ಬೆಂಗಳೂರು: ಉಕ್ರೇನ್ ನಲ್ಲಿರುವ ಇನ್ನುಳಿದ ವಿದ್ಯಾರ್ಥಿಗಳನ್ನು ರಾಜ್ಯಕ್ಕೆ ಸುರಕ್ಷಿತವಾಗಿ ಕರೆತರಲು ಕ್ರಮಕೈಗೊಳ್ಳುತ್ತಿದ್ದೇವೆ, ಕಟ್ಟ ಕಡೆಯ ವಿದ್ಯಾರ್ಥಿಯನ್ನು ಸುರಕ್ಷಿತವಾಗಿ ಕರೆತರುವ ತನಕ ಆಪರೇಷನ್ ನಿಲ್ಲದು ಎಂದು ಕಂದಾಯ ಸಚಿವ ಆರ್ ಆಶೋಕ್ ತಿಳಿಸಿದರು.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 12 ವಿದ್ಯಾರ್ಥಿಗಳ ಮೊದಲ ತಂಡವನ್ನು ತಾಯ್ನಾಡಿಗೆ ಸ್ವಾಗತಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕೆಲ ವಿದ್ಯಾರ್ಥಿಗಳು ರೊಮೆನಿಯಾ ಮೂಲಕ ಭಾರತಕ್ಕೆ ಮರಳಿದ್ದಾರೆ. ಮುಂಬೈ ಹಾಗೂ ನವದೆಹಲಿಗೆ ಆಗಮಿಸಿರುವ ವಿದ್ಯಾರ್ಥಿಗಳನ್ನು ಬೆಂಗಳೂರಿಗೆ ಸರ್ಕಾರವೇ ಎಲ್ಲ ವ್ಯವಸ್ಥೆ ಮಾಡಿ ಕರೆತರಲಾಗುತ್ತಿದೆ. ಕಂದಾಯ ಇಲಾಖೆಯ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ವಿದ್ಯಾರ್ಥಿಗಳ ಪ್ರಯಾಣ ಹಾಗೂ ಇನ್ನಿತರ ವೆಚ್ಚಗಳನ್ನು ಭರಿಸಲಾಗುತ್ತಿದೆ ಎಂದರು.
ಉಕ್ರೇನ್ ನಿಂದ ಇನ್ನುಳಿದ ವಿದ್ಯಾರ್ಥಿಗಳನ್ನು ಕರೆತರಲು ಕೇಂದ್ರ ವಿದೇಶಾಂಗ ಸಚಿವರ ಜೊತೆ ಮುಖ್ಯಮಂತ್ರಿಗಳು ನಿರಂತರ ಸಂಪರ್ಕದಲ್ಲಿದ್ದಾರೆ. ಕೇಂದ್ರ ಹಾಗೂ ರಾಜ್ಯದ ಸಹಾಯವಾಣಿಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ. ಹಲವಾರು ವಿದ್ಯಾರ್ಥಿಗಳು ಹಾಗೂ ಪೋಷಕರ ಜೊತೆಗೆ ಚರ್ಚಿಸಲಾಗಿದೆ. ಉಕ್ರೇನ್ ನ ಕಾರ್ಕೈವ್ ನಲ್ಲಿ ಬಹಳಷ್ಟು ವಿದ್ಯಾರ್ಥಿಗಳು ಸಿಲುಕಿದ್ದು, ಅದೇ ಪ್ರದೇಶದಲ್ಲಿ ಪ್ರಸ್ತುತ ಯುದ್ಧ ನಡೆಯುತ್ತಿರುವುದಾಗಿ ತಿಳಿದುಬಂದಿದೆ ಎಂದರು.
ಇದನ್ನೂ ಓದಿ:ಉಕ್ರೇನ್: ಛತ್ತೀಸ್‌ಗಢದ ವಿದ್ಯಾರ್ಥಿಗಳ ವಾಪಸಾತಿಯ ವೆಚ್ಚ ಭರಿಸುವ ಸರಕಾರ
ವಿದ್ಯಾರ್ಥಿಗಳ ಸುರಕ್ಷತೆಯ ಜೊತೆಗೆ ಊಟ ಮತ್ತು ನೀರಿನ ವ್ಯವಸ್ಥೆಯನ್ನು ಪೂರೈಸಲು ಕೇಂದ್ರ ವಿದೇಶಾಂಗ ಸಚಿವರಿಗೆ ಮನವಿ ಮಾಡಲಾಗಿದೆ. ವಿದ್ಯಾರ್ಥಿಗಳ ಸುರಕ್ಷತೆಗೆ ಆದ್ಯತೆ ನೀಡುವ ಜೊತೆಗೆ ಅವರನ್ನು ಭಾರತಕ್ಕೆ ಕರೆತರುವ ಬಗ್ಗೆಯೂ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿದೆ ಎಂದರು.
ರಾಜ್ಯದ ಅಧಿಕಾರಿಗಳು ಕ್ಷಣ ಕ್ಷಣದ ಮಾಹಿತಿ ಪಡೆಯುತ್ತಿದ್ದಾರೆ. ಪೋಷಕರು ಧೈರ್ಯದಿಂದ ಇರಬೇಕು. ಯಾವುದೇ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ಸರ್ಕಾರ ನಿಮ್ಮ ಮಕ್ಕಳ ರಕ್ಷಣೆಗೆ ಸಕಲಸಿದ್ಧತೆ ಮಾಡುತ್ತದೆ. ಕಟ್ಟ ಕಡೆಯ ವಿಧ್ಯಾರ್ಥಿಯನ್ನು ಪೋಷಕರ ಮಡಿಲಿಗೆ ತಲುಪಿಸುವ ತನಕ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸುತ್ತದೆ ಎಂದು ಹೇಳಿದರು.