ಗದಗ: ಕಳೆದ ಹಲವು ದಶಕಗಳಿಂದ ಬಿಡಾಡಿ ದನಗಳ ಹಾವಳಿಗೆ ಕಂಗೆಟ್ಟಿದ್ದ ಗದಗ-ಬೆಟಗೇರಿ ಅವಳಿ ನಗರದ ಜನತೆ ನಿಟ್ಟುಸಿರು ಬಿಡುವ ಸಮಯ ಬಂದಿದೆ. ಅವಳಿ ನಗರದಲ್ಲಿ ಬುಧವಾರ (ಆ 07) ತಡರಾತ್ರಿ ನಗರಸಭೆಯಿಂದ ಬಿಡಾಡಿ ದನಗಳ ಕಾರ್ಯಾಚರಣೆ ಆರಂಭಗೊಂಡಿದೆ.
ನಗರದ ವಿವಿಧೆಡೆ ಗುಂಪು ಗುಂಪಾಗಿ ಕೂಡಿರುವ ಬೀದಿ ದನಗಳನ್ನು ಕ್ಯಾಂಟರ್, ಲಾರಿ ಮೂಲಕ ಗೋಶಾಲೆಗಳಿಗೆ ರವಾನಿಸಲಾಗುತ್ತಿದೆ.
ಬೀದಿ ದನಗಳ ಉಪಟಳವು ಹೆಚ್ಚಾಗಿ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ನಗರಸಭೆಗೆ ಬಂದ ಹಿನ್ನೆಲೆಯಲ್ಲಿ, ಅಲ್ಲದೇ ಕೆಲವೆಡೆ ಅವಘಡಗಳು ನಡೆದ ಹಿನ್ನೆಲೆಯಲ್ಲಿ ಬೀದಿಯಲ್ಲಿ ಬಿಟ್ಟ ದನಗಳ ಮಾಲಿಕರಿಗೆ ತಮ್ಮ-ತಮ್ಮ ದನಗಳನ್ನು ತಮ್ಮ ತಾಬಾಕ್ಕೆ ತೆಗೆದುಕೊಳ್ಳಲು ಆ. 5ರಂದು ಕೊನೆಯ ಗಡವು ನೀಡಲಾಗಿತ್ತು.
ಗಡುವಿನ ಅವಧಿ ಮುಕ್ತಾಯವಾದರೂ ಬೀದಿ ದನಗಳನ್ನು ಅವುಗಳ ಮಾಲೀಕರು ತಮ್ಮ ವಶಕ್ಕೆ ಪಡೆಯದ ಹಿನ್ನೆಲೆಯಲ್ಲಿ ನಗರಸಭೆಯ ವತಿಯಿಂದ ಬೀದಿ ದನಗಳನ್ನು ಹಿಡಿದು ಗೋಶಾಲೆಗೆ ಸಾಗಿಸುವ ಕಾರ್ಯಾಚರಣೆ ಆರಂಭಿಸಿದರು.
ಅಲ್ಲದೇ, ಯಾರಾದರೂ ಅನಧಿಕೃತವಾಗಿ ಬೀದಿ ದನಗಳನ್ನು ತೆಗೆದುಕೊಂಡು ಹೋದಲ್ಲಿ ಅಂತವರ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸುವುದಾಗಿ ಗದಗ ಬೆಟಗೇರಿ ನಗರಸಭೆ ಕಾರ್ಯಾಲಯ ತಿಳಿಸಿದೆ.
ಗದಗ ಬೆಟಗೇರಿ ನಗರದಲ್ಲಿ ಬಿಡಾಡಿ ದನಗಳ ಹಾವಳಿ ಕುರಿತು ಉದಯವಾಣಿ ದಿನಪತ್ರಿಕೆಯು ನಿರಂತರವಾಗಿ ವಿಸ್ತೃತ ವರದಿ ಪ್ರಕಟಿಸಿತ್ತು. ಅಲ್ಲದೇ, ಬಿಡಾಡಿ ದನಗಳ ಹಾವಳಿಯಿಂದ ವೃದ್ಧ ಸಾವು ಹಾಗೂ ಅವುಗಳಿಂದಾದ ಅವಘಡಗಳ ಕುರಿತು ಬೆಳಕು ಚೆಲ್ಲಿತ್ತು. ಕೊನೆಗೂ ಎಚ್ಚೆತ್ತುಕೊಂಡ ನಗರಸಭೆ ಬಿಡಾಡಿ ದನಗಳ ಕಾರ್ಯಾಚರಣೆಗೆ ಮುಂದಾಗಿರುವುದು ಸಾರ್ವಜನಿಕರಿಗೆ ಸಂತಸ ಮೂಡಿಸಿದೆ.