Advertisement

Operation Talaash: ಕಬ್ಬಿನ ಗದ್ದೆಯಲ್ಲಿ 9 ಮಹಿಳೆಯರನ್ನು ಹತ್ಯೆ ಮಾಡಿದ್ದ ಹಂತಕನ ಬಂಧನ

04:43 PM Aug 10, 2024 | Team Udayavani |

ಹೊಸದಿಲ್ಲಿ: ಕಳೆದ 14 ತಿಂಗಳ ಅವಧಿಯಲ್ಲಿ 9 ಮಂದಿ ಮಹಿಳೆಯರ ಹತ್ಯೆ ಮಾಡಿದ್ದ ಸರಣಿ ಹಂತಕನನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ಉತ್ತರ ಪ್ರದೇಶದ ಬರೇಲಿಯಲ್ಲಿ ಈ ಘಟನೆ ನಡೆದಿದೆ.

Advertisement

ಬಂಧಿತ ವ್ಯಕ್ತಿಯನ್ನು 35 ವರ್ಷದ ಕುಲದೀಪ್‌ ಗಂಗ್ವಾರ್‌ ಎಂದು ಗುರುತಿಸಲಾಗಿದೆ. ಒಂಬತ್ತು ಮಧ್ಯವಯಸ್ಕ ಮಹಿಳೆಯರ ಜೀವವನ್ನು ಬಲಿತೆಗೆದುಕೊಂಡ ಕ್ರೂರ ಕೊಲೆಗಳ ಹಿಂದಿನ ಈ ಆರೋಪಿಯು ಮಹಿಳಾ ದ್ವೇಷಿಯಾಗಿದ್ದ ಎಂದು ತಿಳಿದುಬಂದಿದೆ.

ನವಾಬ್‌ ಗಂಜ್‌ ನಿವಾಸಿಯಾಗಿದ್ದ ಕುಲದೀಪ್‌, ಶಾಹಿ-ಶೀಶ್‌ಗಢ ಪ್ರದೇಶದಲ್ಲಿ ಮಹಿಳೆಯರನ್ನು ಬೇಟೆಯಾಡುತ್ತಿದ್ದ. ಅತ್ಯಂತ ನಾಜೂಕಾಗಿ ಕಾರ್ಯಾಚರಣೆ ಮಾಡುತ್ತಿದ್ದ ಆತ ಮಹಿಳೆಯರ ಕತ್ತು ಹಿಸುಕಿ ಕಬ್ಬಿನ ಗದ್ದೆಗಳಲ್ಲಿ ದೇಹಗಳನ್ನು ಎಸೆಯುತ್ತಿದ್ದನು. ಆರು ಕೊಲೆಗಳಲ್ಲಿ ಆತನ ಕೈವಾಡವನ್ನು ಪೊಲೀಸರು ಖಚಿತಪಡಿಸಿದ್ದಾರೆ. ಅಲ್ಲದೆ ಉಳಿದ ಮೂರರಲ್ಲಿ ಆತನನ್ನು ಶಂಕಿಸಿದ್ದಾರೆ.

ಕುಲ್ದೀಪ್ ತನ್ನ ಜೀವನದ ಘಟನೆಗಳ ಕಾರಣದಿಂದ ಮಹಿಳೆಯರ ಬಗ್ಗೆ ದ್ವೇಷ ಹೊಂದಿದ್ದನು. ತನ್ನ ತಂದೆಯು ತಾಯಿಯನ್ನು ನಿಂದಿಸುವುದನ್ನು ಮತ್ತು ನಂತರ ಹೆಂಡತಿ ತನ್ನಿಂದ ದೂರವಾದ ಕಾರಣದಿಂದ ಮಹಿಳೆಯ ಮೇಲೆ ಕೋಪ ಬೆಳೆಸಿಕೊಂಡಿದ್ದ. ಹೀಗಾಗಿ ಒಬ್ಬಂಟಿಯಾಗಿರುವ ಮಹಿಳೆಯರನ್ನು ಗುರಿಯಾಗಿಸಲು ಅವನನ್ನು ಪ್ರೇರೇಪಿಸಿತು. ಕೊಲ್ಲುವ ಮೊದಲು ಅವರ ಮೇಲೆ ಹಲ್ಲೆ ಮಾಡುತ್ತಿದ್ದ ಎಂದು ವರದಿ ತಿಳಿಸಿದೆ.

Advertisement

45ರಿಂದ 55 ವರ್ಷದ ಮಹಿಳೆಯರ ಮೇಲೆ ಕುಲದೀಪ್‌ ದಾಳಿ ನಡೆಸಿದ್ದಾನೆ. ಹಲವು ತಿಂಗಳುಗಳ ಕಾಲ ನಡೆದ ಈ ಕೃತ್ಯದ ಬಗ್ಗೆ ಪೊಲೀಸರಿಗೆ ಯಾವುದೇ ಸುಳಿವು ಸಿಗಂತೆ ಕೆಲಸ ಮುಗಿಸುತ್ತಿದ್ದ.

ಆಪರೇಷನ್‌ ತಲಾಶ್‌

ಸರಣಿ ಹಂತಕನ ಪತ್ತೆಗಾಗಿ ಎಸ್‌ಎಸ್ ಪಿ ಆನುರಾಗ್‌ ಆರ್ಯ ನೇತೃತ್ವದಲ್ಲಿ ಆಪರೇಷನ್‌ ತಲಾಶ್‌ ಎಂಬ ಕಾರ್ಯಾಚರಣೆ ಆರಂಭಿಸಲಾಗಿತ್ತು. ಗದ್ದೆಗಳಲ್ಲಿ ಒಬ್ಬ ಅಪರಿಚಿತ ತಿರುಗುತ್ತಿರುವ ಮಾಹಿತಿಯನ್ನು ಸ್ಥಳೀಯರು ಪೊಲೀಸರಿಗೆ ನೀಡಿದ್ದರು. ಇದು ಕುಲದೀಪ್‌ ಕಡೆಗೆ ಪೊಲೀಸರು ಶಂಕೆ ಪಡಲು ಕಾರಣವಾಗಿತ್ತು.

22 ತಂಡಗಳನ್ನು ರಚಿಸಿದ ಪೊಲೀಸರು, 600 ಹೆಚ್ಚುವರಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿದ್ದರು. 1500ಕ್ಕೂ ಹೆಚ್ಚು ಕ್ಯಾಮರಾಗಳ ಫೋಟೇಜ್‌ ಗಳನ್ನು ಪರಿಶೀಲನೆ ಮಾಡಲಾಗಿತ್ತು. ಶಂಕಿತ ವ್ಯಕ್ತಿಯ ಚಿತ್ರವನ್ನು ಬಿಡುಗಡೆ ಮಾಡಿದಾಗ ಕುಲದೀಪ್‌ ಗಂಗ್ವಾರ್‌ ಸಿಕ್ಕಿಬಿದ್ದಿದ್ದಾನೆ. ಅಧಿಕಾರಿಗಳು ಗ್ರಾಮಸ್ಥರಂತೆ ವೇಷಭೂಷಣವನ್ನು ಧರಿಸಿ ಆತನ ದಿನಚರಿಯನ್ನು ಗಮನಿಸಿ ಬಳಿಕ ಬಂಧಿಸಿದ್ದಾರೆ.

ಈಗ ಬಂಧನದಲ್ಲಿರುವ ಕುಲದೀಪ್ ಗಂಗ್ವಾರ್ ಕೊಲೆ ಮತ್ತು ಅತ್ಯಾಚಾರ ಯತ್ನ ಸೇರಿದಂತೆ ಐಪಿಸಿಯ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಆರೋಪಗಳನ್ನು ಎದುರಿಸುತ್ತಿದ್ದಾನೆ. ಅಪರಿಚಿತ ಹಂತಕನ ಭಯದಲ್ಲಿ ಬದುಕುತ್ತಿದ್ದ ಬರೇಲಿ ನಿವಾಸಿಗಳಿಗೆ ಈ ಬಂಧನ ಕೊಂಚ ಸಮಾಧಾನ ತಂದಿದೆ.

Advertisement

Udayavani is now on Telegram. Click here to join our channel and stay updated with the latest news.