Advertisement

ಆಪರೇಷನ್‌ ಎಂಟಿಬಿ

01:54 AM Jul 14, 2019 | Team Udayavani |

ಬೆಂಗಳೂರು: ಶನಿವಾರ ಬೆಳಗ್ಗೆ 5ರಿಂದ ಆರಂಭವಾದ ಆಪರೇಷನ್‌ ಎಂಟಿಬಿ ನಾಗರಾಜ್‌ ಕುತೂಹಲದ ವಿದ್ಯಮಾನಗಳಿಗೆ ಸಾಕ್ಷಿಯಾಯಿತು.

Advertisement

ಎಂಟಿಬಿ ನಾಗರಾಜ್‌ ನಿವಾಸಕ್ಕೆ ಶನಿವಾರ ಭೇಟಿ ನೀಡಿದ್ದ ಸಚಿವ ಡಿ.ಕೆ. ಶಿವಕುಮಾರ್‌ ಒಂದು ಸುತ್ತು ಮಾತುಕತೆ ನಡೆಸಿ ಅನಂತರ ಅವರನ್ನು ಸಿದ್ದರಾಮಯ್ಯ ಬಳಿ ಕರೆತಂದರು. ಸಿದ್ದರಾಮಯ್ಯ ಸುಮಾರು ನಾಲ್ಕು ತಾಸು ಕಾಲ ಎಂಟಿಬಿ ಜತೆ ಮಾತುಕತೆ ನಡೆಸಿದರು. ಡಿಸಿಎಂ ಡಾ| ಜಿ. ಪರಮೇಶ್ವರ್‌, ಸಚಿವ ಜಮೀರ್‌ ಅಹಮದ್‌ ಉಪಸ್ಥಿತರಿದ್ದರು.

ಎಂಟಿಬಿ ಕೆಲವು ಷರತ್ತುಗಳನ್ನು ಇಟ್ಟಿದ್ದಾರೆ ಎನ್ನಲಾಗಿದೆ. ಒಂದು ಹಂತದಲ್ಲಿ ಸಿದ್ದರಾಮಯ್ಯ ಸಿಎಂ ಆದರೆ ರಾಜೀನಾಮೆ ವಾಪಸ್‌ ಪಡೆಯುವುದಾಗಿ ಹೇಳಿದ್ದಾಗಿ ವರದಿಯಾಗಿದೆ.

“ರಾಜೀನಾಮೆ ವಾಪಸ್‌ ಪಡೆದು ಸರಕಾರದಲ್ಲಿ ಮುಂದುವರಿ, ಏನೇ ಸಮಸ್ಯೆ ಇದ್ದರೆ ನಾನು ನೋಡಿ ಕೊಳ್ಳುತ್ತೇನೆ” ಎಂದು ಸಿದ್ದರಾಮಯ್ಯ ಹೇಳಿದಾಗ, “ಡಾ| ಕೆ. ಸುಧಾಕರ್‌ ಜತೆ ಮಾತನಾಡಿ ತೀರ್ಮಾನಿಸುತ್ತೇನೆ’ ಎಂದು ಎಂಟಿಬಿ ತಿಳಿಸಿದರು ಎನ್ನಲಾಗಿದೆ.

ಹೀಗಾಗಿ ಜಮೀರ್‌ ಅಹಮದ್‌ ಮತ್ತು ಎಚ್‌.ಸಿ. ಮಹದೇವಪ್ಪ ಅವರು ಎಂಟಿಬಿ ನಾಗರಾಜ್‌ ಜತೆ ಲೀಲಾ ಪ್ಯಾಲೇಸ್‌ ಹೋಟೆಲ್‌ಗೆ ತಲುಪಿದರು. ಆದರೆ ಎಂಟಿಬಿ ನಾಗರಾಜ್‌ ಒಬ್ಬರೇ ಬಂದರೆ ಮಾತ್ರ ಭೇಟಿಯಾಗಲು ನಿರ್ಧರಿಸಿದ್ದ ಸುಧಾಕರ್‌, ಕಾಂಗ್ರೆಸ್‌ ನಾಯಕರ ಭೇಟಿಗೆ ನಿರಾಕರಿಸಿದರು.

Advertisement

ಈ ಮಧ್ಯೆ ಡಾ| ಕೆ. ಸುಧಾಕರ್‌ ಭೇಟಿಗಾಗಿ ಅವರ ಮನೆಗೆ ಹೋಗಿದ್ದ ಸಚಿವ ಡಿ.ಕೆ. ಶಿವಕುಮಾರ್‌ ಅವರು ಸುಧಾಕರ್‌ ಮನೆಯಲ್ಲಿ ಇಲ್ಲದ ಕಾರಣ ವಾಪಸಾಗಿದ್ದರು. ಯಾರನ್ನೂ ಭೇಟಿ ಮಾಡದ ಸುಧಾಕರ್‌ ತಮಗಾಗಿ ಕಾಯುತ್ತಿದ್ದ ವಿಶೇಷ ವಿಮಾನದಲ್ಲಿ ಮುಂಬಯಿಗೆ ಧಾವಿಸಿದರು.

ನಾನು ಇನ್ನೂ ಕಾಂಗ್ರೆಸ್‌ನಲ್ಲೇ ಇದ್ದೇನೆ, ಮುಂದೇನೂ ಇರುತ್ತೇನೆ. ಸಂಧಾನ ಸಭೆ ಎಲ್ಲ ಚೆನ್ನಾಗಿ ನಡೆದಿದೆ. ನಾವು ಎಲ್ಲ ಒಳ್ಳೆ ರೀತಿಯಾಗಿ ಪ್ರಯತ್ನ ಮಾಡುತ್ತಿದ್ದೇವೆ.
-ಎಂಟಿಬಿ ನಾಗರಾಜ್‌,
ಕಾಂಗ್ರೆಸ್‌ ನಾಯಕ

ಎಂಟಿಬಿ ನಾಗರಾಜ್‌ ಕಾಂಗ್ರೆಸ್‌ನಲ್ಲಿ ಇದ್ದಾರೆ, ಇಲ್ಲೇ ಇರುತ್ತಾರೆ. ರಾಜೀನಾಮೆ ವಾಪಸ್‌ ಪಡೆಯುವ ಬಗ್ಗೆ ಕಾದು ನೋಡಿ, ನಿಮಗೇ ಗೊತ್ತಾಗುತ್ತದೆ.
-ಜಮೀರ್‌ ಅಹಮದ್‌, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ

Advertisement

Udayavani is now on Telegram. Click here to join our channel and stay updated with the latest news.

Next