Advertisement

ಆಪರೇಷನ್‌ ನಡೆಸುತ್ತಿರುವುದು ಕಾಂಗ್ರೆಸ್‌-ಜೆಡಿಎಸ್‌

06:40 AM Sep 16, 2018 | Team Udayavani |

ಬೆಂಗಳೂರು:  ಮೈತ್ರಿ ಸರ್ಕಾರ ಕೆಡವಲು ಹಣ ಸಂಗ್ರಹಕ್ಕೆ ಬಿಜೆಪಿ ಕಿಂಗ್‌ಪಿನ್‌ಗಳನ್ನು ಬಳಸಿಕೊಳ್ಳುತ್ತಿದೆ ಎಂಬ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ಆಂತರಿಕ ಕಚ್ಚಾಟದಿಂದಾಗಿ ಆತಂಕಗೊಂಡು ಸರ್ಕಾರ ಉಳಿಸಿಕೊಳ್ಳಲು ಆಪರೇಷನ್‌ ನಡೆಸುತ್ತಿರುವುದು ಕಾಂಗ್ರೆಸ್‌ ಮತ್ತು ಜೆಡಿಎಸ್‌. ಆದರೆ, ಅನುಕಂಪ ಗಿಟ್ಟಿಸಲು ಮಾಫಿಯಾಗಳ ಹೆಗಲ ಮೇಲೆ ಬಂದೂಕು ಇಟ್ಟು ಬಿಜೆಪಿಗೆ ಗುಂಡು ಹೊಡೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಪ್ರತ್ಯಾರೋಪ ಮಾಡಿದೆ.

Advertisement

ಅಲ್ಲದೆ, ಸರ್ಕಾರ ಉರುಳಿಸಲು ನಡೆಯುತ್ತಿರುವ ಪ್ರಯತ್ನದ ಹಿಂದೆ ಇಸ್ಪೀಟ್‌ ಮಾಫಿಯಾ, ರಿಯಲ್‌ ಎಸ್ಟೇಟ್‌ ಮಾಫಿಯಾ, ಮೀಟರ್‌ ಬಡ್ಡಿ ಮಾಫಿಯಾ, ಲಾಟರಿ ಮಾಫಿಯಾ ಇದೆ ಎನ್ನುವ ಮುಖ್ಯಮಂತ್ರಿಗಳು, ಅಧಿಕಾರವಿದ್ದರೂ ಅಂತಹ ಮಾಫಿಯಾಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ ಎಂದಾದರೆ ಈ ಸರ್ಕಾರ ಯಾವ ಮಟ್ಟಕ್ಕೆ ತಲುಪಿದೆ ಎಂಬುದು ಸ್ಪಷ್ಟವಾಗುತ್ತಿದೆ. ಒಬ್ಬ ಮುಖ್ಯಮಂತ್ರಿಯಾಗಿ ಅಂತಹ ಮಾಫಿಯಾಗಳ ವಿರುದ್ಧ  ಕ್ರಮ ಕೈಗೊಳ್ಳಲು ಸಾಧ್ಯವಾದರೆ ಕುಮಾರಸ್ವಾಮಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಸವಾಲು ಹಾಕಿದೆ.

ವಿಧಾನಸೌಧದಲ್ಲಿ ಮಂಗಳವಾರ ಜಂಟಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌, ವಿಧಾನ ಪರಿಷತ್‌ ಸದಸ್ಯ ಆಯನೂರು ಮಂಜುನಾಥ್‌ ಮತ್ತು ಶಾಸಕ ಎಂ.ಪಿ.ರೇಣುಕಾಚಾರ್ಯ, ಸಮ್ಮಿಶ್ರ ಸರ್ಕಾರ ಉರುಳಿಸಲು ಬಿಜೆಪಿ ಯಾವುದೇ ಪ್ರಯತ್ನ ಮಾಡುತ್ತಿಲ್ಲ. ಅವರ ಭಾರಕ್ಕೆ ಅವರೇ ಕುಸಿಯುತ್ತಿದ್ದಾರೆ. ಒಳಗೊಳಗೆ ಆದರೆ, ಜನರ ಗಮನ ಬೇರೆಡೆ ಸೆಳೆಯಲು ಬಿಜೆಪಿಯನ್ನು ಎಳೆತರುತ್ತಿದ್ದಾರೆ ಎಂದು ಆರೋಪಿಸಿದರಲ್ಲದೆ, ಒಂದೊಮ್ಮೆ ಸರ್ಕಾರ ಅಲ್ಪಮತಕ್ಕೆ ಕುಸಿದರೆ 104 ಶಾಸಕರನ್ನು ಹೊಂದಿರುವ ಬಿಜೆಪಿ ಕಡಲೇಕಾಯಿ ತಿನ್ನುತ್ತಾ ಕುಳಿತುಕೊಳ್ಳಲು ಸಾಧ್ಯವಿಲ್ಲ, ಸರ್ಕಾರ ರಚಿಸಲಿದೆ ಎಂದು ಹೇಳಿದ್ದಾರೆ.

ಎನ್‌.ರವಿಕುಮಾರ್‌ ಮಾತನಾಡಿ, ಮಾಫಿಯಾಗಳಿಂದ ಹಣ ಸಂಗ್ರಹಿಸಿ ಬಿಜೆಪಿಯವರು ಸರ್ಕಾರ ಉರುಳಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹೇಳಿಕೆ ಹತಾಷೆಯ ಪರಮಾವಧಿ. ಮಾಫಿಯಾ ದಂಧೆಗಳ ಬಗ್ಗೆ ಮಾತನಾಡುವ ಅವರು ಅದರ ವಿರುದ್ಧ ಕ್ರಮ ಕೈಗೊಳ್ಳದೆ ಇರುವುದೇಕೆ? ಮುಖ್ಯಮಂತ್ರಿಯಾಗಿ ಮಾಫಿಯಾಗಳ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗದೇ ಇದ್ದರೆ ರಾಜೀನಾಮೆ ಕೊಟ್ಟು ಹೋಗಲಿ ಎಂದು ಹೇಳಿದರಲ್ಲದೆ, ಬಿಜೆಪಿ ವಿರುದ್ಧ ನಿರಾಧಾರ ಆರೋಪಗಳನ್ನು ಮುಂದುವರಿಸಿದರೆ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ರೌಡಿಗಳು, ಮಾಫಿಯಾಗಳಿಗೆ ಆಶ್ರಯ ನೀಡುತ್ತಿರುವುದೇ ಕಾಂಗ್ರೆಸ್‌ ಮತ್ತು ಜೆಡಿಎಸ್‌. ಇದೀಗ ಸರ್ಕಾರ ಉರುಳುವ ಪರಿಸ್ಥಿತಿ ಉದ್ಭವವಾದಾಗ ಬಿಜೆಪಿ ಮೇಲೆ ಆರೋಪ ಹೊರಿಸಿ ಅನುಕಂಪ ಗಿಟ್ಟಿಸಿಕೊಳ್ಳುವ ಪ್ರಯತ್ನವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಮಾಡುತ್ತಿದ್ದಾರೆ. ಬಿಜೆಪಿ ಕಿಂಗ್‌ಪಿನ್‌ಗಳನ್ನು ಬಳಸಿಕೊಳ್ಳುತ್ತದೆ ಎಂದದಾರೆ ಕಳೆದ ಮೇ ತಿಂಗಳಲ್ಲೇ ಸರ್ಕಾರ ಉಳಿಸಿಕೊಳ್ಳಬಹುದಿತ್ತು. ಆದರೆ, ಬಹುಮತ ಇಲ್ಲ ಎಂದಾಗುತ್ತಿದ್ದಂತೆ ಗೌರವದಿಂದ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಂದರು. ಇದನ್ನು ನಮ್ಮ ಮೇಲೆ ಆರೋಪ ಮಾಡುವವರು ನೆನಪಿಟ್ಟುಕೊಳ್ಳಬೇಕು ಎಂದು ಹೇಳಿದರು.

Advertisement

ಆಪರೇಷನ್‌ ನಡೆಸುತ್ತಿರುವುದು ಕಾಂಗ್ರೆಸ್‌, ಜೆಡಿಎಸ್‌:
ಆಯನೂರು ಮಂಜುನಾಥ್‌ ಮಾತನಾಡಿ, ಸರ್ಕಾರ ಉಳಿಸಿಕೊಳ್ಳುವುದು ನಮಗೆ ಗೊತ್ತು. ಬಿಜೆಪಿಯ ನಾಲ್ಕು, ಎಂಟು, ಹತ್ತು ಶಾಸಕರು ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ. ಅವರು ಬಿಜೆಪಿ ತೊರೆದು ನಮ್ಮೊಂದಿಗೆ ಬರುತ್ತಾರೆ ಎಂದು ಹೇಳುತ್ತಿರುವುದು ಕಾಂಗ್ರೆಸ್‌ ಮತ್ತು ಜೆಡಿಎಸ್‌ನವರು. ಬಿಜೆಪಿಯ ಯಾವ ನಾಯಕರಾದರೂ ಜೆಡಿಎಸ್‌, ಕಾಂಗ್ರೆಸ್‌ ಶಾಸಕರು ನಮ್ಮೊಂದಿಗೆ ಇದ್ದಾರೆ ಎಂದು ಹೇಳಿದ್ದಾರೆಯೇ? ಹೀಗಿರುವಾಗ ಆಪರೇಷನ್‌ ನಡೆಸುತ್ತಿರುವವರು ಯಾರು ಎಂಬುದು ಸ್ಪಷ್ಟವಾಗುತ್ತದೆ ಎಂದರು.

ಸಮ್ಮಿಶ್ರ ಸರ್ಕಾರದ ಕಾರ್ಯವೈಖರಿಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ, ಸಚಿವರಾದ ಎಚ್‌.ಡಿ.ರೇವಣ್ಣ ಮತ್ತು ಡಿ.ಕೆ.ಶಿವಕುಮಾರ್‌ ಹೊರತುಪಡಿಸಿ ಸರ್ಕಾರದಲ್ಲಿ ಇನ್ಯಾರೂ ಖುಷಿಯಾಗಿಲ್ಲ. ಇವರ ಸಹವಾಸವೇ ಸಾಕು ಎಂದು ಹೊರಬರಲು ಪ್ರಯತ್ನಿಸುತ್ತಿದ್ದಾರೆ. ಇದರಿಂದ ಸರ್ಕಾರ ಉರುಳುವ ಆತಂಕ ಕಾಣಿಸಿಕೊಂಡು ಅದನ್ನುಉಳಿಸಿಕೊಳ್ಳಲು ಬಿಜೆಪಿ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.

ನಮ್ಮೊಂದಿಗೆ ಬಿಜೆಪಿ ಐವರು ಶಾಸಕರಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರೆ, ಜೆಡಿಎಸ್‌ನ ಸಚಿವರೊಬ್ಬರು 10 ಮಂದಿ ಬಿಜೆಪಿ ಶಾಸಕರು ಸಂಪರ್ಕದಲ್ಲಿದ್ದಾರೆ ಎನ್ನುತ್ತಾರೆ. ಡಿ.ಕೆ.ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಸೇರಿದಂತೆ ಎರಡೂ ಪಕ್ಷಗಳ ಮುಖಂಡರು ಇದೇ ರೀತಿಯ ಮಾತುಗಳನ್ನು ಆಡುತ್ತಿದ್ದಾರೆ. ಆದರೆ, ಕಾಂಗ್ರೆಸ್‌ ಅಥವಾ ಜೆಡಿಎಸ್‌ ಶಾಸಕರು ನಮ್ಮೊಂದಿಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಸೇರಿದಂತೆ ಯಾವ ನಾಯಕರೂ ಹೇಳುತ್ತಿಲ್ಲ. ಇದರಿಂದಲೇ ಆಪರೇಷನ್‌ ಮಾಡುತ್ತಿರುವವರು ಯಾರು ಎಂಬುದು ಸ್ಪಷ್ಟವಾಗುತ್ತಿದೆ ಎಂದರು.

ಕಿಂಗ್‌ಪಿನ್‌ ಕಾಸು’ ಹೇಳಿಕೆ ತನಿಖೆಯಾಗಲಿ 
ಹುಬ್ಬಳ್ಳಿ
: ರಾಜ್ಯದಲ್ಲಿನ ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಪ್ರೇರಿತ ಕೆಲ ಕಿಂಗ್‌ಪಿನ್‌ಗಳು ಪ್ರಯತ್ನಿಸುತ್ತಿದ್ದಾರೆಂಬ ಸಿಎಂ ಕುಮಾರಸ್ವಾಮಿ ಆರೋಪ ಅನಗತ್ಯವಾಗಿದ್ದು, ಈ ಬಗ್ಗೆ ಸೂಕ್ತ ತನಿಖೆ ಮಾಡಲಿ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಆಗ್ರಹಿಸಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಜನರ ವಿಶ್ವಾಸ ಕಳೆದುಕೊಳ್ಳುತ್ತಿದೆ. ತಮ್ಮ ತಪ್ಪನ್ನು ಮರೆಮಾಚುವ ಉದ್ದೇಶದಿಂದ ಬಿಜೆಪಿ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ. ನಾವು ಯಾವುದೇ ಶಾಸಕರನ್ನು ಸೆಳೆಯಲು ಆಮಿಷ ಒಡ್ಡಿಲ್ಲ. ಯಾರಿಗೂ ಆಫ‌ರ್‌ ನೀಡಿಲ್ಲ. ಸೆ.19ರಂದು ಬಿಜೆಪಿ ಶಾಸಕರ ಸಭೆ ಕರೆಯಲಾಗಿದೆ. ಸಭೆಯಲ್ಲಿ ರಾಜಕೀಯದ ಕುರಿತು ಚರ್ಚೆ ಮಾಡಲಾಗುತ್ತದೆ ಎಂದರು.

ಸರ್ಕಾರ ಅಸ್ಥಿರಗೊಳಿಸಲು ಶಾಸಕರಿಗೆ ಕೋಟ್ಯಂತರ ರೂ. ಆಮಿಷವೊಡ್ಡುತ್ತಿದ್ದಾರೆ ಎಂದು ಬಿಜೆಪಿಯ ನಾಲ್ವರ ವಿರುದ್ಧ ಕಾಂಗ್ರೆಸ್‌ನವರು ಆದಾಯ ತೆರಿಗೆ ಇಲಾಖೆಗೆ ದೂರು ನೀಡಿದ್ದಾರೆ. ಇದುವರೆಗೆ ಆದಾಯ ತೆರಿಗೆ ಇಲಾಖೆಯನ್ನು ಬಿಜೆಪಿಯ ಮೋರ್ಚಾ ಕಚೇರಿ ಎಂದು ಕರೆಯುತ್ತಿದ್ದವರು ಮುಖ್ಯಮಂತ್ರಿಗಳ ಕೈಕೆಳಗೆ ಬರುವ ಎಸಿಬಿ, ಸಿಐಡಿಯಂತಹ ತನಿಖಾ ಸಂಸ್ಥೆಗಳು ಇದ್ದರೂ ಅದನ್ನು ಬಿಟ್ಟು ಆದಾಯ ತೆರಿಗೆ ಇಲಾಖೆಗೆ ದೂರು ನೀಡಿರುವುದರ ಉದ್ದೇಶವೇನು? ಈ ಆರೋಪ, ದೂರುಗಳೆಲ್ಲವೂ ರಾಜಕೀಯ ಪ್ರೇರಿತವಲ್ಲವೇ?
– ಎನ್‌.ರವಿಕುಮಾರ್‌, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ

ರೌಡಿಗಳು, ಮಾಫಿಯಾಗಳಿಗೆ ಆಶ್ರಯ ನೀಡುತ್ತಿರುವುದೇ ಕಾಂಗ್ರೆಸ್‌ ಮತ್ತು ಜೆಡಿಎಸ್‌.ಬಿಜೆಪಿ ಕಿಂಗ್‌ಪಿನ್‌ಗಳನ್ನು ಬಳಸಿಕೊಳ್ಳುವುದಾದರೆ ಮೇ ತಿಂಗಳಲ್ಲೇ ಸರ್ಕಾರ ಉಳಿಸಿಕೊಳ್ಳಬಹುದಿತ್ತು.ಆದರೆ, ಬಹುಮತ ಇಲ್ಲ ಎಂದಾಗುತ್ತಿದ್ದಂತೆ
ಗೌರವದಿಂದ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಂದರು. ಇದನ್ನು ನಮ್ಮ ಮೇಲೆ ಆರೋಪ ಮಾಡುವವರು ನೆನಪಿನಲ್ಲಿಟ್ಟುಕೊಳ್ಳಬೇಕು.
– ಎಂ.ಪಿ.ರೇಣುಕಾಚಾರ್ಯ ಶಾಸಕ

ರಾಜ್ಯದಲ್ಲಿ ದಗಾಕೋರರು, ಮಾಫಿಯಾಗಳ ಅಡ್ಡೆ ಇರುವುದೇ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಪ್ರತಿನಿಧಿಸುತ್ತಿರುವ ಗಾಂಧಿನಗರದಲ್ಲಿ. ಅವರೇ ಈ ಲಾಟರಿ, ಇಸ್ಪೀಟ್‌ ಮಾಫಿಯಾಗಳಿಗೆ ರಕ್ಷಣೆ ನೀಡುತ್ತಿದ್ದಾರೆ.
–  ಆಯನೂರು ಮಂಜುನಾಥ್‌
ವಿಧಾನ ಪರಿಷತ್‌ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next