ಗುಂಡ್ಲುಪೇಟೆ: ಎರಡು ತಿಂಗಳ ನಂತರ ತಾಲೂಕಿನ ಶಿವಪುರದಲ್ಲಿ ಹುಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸೆರೆಗಾಗಿ ಕಾರ್ಯಾಚರಣೆ ನಡೆಸಲಾಯಿತು.
ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಕಾಡಂಚಿನ ಗ್ರಾಮಗಳಲ್ಲಿ ಕಳೆದ ಎರಡು ತಿಂಗಳಿನಿಂದ ಸುಮ್ಮನಿದ್ದ ಹುಲಿರಾಯ ಮತ್ತೆ ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದು, ಗ್ರಾಮಸ್ಥರು ಸಮೀಪದ ಹಿಮವದ್ ಗೋಪಾಲಸ್ವಾಮಿ ಬೆಟ್ಟ ವಲಯದ ವಲಯಾರಣ್ಯಾಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ.
ಕೂಡಲೇ ಕಾರ್ಯಪ್ರವೃತ್ತರಾದ ಅರಣ್ಯಾಧಿಕಾರಿಗಳು ಬಂಡೀಪುರ ಕೇಂದ್ರಸ್ಥಾನದಲ್ಲಿ ಲಭ್ಯವಿದ್ದ ಸಾಕಾನೆಗಳ ಮೂಲಕ ಹುಲಿ ಸೆರೆಗಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಮಂಗಳವಾರ ಸಂಜೆಯವರೆಗೆ ಕಾರ್ಯಾಚರಣೆ ನಡೆಸಿದ ಅರಣ್ಯಾಧಿಕಾರಿಗಳು ಮತ್ತು ಸಾಕಾನೆಗಳ ತಂಡಕ್ಕೆ ಹುಲಿ ದರ್ಶನವಾಗಲಿಲ್ಲ.
ಶಿವಪುರ ಮತ್ತು ಹುಲ್ಲೇಪುರ ನಡುವಿನ ರಂಗಶೆಟ್ಟಿ ಅವರ ಜಮೀನಿನ ಬಳಿ ಸೋಮವಾರ ಬೆಳಗ್ಗೆ ಹುಲಿ ಕಾಣಿಸಿಕೊಂಡಿತ್ತು. ನಂತರ ಶಿವಪುರದ ಹೊರವಲಯದಲ್ಲಿರುವ ರಂಗಶೆಟ್ಟಿ ಅವರ ಜಮೀನಿನಿಂದ ಕಲ್ಲಿಕಟ್ಟೆ ಹಳ್ಳದ ಮೂಲಕ ಗಂಗಪ್ಪ ಅವರ ಜಮೀನಿನವರೆಗೂ ಸುಮಾರು 2 ಚದರ ಕಿ.ಮೀ. ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಯಿತು.
ಸೋಮವಾರ ಮಧ್ಯಾಹ್ನ ದಿಂದ ಮಂಗಳವಾರ ಸಂಜೆಯವರೆಗೂ ಕಾರ್ಯಾಚರಣೆ ನಡೆದಿದ್ದರೂ ಹುಲಿ ಕಾರ್ಯಾಚರಣೆ ತಂಡಕ್ಕೆ ಕಾಣಿಸಿಲ್ಲ. ಕೆಲ ದಿನಗಳ ಹಿಂದೆ ಸಮೀಪದ ಚೌಡಹಳ್ಳಿ ಮತ್ತು ಕೆಬ್ಬೇಪುರ ಗ್ರಾಮಗಳಲ್ಲಿ ಹುಲಿ ಕಾಣಿಸಿಕೊಂಡಿದ್ದ ಕಾರಣ ಆತಂಕಕ್ಕೆ ಒಳಗಾಗಿದ್ದ ದನಗಾಹಿಗಳು ಅರಣ್ಯಕ್ಕೆ ಬೆಂಕಿ ಹಚ್ಚಿದ್ದರಿಂದ ನೂರಾರು ಎಕರೆ ಅರಣ್ಯ ಭಸ್ಮವಾಗಿತ್ತು.