Advertisement
ಉತ್ತರ ಭಾರತದಾದ್ಯಂತ 17 ಕಡೆಗಳಲ್ಲಿ ಬುಧವಾರ ದಾಳಿ ನಡೆಸಿದ ರಾಷ್ಟ್ರೀಯ ತನಿಖಾ ಸಂಸ್ಥೆ ಇವರೆಲ್ಲರನ್ನೂ ವಿಚಾರಣೆಗೊಳಪಡಿಸಿ ಸೆರೆ ಹಿಡಿದಿದೆ. ಇವರೆಲ್ಲರೂ, ಐಸಿಸ್ ಉಗ್ರರಿಂದ ಸ್ಫೂರ್ತಿಗೊಂಡು ನಾಲ್ಕೈದು ತಿಂಗಳು ಹಿಂದಷ್ಟೇ ರೂಪುಗೊಂಡಿದ್ದ ಹರ್ಕತ್ ಉಲ್ ಹರ್ಬ್ ಎ ಇಸ್ಲಾಂ ಎಂಬ ಉಗ್ರ ಸಂಘಟನೆಗೆ ಸೇರಿದವರು ಎಂದು ಎನ್‌ಐಎ ಹೇಳಿದೆ. ಜತೆಗೆ ಐಸಿಸ್ ಜತೆಗಿನ ನಂಟಿನ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ತಿಳಿಸಿದೆ.
ಉತ್ತರ ಭಾರತ ಅದರಲ್ಲೂ ವಿಶೇಷವಾಗಿ ರಾಷ್ಟ್ರ ರಾಜಧಾನಿ ದೆಹಲಿಯೇ ಈ ಸಂಘಟನೆಯ ಟಾರ್ಗೆಟ್. ಸ್ಥಳೀಯ ಆರ್‌ಎಸ್‌ಎಸ್ ಕಚೇರಿ, ದೆಹಲಿ ಪೊಲೀಸ್ ಪ್ರಧಾನ ಕಚೇರಿ, ರಾಜಕಾರಣಿಗಳು, ಗಣ್ಯವ್ಯಕ್ತಿಗಳನ್ನು ಗುರಿಯಾಗಿಸಿ ದಾಳಿ ನಡೆಸಲು ಸಂಚು ಮಾಡುತ್ತಿದ್ದರು. ಜನನಿಬಿಡ ಪ್ರದೇಶಗಳಲ್ಲಿ ಬಾಂಬ್ ಸ್ಫೋಟಗಳನ್ನು ನಡೆಸಿ ಅನೇಕ ಸಾವು-ನೋವು ಉಂಟುಮಾಡುವುದೂ ಇವರ ಗುರಿಯಾಗಿತ್ತು. ಯಾರಿವರು?
ಬಂಧಿತರೆಲ್ಲರೂ 20ರಿಂದ 30 ವರ್ಷದೊಳಗಿನ ಯುವಕರಾಗಿದ್ದು, ಎಲ್ಲರೂ ಮಧ್ಯಮ ವರ್ಗದ ಕುಟುಂಬಗಳಿಗೆ ಸೇರಿದವರಾಗಿದ್ದಾರೆ. ಇವರೆಲ್ಲರನ್ನೂ ಮೂಲಭೂತವಾದಿಗಳನ್ನಾಗಿ ಪರಿವರ್ತಿಸಲಾಗಿದೆ. ಒಟ್ಟು 16 ಜನರನ್ನು ವಿಚಾರಣೆಗಾಗಿ ವಶಪಡಿಸಿಕೊಳ್ಳಲಾಗಿದ್ದು, ಇವರಲ್ಲಿ 10 ಜನರನ್ನು ಬಂಧಿಸಲಾಗಿದೆ.
Related Articles
ಬಂಧಿತರಿಂದ ಭಾರೀ ಸ್ಫೋಟಕ ಸಾಮಗ್ರಿಗಳು, 12 ಪಿಸ್ತೂಲುಗಳು, ಶಸ್ತ್ರಾಸ್ತ್ರಗಳು, ಮದ್ದು-ಗುಂಡುಗಳು, ದೇಶೀಯವಾಗಿ ನಿರ್ಮಿಸಿರುವ ರಾಕೆಟ್ ಲಾಂಚರ್‌ಗಳು, 25 ಕೆಜಿ ಪೊಟ್ಯಾಶಿಯಂ ನೈಟ್ರೇಟ್, ಪೊಟ್ಯಾಶಿಯಂ ಕ್ಲೋರೇಟ್, ಸಲ#ರ್ ಪೇಸ್ಟ್ ಮತ್ತು ಸಕ್ಕರೆಯನ್ನು ವಶಪಡಿಸಿಕೊಳ್ಳಲಾಗಿದೆ. ಈ ರಾಸಾಯನಿಕಗಳನ್ನು ಬಾಂಬ್‌ಗಳ ತಯಾರಿಗಾಗಿ ಬಳಕೆ ಮಾಡಲಾಗುತ್ತಿತ್ತು. ಜತೆಗೆ, 7.5 ಲಕ್ಷ ರೂ. ನಗದು, ಅಂದಾಜು 100 ಮೊಬೈಲ್ ಫೋನ್‌ಗಳು, 120 ಅಲಾರ್ಮ್ ಕ್ಲಾಕ್‌ಗಳು, 135 ಸಿಮ್ ಕಾರ್ಡ್‌ಗಳು, ಲ್ಯಾಪ್ ಟಾಪ್ ಗಳು ಹಾಗೂ ಮೆಮೊರಿ ಕಾರ್ಡುಗಳನ್ನು ಜಪ್ತಿ ಮಾಡಲಾಗಿದೆ.
Advertisement
ಯಾರಿದರ ರೂವಾರಿ?ಈ ಸಂಘಟನೆಯ ನೇತೃತ್ವವನ್ನು ಮುಫ್ತಿ ಸೊಹೈಲ್ ಎಂಬಾತ ವಹಿಸಿಕೊಂಡಿದ್ದು, ಈತ ದೆಹಲಿಯಲ್ಲಿದ್ದುಕೊಂಡು ಈ ಸಂಘಟನೆಯನ್ನು ನಿರ್ವಹಿಸುತ್ತಿದ್ದ. ಈತ ಉತ್ತರ ಪ್ರದೇಶದ ಅನ್ರೋಹಾದಲ್ಲಿರುವ ಮಸೀದಿಯಲ್ಲಿ ಧರ್ಮಬೋಧಕನೂ ಆಗಿದ್ದಾನೆ. ಈತ ವಿದೇಶದಲ್ಲಿರುವ ವಿಧ್ವಂಸಕಾರಿ ವ್ಯಕ್ತಿಯೊಬ್ಬನೊಂದಿಗೆ ನೇರ ಸಂಪರ್ಕದಲ್ಲಿದ್ದ. ಆತನನ್ನೂ ಸದ್ಯದಲ್ಲೇ ಪತ್ತೆ ಹಚ್ಚಲಾಗುತ್ತದೆ ಎಂದು ಮಿತ್ತಲ್ ತಿಳಿಸಿದ್ದಾರೆ. ದಾಳಿ ನಡೆದಿದ್ದು ಹೇಗೆ?
ನಾಲ್ಕೈದು ತಿಂಗಳುಗಳ ಹಿಂದಷ್ಟೇ ರೂಪುಗೊಂಡಿದ್ದ ಈ ಸಂಘಟನೆಯ ಚಲನವಲನಗಳು ಅನುಮಾನಾಸ್ಪದವಾಗಿದ್ದರಿಂದ ಇದರ ಮೇಲೆ ಎನ್‌ಐಎ ನಿಗಾ ವಹಿಸಿತ್ತು. ಈ ಸಂಘಟನೆಯು ವಿಧ್ವಂಸಕ ಕೃತ್ಯಗಳಿಗೆ ಸಜ್ಜಾಗಿದೆ ಎಂಬ ಸುಳಿವು ಸಿಗುತ್ತಲೇ ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳದ ಸಹಾಯದಿಂದ ಉತ್ತರ ಪ್ರದೇಶ ಮತ್ತು ದೆಹಲಿ ಸೇರಿದಂತೆ 17ಕ್ಕೂ ಹೆಚ್ಚು ಕಡೆ ಇವರಿಗಾಗಿ ಹುಡುಕಾಟ ನಡೆಸಲಾಗಿತ್ತು. ದೆಹಲಿಯ ಸೀಲಾಂಪುರ್, ಉತ್ತರ ಪ್ರದೇಶದ ಅನ್ರೋರಾ, ಹಾಪುರ್, ಮೀರತ್, ಲಕ್ನೋಗಳಲ್ಲಿ ಶೋಧ ನಡೆಸಲಾಗಿತ್ತು. ಇದರ ಫಲವಾಗಿ, ಸಂಘಟನೆಯ 10 ಸದಸ್ಯರನ್ನು ಬಂಧಿಸಲಾಗಿದೆ. ಉತ್ತರ ಪ್ರದೇಶದ ಪಶ್ಚಿಮ ಭಾಗದ ಅನ್ರೋಹಾದಲ್ಲೇ ಸಂಘಟನೆಯ ಐವರನ್ನು ಸೆರೆ ಹಿಡಿಯಲಾಗಿದೆ ಎಂದು ಎನ್‌ಐಎ ಮುಖ್ಯಸ್ಥರು ವಿವರಿಸಿದ್ದಾರೆ. ದೆಹಲಿಯಲ್ಲಿ ಐವರ ಬಂಧನ
ಕಾರ್ಯಾಚರಣೆಗೆ ಸಂಬಂಧಿಸಿದಂತೆ, ದೆಹಲಿಯ ಈಶಾನ್ಯ ಭಾಗದಲ್ಲಿ ನೆಲೆಸಿದ್ದ ಐವರನ್ನು ವಶಕ್ಕೆ ಪಡೆಯಲಾಗಿದೆ. ದೆಹಲಿ ಪೊಲೀಸರ ವಿಶೇಷ ದಳದ ನೆರವಿನಿಂದ ನಡೆಸಲಾದ ದಾಳಿಯಲ್ಲಿ ಇವರನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರ ಪೈಕಿ ಎಂಜಿನಿಯರಿಂಗ್ ವಿದ್ಯಾರ್ಥಿಯೂ ಸೇರಿದ್ದಾನೆ ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ.