Advertisement

Politics: ಕೈ ಶಾಸಕರ ಹೆದರಿಸಲು ಆಪರೇಷನ್‌ ಗುಮ್ಮ: ಬಾಲಚಂದ್ರ ಜಾರಕಿಹೊಳಿ

09:17 PM Aug 22, 2023 | Team Udayavani |

ಬೆಳಗಾವಿ: ವಿಧಾನಸಭೆಯಲ್ಲಿ 135 ಸದಸ್ಯರನ್ನು ಹೊಂದಿರುವ ಕಾಂಗ್ರೆಸ್‌ಗೆ ಸದ್ಯ ಬೇರೆ ಪಕ್ಷಗಳ ಶಾಸಕರ ಅಗತ್ಯವಿಲ್ಲ. ಆದರೆ, ಆ ಪಕ್ಷದಲ್ಲಿ ಪತ್ರ ಸಮರ, ಶಾಸಕರ ಅಸಮಾಧಾನ ಜೋರಾಗಿದೆ. ಅಂಥ ಶಾಸಕರನ್ನು ಬಾಯಿ ಮುಚ್ಚಿಸಲು ಬಿಜೆಪಿ- ಜೆಡಿಎಸ್‌ ಶಾಸಕರನ್ನು ಕರೆತರುವುದಾಗಿ ಕಾಂಗ್ರೆಸ್‌ ನಾಯಕರು ಹೆದರಿಸುತ್ತಿದ್ದಾರೆ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

Advertisement

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ ಯಾವ ಶಾಸಕರೂ ಪಕ್ಷ ಬಿಟ್ಟು ಹೋಗುವುದಿಲ್ಲ. ಕಾಂಗ್ರೆಸ್‌ಗೆ ಆಪರೇಷನ್‌ ಹಸ್ತ ಮೂಲಕ ಒಬ್ಬ ಶಾಸಕನ ಅವಶ್ಯಕತೆಯೂ ಇಲ್ಲ. ಸ್ಪಷ್ಟ ಬಹುಮತ ಅವರಿಗೆ ಸಿಕ್ಕಿದೆ. ಆ ಪಕ್ಷದೊಳಗೆ ಅಸಮಾಧಾನ, ಪತ್ರ ಸಮರ ಸೇರಿ ಏನೇನೋ ನಡೆದಿದೆ. ಕಳೆದ ಸಲ ಎಚ್‌.ಡಿ.ಕುಮಾರಸ್ವಾಮಿ ಸರ್ಕಾರದಲ್ಲಿ ಮೊದಲ ತಿಂಗಳಲ್ಲಿಯೇ ಅಸಮಾಧಾನ ಆರಂಭವಾಗಿ ಒಂದು ವರ್ಷ ನಂತರ ಸೊ#ಧೀಟಗೊಂಡಿತ್ತು. ಕಾಂಗ್ರೆಸ್‌ ಮುಖಂಡರು ಈಗಲೇ ಎಚ್ಚೆತ್ತುಕೊಂಡು ಬಿಜೆಪಿ-ಜೆಡಿಎಸ್‌ ಶಾಸಕರನ್ನು ಕರೆತರುವುದಾಗಿ ಹೇಳಿ ಅವರ ಶಾಸಕರನ್ನು ಹೆದರಿಸುತ್ತಿದ್ದಾರೆ ಎಂದರು.

ಮಹಾರಾಷ್ಟ್ರ ಮಾದರಿಯಲ್ಲಿ ರಾಜ್ಯದಲ್ಲಿಯೂ ಸರ್ಕಾರ ಬದಲಾಗುತ್ತಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ಗೆ ಜನ ಸ್ಪಷ್ಟ ಬಹುಮತ ಕೊಟ್ಟಿದ್ದಾರೆ. ಅವರು ಒಳ್ಳೆಯ ರೀತಿ ಸರ್ಕಾರ ನಡೆಸಲಿ. ಅವರಿಗೆ ತೊಂದರೆ ಕೊಟ್ಟು ನಾವ್ಯಾಕೆ ಕೆಟ್ಟ ಹೆಸರು ತೆಗೆದುಕೊಳ್ಳಬೇಕು. ಕೊಟ್ಟ ಭರವಸೆಗಳನ್ನು ಈಡೇರಿಸಲಿ. ಐದು ವರ್ಷಕ್ಕೆ ಎಲ್ಲ ಗ್ಯಾರಂಟಿ ಯೋಜನೆಗಳಿಗೆ ಮೂರು ಲಕ್ಷ ಕೋಟಿ ರೂ. ಅಗತ್ಯವಿದ್ದು, ಕಾಂಗ್ರೆಸ್‌ನವರಿಗೆ ದೇವರು ಒಳ್ಳೆಯದು ಮಾಡಲಿ ಎಂದರು.

ವಿಧಾನಸಭೆ ಚುನಾವಣೆಯಲ್ಲಿ ನಮಗೆ ಹಿನ್ನಡೆ ಆಗಿರಬಹುದು. ಮತದಾರರು ಆಗ ಮತ ಹಾಕದಿದ್ದರೂ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ನೋಡಿ ವೋಟ್‌ ಹಾಕುವುದಾಗಿ ಜನ ಹೇಳಿದ್ದಾರೆ. ಈಗಾಗಲೇ ಚಿಕ್ಕೋಡಿ ಹಾಗೂ ಬೆಳಗಾವಿಯಲ್ಲಿ ಜೋರಾದ ತಯಾರಿ ಮಾಡುತ್ತಿದ್ದೇವೆ ಎಂದರು.

ಬೆಳಗಾವಿ ಜಿಲ್ಲಾ ಬಿಜೆಪಿಯಲ್ಲಿ ಬಣ ರಾಜಕೀಯ ಇದ್ದಿದ್ದರಿಂದಲೇ ಈ ತರಹ ಫಲಿತಾಂಶ ಬಂದಿದೆ. ಇದು ಎಲ್ಲರಿಗೂ ಗೊತ್ತಿರುವ ವಿಷಯ. ಮುಚ್ಚಿಡುವುದಂತೂ ಏನೂ ಇಲ್ಲ. ಇದನ್ನು ಸರಿಪಡಿಸಿಕೊಳ್ಳಲು ವರಿಷ್ಠರು ಚರ್ಚೆ ಮಾಡುತ್ತಿದ್ದಾರೆ ಎಂದರು.

Advertisement

ಲೋಕಸಭೆಗೆ ಸ್ಪರ್ಧಿಸಲ್ಲ: ನಾನು ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ. ಈ ಕುರಿತ ಸುದ್ದಿಗಳೆಲ್ಲವೂ ಊಹಾಪೋಹವಷ್ಟೇ. ಶಾಸಕನಾಗಿ ಆರಾಮವಾಗಿದ್ದೇನೆ. ಪಕ್ಷ ಯಾರಿಗೆ ಟಿಕೆಟ್‌ ಕೊಡುತ್ತೋ ಅವರ ಪರವಾಗಿ ಕೆಲಸ ಮಾಡುತ್ತೇವೆ. ಟಿಕೆಟ್‌ ಹಂಚುವುದು ಹೈಕಮಾಂಡ್‌ಗೆ ಬಿಟ್ಟ ವಿಷಯ. ಪಕ್ಷ ಹೇಳಿದವರನ್ನು ಬೆಂಬಲಿಸುತ್ತೇವೆ ಎಂದು ಹೇಳಿದರು.

ಬೆಳಗಾವಿ ವಿಭಜನೆಯಾಗಬೇಕು

ಆಡಳಿತಾತ್ಮಕ ದೃಷ್ಟಿಯಿಂದ ಬೆಳಗಾವಿ ಜಿಲ್ಲಾ ವಿಭಜನೆ ಆಗಲೇಬೇಕು. ಎಲ್ಲ ವರದಿಗಳು ಗೋಕಾಕ ಜಿಲ್ಲೆ ಆಗಬೇಕೆಂದು ಶಿಫಾರಸು ಮಾಡಿವೆ. ಹೀಗಾಗಿ ಅದು ಆಗಲೇಬೇಕು. ದೊಡ್ಡ ದೊಡ್ಡ ನಾಯಕರು ಮೇಲೊಂದು ಒಳಗೊಂದು ಹೇಳಿಕೆ ನೀಡುತ್ತಿದ್ದರಿಂದ ಜಿಲ್ಲೆ ಆಗುವುದಿಲ್ಲ. ಎಲ್ಲರೂ ಪ್ರಾಮಾಣಿಕವಾಗಿ ಆಡಳಿತ ದೃಷ್ಟಿಯಿಂದ ಮೂರು ಜಿಲ್ಲೆ ಮಾಡಬೇಕು. ಬೈಲಹೊಂಗಲ ಜಿಲ್ಲೆ ಮಾಡುವುದು ಸರ್ಕಾರಕ್ಕೆ ಬಿಟ್ಟಿದ್ದು. ನಮ್ಮ ಗೋಕಾಕ ಜಿಲ್ಲೆ ಆಗಬೇಕು. ಸಾವಿರ ವರ್ಷವಾದರೂ ಬೆಳಗಾವಿ ಎಲ್ಲಿಯೂ ಹೋಗುವುದಿಲ್ಲ. ನಮ್ಮ ಒಂದಿಂಚೂ ಜಾಗವೂ ಕರ್ನಾಟಕ ಬಿಟ್ಟು ಬೇರೆ ಕಡೆಗೆ ಹೋಗುವುದಿಲ್ಲ ಎಂದು ಬಾಲಚಂದ್ರ ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next