Advertisement

ಮತ್ತೆ ಆಪರೇಷನ್‌ ಕಮಲ?

06:00 AM Dec 04, 2018 | Team Udayavani |

ಬೆಂಗಳೂರು: ಸಮ್ಮಿಶ್ರ ಸರ್ಕಾರ ಉರುಳಿಸಲು ಮತ್ತೆ ಆಪರೇಷನ್‌ ಕಮಲ ಕಾರ್ಯಾಚರಣೆ ಪ್ರಯತ್ನ ನಡೆಯುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಶಾಸಕ ಶ್ರೀರಾಮುಲು ಆಪ್ತ ಸಹಾಯಕ ದುಬೈ ಮೂಲದ ಉದ್ಯಮಿ ಜತೆ ನ.27 ರಂದು ಮೊಬೈಲ್‌ ಮೂಲಕ ಮಾತುಕತೆ ನಡೆಸಿದ್ದಾರೆ ಎನ್ನಲಾದ ಆಡಿಯೋ ಸಹ ಬಹಿರಂಗಗೊಂಡಿದೆ. 10 ರಿಂದ 12 ಶಾಸಕರು ಬಿಜೆಪಿಗೆ ಬರಲು ಸಿದ್ಧರಿದ್ದಾರೆ. ತಲಾ 20 ರಿಂದ 25 ಕೋಟಿ ರೂ. ಹಣ ಹಾಗೂ ಸಚಿವ ಸ್ಥಾನದ ಭರವಸೆ ನೀಡಲಾಗಿದೆ ಎಂದು ಆಡಿಯೋದಲ್ಲಿದ್ದು ಆ ಸಂಭಾಷಣೆ ಶ್ರೀರಾಮುಲು ಆಪ್ತ ಹಾಗೂ ದುಬೈ ಮೂಲದ ಉದ್ಯಮಿ ಜತೆ ನಡೆದಿದ್ದು ಎಂದು ಹೇಳಲಾಗಿದೆ. 

Advertisement

ಸಂಭಾಷಣೆ ವೇಳೆ ಈ ಹಿಂದೆ ಬರುತ್ತೇವೆ ಎಂದು ಹೇಳಿದವರಾ ಅಥವಾ ಹೊಸ ಶಾಸಕರಾ ಎಂದು ಒಬ್ಬ ವ್ಯಕ್ತಿ ಪ್ರಶ್ನಿಸುತ್ತಾನೆ. ಅದಕ್ಕೆ ಮತ್ತೂಬ್ಬ ಹೌದು ಅದೇ ರಮೇಶ್‌ ಜಾರಕಿಹೊಳಿ, ಬಿ.ಸಿ. ಪಾಟೀಲ್‌, ನಾಗೇಂದ್ರ, ಭೀಮಾ ನಾಯ್ಕ, ಆನಂದ್‌ ಸಿಂಗ್‌ ಸೇರಿ 12 ಜನ ಎಂದು ಹೇಳುತ್ತಾನೆ.  ಜತೆಗೆ, ಕಾಂಗ್ರೆಸ್‌ ಶಾಸಕರು ಮೊಬೈಲ್‌ನಲ್ಲಿ ಮಾತನಾಡಲು ಹೆದರುತ್ತಾರೆ. ಹೀಗಾಗಿ, ಯಡಿಯೂರಪ್ಪ, ಶ್ರೀರಾಮುಲು, ಜನಾರ್ದನರೆಡ್ಡಿ ಜತೆ ಸಂಪರ್ಕದಲ್ಲಿದ್ದು ನೇರವಾಗಿ ಮಾತನಾಡುತ್ತಿದ್ದಾರೆ. ವಸಂತನಗರ ನಿವಾಸದಲ್ಲಿ
ರಮೇಶ್‌ ಜಾರಕಿಹೊಳಿ -ಶ್ರೀರಾಮುಲು ಮಾತನಾಡಲಿದ್ದಾರೆ ಎಂದು ಆ ವ್ಯಕ್ತಿ ತಿಳಿಸುತ್ತಾನೆ.

ಗುಪ್ತದಳದಿಂದಲೂ ಮಾಹಿತಿ: ಬಿಜೆಪಿ ಕಾಂಗ್ರೆಸ್‌ ಶಾಸಕರನ್ನು ಸೆಳೆಯಲು ಯತ್ನಿಸುತ್ತಿರುವ ಬಗ್ಗೆ ಗುಪ್ತದಳ ಅಧಿಕಾರಿಗಳು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಶಾಸಕರ ಮೇಲೆ ನಿಗಾ ವಹಿಸಲಾಗಿದೆ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಪ್ರಮುಖ ನಾಯಕರಿಗೆ ಶಾಸಕರ ಚಲನವಲನ ಬಗ್ಗೆ ನಿಗಾ ಇಡುವಂತೆ ಸೂಚಿಸಲಾಗಿದೆ ಎಂದು ಹೇಳಲಾಗಿದೆ.

ನಾನು ಆಪರೇಷನ್‌ ಕಮಲಕ್ಕೆ ಕೈ ಹಾಕಿಲ್ಲ. ನನ್ನ ಆಪ್ತ ಸಹಾಯಕನಿಗೆ ಹಿಂದಿ ಬರುವುದಿಲ್ಲ. ಬೇಕಂತಲೇ ನಮ್ಮ ಹೆಸರಿಗೆ ಮಸಿ ಬಳಿಯಲು ಇಂತಹ ಆರೋಪ ಮಾಡಲಾಗುತ್ತಿದೆ. ಇದೆಲ್ಲವೂ ಕಾಂಗ್ರೆಸ್‌-ಜೆಡಿಎಸ್‌ ಕುತಂತ್ರ.
● ಶ್ರೀರಾಮುಲು, ಬಿಜೆಪಿ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next