Advertisement

 ಆಪರೇಷನ್‌: ಬಿಜೆಪಿಗೆ ಹಿನ್ನಡೆ;  ಸದ್ಯ ಸರಕಾರ ಸುರಕ್ಷಿತ

12:50 AM Jan 17, 2019 | |

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌- ಜೆಡಿಎಸ್‌ ಸಮ್ಮಿಶ್ರ ಸರಕಾರ ಪತನಗೊಳಿಸುವ ಬಿಜೆಪಿಯ ಮತ್ತೂಂದು ಪ್ರಯತ್ನವೂ ವಿಫ‌ಲವಾದಂತಾಗಿದ್ದು, ಆಪರೇಷನ್‌ ಕಮಲ ಕಾರ್ಯಾ ಚರಣೆಗೆ ಅನಿರೀಕ್ಷಿತ ಹಿನ್ನಡೆಯುಂಟಾಗಿದೆ.

Advertisement

ಸಮ್ಮಿಶ್ರ ಸರಕಾರಕ್ಕೆ ಇಬ್ಬರು ಪಕ್ಷೇತರ ಶಾಸಕರ ಬೆಂಬಲ ವಾಪಸ್‌ ಪಡೆಯುವಂತೆ ಮಾಡಿ ಒಂದು ಹಂತದಲ್ಲಿ ತಮ್ಮ ಕಾರ್ಯತಂತ್ರದಲ್ಲಿ ಯಶಸ್ಸು ಗಳಿಸಿದ್ದ ಬಿಜೆಪಿ ಎರಡನೇ ಹಂತದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಅತೃಪ್ತ ಶಾಸಕರನ್ನು ಸೆಳೆಯುವಲ್ಲಿ ವಿಫ‌ಲವಾದಂತಿದೆ. ಹೀಗಾಗಿ ಸರಕಾರ ಸುರಕ್ಷಿತವಾಗಿದ್ದು ಕಾಂಗ್ರೆಸ್‌-ಜೆಡಿಎಸ್‌ ನಿರಾಳ ವಾದರೆ ಬಿಜೆಪಿಗೆ 3‌ನೇ ಬಾರಿಗೆ ಮುಖಭಂಗವಾದಂತಾಗಿದೆ.

ಆದರೆ ಬಿಜೆಪಿ ವಲಯದಲ್ಲಿ ಇನ್ನೂ ಆಶಾಭಾವನೆ ಇದ್ದು ಹರಿಯಾಣದ ಗುರುಗ್ರಾಮದಲ್ಲಿರುವ ಶಾಸಕರು ಜ.19ರ ವರೆಗೂ ಅಲ್ಲೇ ಇರುವಂತೆ ಸೂಚನೆ ನೀಡಿರುವುದು ಕುತೂಹಲ ಮೂಡಿಸಿದೆ. ಜ.18ರಂದು ನಡೆಯಲಿರುವ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಹಾಜರಾಗುವ ಶಾಸಕರ ಸಂಖ್ಯೆ ನೋಡಿದ ಬಳಿಕ ಬಿಜೆಪಿ ಮುಂದಿನ ಕಾರ್ಯತಂತ್ರ ರೂಪಿಸಲಿದೆ ಎಂದು ತಿಳಿದುಬಂದಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಬುಧವಾರ ಸಂಜೆಯೇ ಶಾಸಕ ವಿ.ಸೋಮಣ್ಣ ಅವರ ಜತೆ ಬೆಂಗಳೂರಿಗೆ ಆಗಮಿಸಿದರು. ಅದಕ್ಕೂ ಮುನ್ನ ಶಾಸಕಾಂಗ ಪಕ್ಷದ ಸಭೆ ನಡೆಸಿ ವಸ್ತುಸ್ಥಿತಿ ವಿವರಿಸಿ ಅನಂತರ ದಿಲ್ಲಿಗೆ ಹೋಗಿ ವರಿಷ್ಠರ ಜತೆ ಸಮಾಲೋಚನೆ ನಡೆಸಿದರು.

ಆಪರೇಷನ್‌ ಕಮಲ ವಿಫ‌ಲ ಆಗುತ್ತಲೇ ಎಚ್ಚೆತ್ತ ಬಿಜೆಪಿ, ನಮಗೂ ಕಾಂಗ್ರೆಸ್‌ ಅತೃಪ್ತ ಶಾಸಕರಿಗೂ ಸಂಬಂಧವೇ ಇಲ್ಲ. ನಾವು ಸರಕಾರ ಬೀಳಿಸುವ ಯತ್ನ ಮಾಡಿರಲಿಲ್ಲ. ಇಡೀ ಬೆಳವಣಿಗೆಯ ಹಿಂದೆ ಕಾಂಗ್ರೆಸ್‌ ಮೇಲೆಯೇ ಅನುಮಾನ ಮೂಡುತ್ತಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

Advertisement

ವಿಕೆಟ್‌ ಬಿದ್ದಿಲ್ಲ

ಮತ್ತೂಂದೆಡೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇ ಗೌಡರು, ಸಮ್ಮಿಶ್ರ ಸರಕಾರದ ಯಾವುದೇ ವಿಕೆಟ್‌ ಬಿದ್ದಿಲ್ಲ. ಇಬ್ಬರು ಪಕ್ಷೇತರರ ಬೆಂಬಲ ವಾಪಸ್‌ನಿಂದ ಸರಕಾರಕ್ಕೆ ಯಾವ ಆತಂಕವೂ ಇಲ್ಲ. ಸಮ್ಮಿಶ್ರ ಸರಕಾರ ಭದ್ರವಾಗಿದೆ ಎಂದು ತಿಳಿಸಿದರು.

ಸಚಿವರ ಪದ “ತ್ಯಾಗ’
ಸಮ್ಮಿಶ್ರ ಸರಕಾರ ಉಳಿಸಲು ತ್ಯಾಗಕ್ಕೆ ಸಿದ್ಧರಾಗುವಂತೆ ಐವರು ಸಚಿವರಿಗೆ ಕಾಂಗ್ರೆಸ್‌  ಸೂಚನೆ ನೀಡಿದೆ. ಕೃಷ್ಣಬೈರೇಗೌಡ, ಪ್ರಿಯಾಂಕ್‌ ಖರ್ಗೆ, ಕೃಷಿ ಶಿವಶಂಕರ ರೆಡ್ಡಿ ಹಾಗೂ ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್‌ ಅವರಿಗೆ ಕೆ.ಸಿ. ವೇಣುಗೋಪಾಲ್‌ ಪದತ್ಯಾಗಕ್ಕೆ ಸಿದ್ಧರಾಗಿ ಎಂದು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. 

ಫ‌ಲಿಸಿದ ತಂತ್ರ
ಆಪರೇಷನ್‌ ಕಮಲ ಕಾರ್ಯಾಚರಣೆ ವಿಚಾರದಲ್ಲಿ ಮಾಜಿ ಪ್ರಧಾನಿ ದೇವೇಗೌಡ ಮತ್ತು ಸಿಎಂ ಕುಮಾರಸ್ವಾಮಿ ಅವರ ಮೌನವ್ರತ ತಂತ್ರ ಫ‌ಲಿಸಿದೆ.
ಕಾಂಗ್ರೆಸ್‌ ಅತೃಪ್ತರು ಮಾತ್ರ ಬಿಜೆಪಿ ಸಂಪರ್ಕದಲ್ಲಿ ಇದ್ದುದರಿಂದ ಅವರನ್ನು ವಾಪಸ್‌ ಕರೆತರುವ ಜವಾಬ್ದಾರಿ ಕಾಂಗ್ರೆಸ್‌ ನಾಯಕರದ್ದು. ಸರಕಾರ ಉಳಿಸಿಕೊಳ್ಳಬೇಕು ಎಂದಾದರೆ ಅವರೇ ತಮ್ಮ ಶಾಸಕರನ್ನು ನಿಯಂತ್ರಿಸಲಿ ಎಂದು ಜೆಡಿಎಸ್‌ ನಾಯಕರು ಸುಮ್ಮನಾದರು.

ರಾಹುಲ್‌ ಗಾಂಧಿ ಜತೆ ದೂರವಾಣಿಯಲ್ಲಿ ದೇವೇಗೌಡ ಮಾತನಾಡಿದಾಗಲೂ ಸರಕಾರ ಉಳಿಸಿ ಕೊಳ್ಳುವುದು ನಿಮ್ಮ ಕೈಯಲ್ಲಿದೆ. ನಿಮ್ಮ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ. ಹೀಗಾಗಿ ನಿಮ್ಮ ನಾಯಕರೇ ಅವರನ್ನು ಸಮಾಧಾನ ಮಾಡಬೇಕು ಎಂದು ಕೈ ಚೆಲ್ಲಿದರು. ಹೀಗಾಗಿ ನಾನು ಯಾವ ಶಾಸಕರ ಜತೆಯೂ ಮಾತನಾಡಿಲ್ಲ, ಕುಟುಂಬದವರ ಜತೆ ಸಂಕ್ರಾಂತಿ ಆಚರಿಸುತ್ತಿದ್ದೇನೆ ಎಂದು ದೇವೇಗೌಡ ಹೇಳಿದರೆ, ನಾನೂ ರಿಲ್ಯಾಕ್ಸ್‌ ಆಗಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದ್ದರು.

ಅನಂತರ ರಾಹುಲ್‌ ಮತ್ತು ರಾಜ್ಯ ಉಸ್ತುವಾರಿ ವೇಣುಗೋಪಾಲ್‌ ಅವರು ರಾಜ್ಯ ನಾಯಕರನ್ನು ತರಾಟೆಗೆ ತೆಗೆದುಕೊಂಡು ಬಿಜೆಪಿ ಸಂಪರ್ಕ ದಲ್ಲಿರುವ ಶಾಸಕರ ಮನವೊಲಿಸಿ ವಾಪಸ್‌ ಕರೆಸುವಂತೆ ತಾಕೀತು ಮಾಡಿದರು.ಆ ಬಳಿಕ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌, ಜಮೀರ್‌ ಅಹಮದ್‌, ಈಶ್ವರ್‌ ಖಂಡ್ರೆ ಅತೃಪ್ತ ಶಾಸಕರ ಜತೆ ಸಂಪರ್ಕ ಸಾಧಿಸಿ ಅವರನ್ನು ಮನವೊಲಿಸುವಲ್ಲಿ ಯಶಸ್ವಿಯಾದರು. 

 ಸಮ್ಮಿಶ್ರ ಸರಕಾರ ಸುಭದ್ರವಾಗಿದೆ. ಆದರೂ ಮಾಧ್ಯಮಗಳೇ ಸರಕಾರಕ್ಕೆ ಡೆಡ್‌ಲೈನ್‌ ಕೊಡುತ್ತಿವೆ. ನನಗೆ ನನ್ನ ರಾಜಕೀಯ ಶಕ್ತಿ ಗೊತ್ತಿದೆ. ಯಾರು ಏನು ಮಾಡಿದರೂ ಸಮ್ಮಿಶ್ರ ಸರಕಾರಕ್ಕೆ ಯಾವುದೇ ತೊಂದರೆ ಮಾಡಲು ಸಾಧ್ಯವಿಲ್ಲ.
– ಎಚ್‌.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ

 ರಾಜ್ಯದಲ್ಲಿನ ಸದ್ಯದ ರಾಜಕೀಯ ಬೆಳವಣಿಗೆಗೆ ಬಿಜೆಪಿ ಕಾರಣವಲ್ಲ. ಮೈತ್ರಿ ಸರಕಾರದ ಅಸಹಜ ಮೈತ್ರಿ ಪರಿಣಾಮವೇ ಸದ್ಯದ ವಿದ್ಯಮಾನಗಳಿಗೆ ಕಾರಣ. ಸರಕಾರ ರಚನೆಗಾಗಿ ಆಡಳಿತ ಹಾಗೂ ಅಭಿವೃದ್ಧಿಯನ್ನು ಸಂಪೂರ್ಣ ಅವಗಣಿಸಿ ಜನರನ್ನು ತಪ್ಪು ದಾರಿಗೆಳೆಯುತ್ತಿರುವ ಮುಖ್ಯಮಂತ್ರಿಗಳು ಈ ಬೆಳವಣಿಗೆಗಾಗಿ ರಾಜ್ಯದ ಜನರ ಕ್ಷಮೆಯಾಚಿಸಬೇಕು.
– ಸಿ.ಟಿ. ರವಿ
ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ

 ಬಿಜೆಪಿ ಮುಖಂಡರು ಇನ್ನೂ ಭ್ರಮೆಯಲ್ಲಿದ್ದಾರೆ. ಸಮ್ಮಿಶ್ರ ಸರಕಾರವನ್ನು ಅಸ್ಥಿರಗೊಳಿಸುವ ವಿಷಯದಲ್ಲಿ ಅವರಿಗೆ ಭ್ರಮನಿರಸನ ಆಗಲಿದೆ. ತುರ್ತಾಗಿ ಮುಖ್ಯಮಂತ್ರಿಯಾಗಬೇಕು ಎಂದು ಆಪರೇಷನ್‌ ಕಮಲಕ್ಕೆ ಮುಂದಾಗಿದ್ದಾರೆ. ಇದಕ್ಕಾಗಿ ಬೇರೆ ಪಕ್ಷದ ಶಾಸಕರಿಗೆ ಕೋಟ್ಯಂತರ ರೂ.ಆಮಿಷ ಒಡ್ಡುತ್ತಿದ್ದಾರೆ. ಇದು ಭ್ರಷ್ಟಾಚಾರದ ಹಣ ಅಲ್ಲದೆ ಮತ್ತೇನು?
– ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next