Advertisement

ಪ್ರವಾಸದಲ್ಲೂ ನೆಮ್ಮದಿ ಕದಡಿದ ಆಪರೇಷನ್‌!

04:45 PM Jan 29, 2021 | Team Udayavani |

ಮಸ್ಕಿ: ಗ್ರಾಪಂಗೆ ಆಯ್ಕೆಯಾದ ಹೊಸ ಸದಸ್ಯರಿಗೆ ಗೆದ್ದ ಸಂಭ್ರಮದ ಜತೆ ಪ್ರವಾಸ ಭಾಗ್ಯವೇನೊ ಒಲಿದಿದೆ. ಆದರೆ ಸಂಭ್ರಮದಲ್ಲಿ ಮೈ ಮರೆತು ತೇಲಾಡುವಂತಿಲ್ಲ; ಸ್ವಲ್ಪ ಯಾಮಾರಿದರೂ ವಿರೋಧ ಬಣದ ಗುಂಪು ದಿಢೀರ್‌ ಎತ್ತಂಗಡಿ ಮಾಡಲಿದೆ!. ತಾಲೂಕಿನ ಗ್ರಾಪಂಗೆ ಆಯ್ಕೆಯಾದ
ಸದಸ್ಯರನ್ನು ಕ್ಷೇತ್ರದಿಂದ ಮಾತ್ರವಲ್ಲ; ಅವರು ಯಾವ ರಾಜ್ಯ?, ಯಾವ ಪಟ್ಟಣದಲ್ಲಿದ್ದರೂ? ಹುಡುಕಾಡಿ ಅಪರೇಷನ್‌ ಮಾಡಲಾಗುತ್ತಿದೆ.

Advertisement

ಇಂತಹ ಹಲವು ಘಟನೆಗಳು ನಡೆದಿದ್ದು, ಈಗ ಕಾಂಗ್ರೆಸ್‌ ಮತ್ತು ಬಿಜೆಪಿ ಬೆಂಬಲಿತರೆಂದು ಟೂರ್‌ನಲ್ಲಿರುವ ಸದಸ್ಯರಿಗೆ ದಿಗಿಲುಂಟು ಮಾಡಿದೆ. ಕೇವಲ ಸದಸ್ಯರು, ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳಿಗೆ ಮಾತ್ರವಲ್ಲ; ಮಸ್ಕಿ ಉಪ ಚುನಾವಣೆಗೆ ಸ್ಪರ್ಧೆ ಮಾಡುವವರು ಹಾಗೂ ಮುಂಚೂಣಿ ನಾಯಕರಿಗೂ ಇದು ಪ್ರತಿಷ್ಠೆ ಪ್ರಶ್ನೆಯಾಗಿದೆ. ಪಂಚಾಯಿತಿಗೆ ಆಯ್ಕೆಯಾದ ಸದಸ್ಯರನ್ನು ದುರ್ಬೀನು ಹಾಕಿ ಹುಡುಕಿಯೂ ಆಪರೇಷನ್‌ ಮಾಡುವ ಕಸರತ್ತು ಜೋರಾಗಿ
ಸಾಗಿದೆ.

ಜಿದ್ದಾ-ಜಿದ್ದಿಗೆ ಸೈ: ಮಸ್ಕಿ ಕ್ಷೇತ್ರದಲ್ಲಿ ಒಟ್ಟು 26 ಗ್ರಾಪಂಗಳಿದ್ದು, ಪಂಚಾಯಿತಿ ಆಡಳಿತ ಚುಕ್ಕಾಣಿ ಹಿಡಿಯುವುದು ಬಿಜೆಪಿ ಮತ್ತು ಕಾಂಗ್ರೆಸ್‌ ಪಾಲಿಗೆ ಪ್ರತಿಷ್ಠೆಯಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಮಸ್ಕಿ ಕ್ಷೇತ್ರ ಉಪ ಚುನಾವಣೆ ಘೋಷಣೆಯಾಗುವುದರಿಂದ ಗ್ರಾಪಂ ಚುಕ್ಕಾಣಿಯೇ ಬೈ ಎಲೆಕ್ಷನ್‌ಗೆ ದಿಕ್ಸೂಚಿಯಾಗಲಿದೆ ಎನ್ನುವ ರಾಜಕಾರಣಿಗಳ ದೂರದೃಷ್ಟಿ ಇಂತಹ ಜಿದ್ದಾಜಿದ್ದಿಗೆ ಕಾರಣವಾಗಿದೆ.

ಆಯಾ ಪಂಚಾಯಿತಿಗೆ ಹಂಚಿಕೆಯಾದ ಮೀಸಲಾತಿ ಪೈಕಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳಂದೆನಿಸಿಕೊಂಡವರು ಮಾತ್ರವಲ್ಲ; ಸ್ವತಃ ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್‌ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಆರ್‌. ಬಸನಗೌಡ ತುರುವಿಹಾಳರಿಗೆ ಇದು ಅಸ್ತಿತ್ವದ ಪ್ರಶ್ನೆಯಾಗಿದೆ.

ಇವರ ಅಸ್ತಿತ್ವ ಉಳಿವಿಗಾಗಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್‌ ಪರವಾಗಿ ಅವರ ಪುತ್ರ ಪ್ರಸನ್ನ ಪಾಟೀಲ್‌ ತಮ್ಮ ಆಪರೇಷನ್‌ ಜವಾಬ್ದಾರಿ ವಹಿಸಿಕೊಂಡಿದ್ದರೆ, ಇತ್ತ ಕಾಂಗ್ರೆಸ್‌ನಲ್ಲಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್‌ ಯದ್ದಲದಿನ್ನಿ, ಆರ್‌. ಬಸನಗೌಡ ತುರುವಿಹಾಳ ಸಹೋದರ ಆರ್‌. ಸಿದ್ದನಗೌಡ ಇಂತಹ ಕಾರ್ಯತಂತ್ರಕ್ಕೆ ಇಳಿದಿದ್ದಾರೆ. ಕೇವಲ ಮಸ್ಕಿಯಿಂದ ಟೂರ್‌ ಹೋದವರಿಗೆ ಮಾರ್ಗದರ್ಶನ ನೀಡುವುದು ಮಾತ್ರವಲ್ಲದೇ ಸ್ವತಃ ಇವರೇ ಟೂರ್‌ ಹೋದ ಸದಸ್ಯರ ಜತೆಗೆ ಪರ ರಾಜ್ಯದಲ್ಲಿ ಸಂಚಾರ ನಡೆಸಿದ್ದಾರೆ. 27 ಪಂಚಾಯಿತಿಗಳಲ್ಲಿ ಹೆಚ್ಚು ಪಂಚಾಯಿತಿ ಚುಕ್ಕಾಣಿ ಹಿಡಿಯುವುದೇ ಇವರ ಗುರಿಯಾಗಿದ್ದು, ಇದಕ್ಕಾಗಿ ತನು-ಮನ ಹಾಗೂ ಧನ ವ್ಯಯಿಸಿ ಜಿದ್ದಾಜಿದ್ದಿ ಪ್ರದರ್ಶಿಸುತ್ತಿರುವುದು ಎಲ್ಲರೂ ಮಸ್ಕಿ ರಾಜಕಾರಣದತ್ತ ತಿರುಗಿ ನೋಡುವಂತಾಗಿದೆ.

Advertisement

ಠಾಣೆ ಮೆಟ್ಟಿಲೇರಿ ಸ್ಥಾನ ಭರ್ತಿ
ಬಹುತೇಕ ಗ್ರಾಪಂಗಳಲ್ಲಿ ಬಿಜೆಪಿ-ಕಾಂಗ್ರೆಸ್‌ 2 ಸಮಬಲದ ಸ್ಥಾನ ಹೊಂದಿವೆ. ಹಾಲಾಪುರ, ತಲೆಖಾನ್‌, ಮೆದಕಿನಾಳ, ಗುಂಡಾ, ಗುಡದೂರು ಸೇರಿ ಹಲವಡೆ ಒಂದೆರಡು ಸ್ಥಾನ ಮಾತ್ರ ಬಾಕಿ ಇವೆ. ಬಾಕಿ ಸ್ಥಾನ ಭರ್ತಿಗೆ ಗುಜರಾತ, ಗೋವಾ, ಕೇರಳ, ತಮಿಳುನಾಡಲ್ಲಿ ಟೂರ್‌ ನಲ್ಲಿರುವ ಸದಸ್ಯರಿಗೆ ಗಾಳ ಹಾಕಲಾಗಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಪ್ರವಾಸಿ ತಾಣದಲ್ಲಿದ್ದ ತಾಂಡಾಸದಸ್ಯೆಯೊಬ್ಬರನ್ನು ಹಿಡಿಯಲು ಸದಸ್ಯೆ ಮಗನಿಂದಲೇ ತಾಯಿ ಮಿಸ್ಸಿಂಗ್‌ ದೂರು ನೀಡಿಸಿ ತಮಗೆ ಬೇಕಿದ್ದ ಸ್ಥಾನ ರಾಜಕೀಯ ಪಕ್ಷವೊಂದು ಪಡೆದಿದೆ. ಇದೇ ರೀತಿ ಹಲವು ಪ್ರಕರಣಗಳಿವೆ.

ಪ್ರತ್ಯೇಕ ಗುಂಪು
ಗ್ರಾಮ ಪಂಚಾಯತ್‌ ಚುಕ್ಕಾಣಿ ಹಿಡಿಯುವುದಕ್ಕಾಗಿ ಸ್ಥಳೀಯವಾಗಿದ್ದರೆ ಪ್ರಭಾವ ಬೀರಬಹುದು ಎನ್ನುವ ಕಾರಣಕ್ಕೆ ದೂರದೂರಿಗೆ ಸದಸ್ಯರು ಪ್ರವಾಸ ಹೋಗಿದ್ದಾರೆ. ಅಲ್ಲಿಯೂ ಅವರ ನಿದ್ದೆಗೆಡಿಸಲಾಗಿದೆ. ಇದಕ್ಕಾಗಿ ಸದಸ್ಯರನ್ನು ಕಾಯುವುದಕ್ಕಾಗಿಯೇ ಪ್ರತ್ಯೇಕ ಗುಂಪು ಕಾಂಗ್ರೆಸ್‌-ಬಿಜೆಪಿ ಎರಡು ಕಡೆಗೂ ರಚನೆ ಮಾಡಲಾಗಿದೆ. ಇವರು ಸದಸ್ಯರಲ್ಲದಿದ್ದರೂ ಸದಸ್ಯರ ಬೇಕು-ಬೇಡ ಅವರ ಚಲನವಲನ ತಿಳಿದುಕೊಳ್ಳುವುದಕ್ಕಾಗಿಯೇ 4-5 ಜನರನ್ನು ನೇಮಿಸಿರುವುದು ಗಮನಾರ್ಹ ಸಂಗತಿ.

*ಮಲ್ಲಿಕಾರ್ಜುನ ಚಿಲ್ಕರಾಗಿ

Advertisement

Udayavani is now on Telegram. Click here to join our channel and stay updated with the latest news.

Next