜನರು ಸಾಂಕ್ರಾಮಿಕ ರೋಗದ ಭೀತಿಗೆ ತುತ್ತಾಗಿದ್ದಾರೆ.

Advertisement

ವೈದ್ಯ, ಹಸುಳೆ ಸೇರಿ 19 ಸಾವು
ಭಾರೀ ಮಳೆಯಿಂದಾಗಿ ಮುಂಬಯಿ, ಠಾಣೆ ಮತ್ತು ಪಾಲ^ರ್‌ನಲ್ಲಿ ಅಸುನೀಗಿದವರ ಸಂಖ್ಯೆ ಹತ್ತಕ್ಕೆ ಏರಿಕೆಯಾಗಿದೆ.  ಅಸುನೀಗಿದ ವರಲ್ಲಿ ಮುಂಬಯಿನ ಜನಪ್ರಿಯ ವೈದ್ಯ ದೀಪಕ್‌ ಆಮ್ರಪುರ್ಕರ್‌, ಮೂರು ವರ್ಷದ ಬಾಲಕಿ ಸೇರಿದ್ದಾರೆ. ಮುಂಬಯಿನ ದಹೀಸರ್‌, ಕಾಂಡಿವಿಲ್‌, ಮಲಾಡ್‌ ಮತ್ತು ದಾದರ್‌, ವಿವಿಧೆಡೆ‌ ಹಲವು ಮಂದಿ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಘಾಟ್ಕೊàಪರ್‌ನಲ್ಲಿ ಗೋಡೆ ಕುಸಿದು ವ್ಯಕ್ತಿ ಮೃತನಾಗಿದ್ದಾನೆ. 


ಪಾಲಿಕೆಯಿಂದ ಉತ್ತಮ ಕೆಲಸ 
ವಾಣಿಜ್ಯ ನಗರದಾದ್ಯಂತ ನೀರು ನುಗ್ಗಿ ಭಾರಿ ಪ್ರಮಾಣದ ತೊಂದರೆಯಾಗಿದ್ದರೂ ಬೃಹನ್ಮುಂಬಯಿ ಮಹಾನಗರ ಪಾಲಿಕೆ ಉತ್ತಮ ಕೆಲಸ ಮಾಡಿದೆ ಎಂದು ಶಿವಸೇನೆ ಹೇಳಿಕೊಂಡಿದೆ. ಪರಿಸ್ಥಿತಿ ಕೈಮೀರಿ ಹೋಗದಂತೆ ಸ್ಥಳೀಯ ಆಡಳಿತದ ಕ್ರಮ ಸರಿಯಾಗಿತ್ತು ಎಂದು ಪಕ್ಷದ ಮುಖವಾಣಿಯಲ್ಲಿ ಬರೆದ ಸಂಪಾದಕೀಯದಲ್ಲಿ ಹೇಳಿಕೊಳ್ಳಲಾಗಿದೆ.

ನೌಕಾಪಡೆಯಿಂದ ಆಹಾರ ಪೂರೈಕೆ
ಭಾರತೀಯ ನೌಕಾಪಡೆ ಪ್ರವಾಹದಿಂದ ಸಂತ್ರಸ್ತರಾದ ವರಿಗೆ ಆಹಾರ ಪೂರೈಕೆ ಮಾಡುತ್ತಿದೆ. ಅದಕ್ಕಾಗಿ ತಾತ್ಕಾಲಿಕ ಸಮು ದಾಯ ಅಡುಗೆ ಮನೆಗಳನ್ನು ತೆರೆದಿದೆ. ನಗರದ ಪ್ರಮುಖ ಸ್ಥಳಗ ಳಲ್ಲಿ ಅದನ್ನು ಸ್ಥಾಪಿಸಲಾಗಿದೆ. ಎರಡು ಮುಳುಗುಗಾರರ ತಂಡ ಗಳು, 5 ಶೋಧನಾ ತಂಡಗಳು ರಕ್ಷಣಾ ಕಾರ್ಯದಲ್ಲಿ ನಿರತವಾಗಿವೆ.

ಶಾರುಖ್‌, ಸಲ್ಮಾನ್‌ ಮನೆಮುಂದೆ ಬಿಕೋ
ಬಾಲಿವುಡ್‌ ಸ್ಟಾರ್‌ ನಟರಾದ ಶಾರುಖ್‌ ಖಾನ್‌ ಮತ್ತು ಸಲ್ಮಾನ್‌ ಖಾನ್‌ ಮನೆ ಇರುವುದು ಬಾಂದ್ರಾದಲ್ಲಿ. “ಗ್ಯಾಲೆಕ್ಸಿ’ ಅಪಾರ್ಟ್‌ ಮೆಂಟ್‌ನಲ್ಲಿ ಸಲ್ಮಾನ್‌ ಖಾನ್‌ ಇರುತ್ತಾರೆ. ಅದೇ ರೀತಿ “ಮನ್ನತ್‌’ನ‌ಲ್ಲಿ ಶಾರುಖ್‌ ಖಾನ್‌ ವಾಸವಿದ್ದಾರೆ. ಯಾವಾಗಲೂ ಅಭಿಮಾನಿಗಳ ಹಿಂಡು ಈ ಇಬ್ಬರು ಮನೆಯ ಮುಂದೆ ನಿಂತಿರುತ್ತಾರೆ. ತಮ್ಮ ಮೆಚ್ಚಿನ ಸ್ಟಾರ್‌ ನಟ ಇರಲಿ, ಇಲ್ಲದಿರಲಿ ಅಭಿಮಾನಿಗಳು ಮನೆ ಮುಂದೆ ನಿಂತು ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ತಲ್ಲಿನರಾಗಿರುತ್ತಾರೆ. ಮುಂಬಯಿಗೆ ಬರುವ ಪ್ರವಾಸಿಗರು ಕೂಡ ಈ ಇಬ್ಬರ ಮನೆ ನೋಡಲು ಬಂದಿರುತ್ತಾರೆ. ಹೀಗಾಗಿ ಸ್ಟಾರ್‌ಗಳ ಮನೆಗಳೇ ಪ್ರವಾಸಿ ತಾಣವಾಗಿ ಬಿಟ್ಟಿವೆ. ಆದರೆ ಮಹಾಮಳೆಯ ಪರಿಣಾಮ ಮಂಗಳವಾರ ಮಧ್ಯಾಹ್ನ, ಬುಧವಾರ ಬೆಳಗ್ಗೆ ಎರಡೂ ಮನೆಯ ಮುಂದೆ ಅಭಿಮಾನಿಗಳು ಇಲ್ಲದೇ ಬಿಕೋ ಎನ್ನುತ್ತಿತ್ತು.


ಕಬಡ್ಡಿ ಆಟಗಾರರು ಟ್ರಾಫಿಕ್‌ನಲ್ಲಿ ಸಿಕ್ಕಿಬಿದ್ದಿದ್ದು ಹೇಗೆ?
ಮಂಗಳವಾರ ಮಹಾಮಳೆಯಿಂದಾಗಿ ರಸ್ತೆಯಲ್ಲಿ ನೀರು ನಿಂತು ಭಾರೀ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. ಇದು ಪ್ರೊ ಕಬಡ್ಡಿಯ ಪಂದ್ಯಗಳು ರದ್ದಾಗುವಂತೆ ಮಾಡಿದೆ. ಎಂದಿನಂತೆ ನಿಗದಿತ ಅವಧಿಯಾದ ರಾತ್ರಿ 8ಕ್ಕೆ ಬೆಂಗಳೂರು ಬುಲ್ಸ್‌ ಮತ್ತು ಯುಪಿ ಯೋಧಾ ಪಂದ್ಯವನ್ನು ಆಡಿಸಲು ತೀರ್ಮಾ ನಿಸಲಾಗಿತ್ತು. ಹೀಗಾಗಿ ಈ ತಂಡಗಳು ಅಂದೇರಿಯ ಹೋಟೆಲ್‌ವೊಂದರಿಂದ ಮಧ್ಯಾಹ್ನ 3.45ಕ್ಕೆ ಕ್ರೀಡಾಂಗಣಕ್ಕೆ ಹೊರಟಿದ್ದವು. ಹೋಟೆಲ್‌ನಿಂದ ಸರ್ದಾರ್‌ ವಲ್ಲಭ್‌ಬಾಯ್‌ ಪಟೇಲ್‌ ಒಳಾಂ ಗಣ ಕ್ರೀಡಾಂಗಣಕ್ಕೆ ಇರುವ ದೂರ 13 ಕಿ.ಮೀ. ಆದರೆ ರಾತ್ರಿ 8 ಆದರೂ ಆಟಗಾರರನ್ನು ಹೊತ್ತ ಬಸ್‌ 4 ಕಿ.ಮೀ.ಕ್ರಮಿಸಲು ಸಾಧ್ಯವಾಗಿಲ್ಲ. ಇದರಿಂದ ಪಂದ್ಯಗಳನ್ನು ಮುಂದೂಡಲು ಸಂಘ ಟಕರು ತೀರ್ಮಾನಿಸಿದರು. ಆಟಗಾರರನ್ನು ಹೊತ್ತ ಬಸ್‌ ವಾಪಸ್‌ ಹೋಟೆಲ್‌ಗೆ ಹೊರಟಿತು. ಆದರೆ ಭಾರೀ ಟ್ರಾಫಿಕ್‌ನಿಂದಾಗಿ ವಾಪಸ್‌ ಹೋಟೆಲ್‌ಗೆ ಬರಲು ಕೂಡ ಹರಸಾಹಸ ಪಟ್ಟಿದ್ದಾರೆ.

ಮುಂಬಯಿನಲ್ಲಿ ಶಿವಸೇನೆ ಪ್ರವಾಹ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದೆ. ಆದರೆ ಬಿಜೆಪಿ ನೇತೃತ್ವದ ಮಹಾರಾಷ್ಟ್ರ ಸರಕಾರ ಎಲ್ಲವನ್ನೂ ತಾನೇ ಮಾಡಿದ್ದು ಎಂದು ಹೇಳಿಕೊಳ್ಳುತ್ತಿದೆ.
– ಆದಿತ್ಯ ಠಾಕ್ರೆ, 
ಶಿವಸೇನೆ ನಾಯಕ 

Advertisement

ಶಿವಸೇನೆ ಟೀಕೆಗಳಿಗೆ ಬಿಜೆಪಿ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. 
– ಮಾಧವ ಭಂಡಾರಿ, 
ಬಿಜೆಪಿ ನಾಯಕ

ಪ್ರವಾಹ ಸ್ಥಿತಿಗೆ ಬಿಜೆಪಿ  ಮತ್ತು ಶಿವಸೇನೆಯೇ ಕಾರಣ. ಅವರ ಆಡಳಿತ ಎಷ್ಟು ಚೆನ್ನಾಗಿದೆ ಎನ್ನುವುದಕ್ಕೆ  ಇದು ಉದಾಹರಣೆ.
– ಧನಂಜಯ ಮುಂಢೆ, 
ಎನ್‌ಸಿಪಿ ನಾಯಕ

ಪ್ರತ್ಯಕ್ಷ ವರದಿ: ಮಂಜುನಾಥ್ ಮಳಗುಳಿ

Advertisement

Udayavani is now on Telegram. Click here to join our channel and stay updated with the latest news.

Next