Advertisement

ಕಾಂಗ್ರೆಸ್‌ನಿಂದ ಆಪರೇಷನ್‌ ತಿರುಗೇಟು?

02:34 AM May 11, 2019 | Team Udayavani |

ಹುಬ್ಬಳ್ಳಿ/ಬೆಳಗಾವಿ: ಲೋಕಸಭೆ ಚುನಾವಣೆ ಫ‌ಲಿತಾಂಶ ಹತ್ತಿರವಾಗುತ್ತಿದ್ದಂತೆ ‘ಆಪರೇಷನ್‌ ಪೈಪೋಟಿ’ಯೂ ಜೋರಾಗಿದೆ.

Advertisement

ಆಡಳಿತ ಪಕ್ಷಗಳಲ್ಲಿ 20ಕ್ಕೂ ಹೆಚ್ಚು ಅತೃಪ್ತ ಶಾಸಕರಿದ್ದು, ಮೇ 23ರ ಬಳಿಕ ರಾಜ್ಯದ ಸಮ್ಮಿಶ್ರ ಸರಕಾರ ಉಳಿಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿದ ಬೆನ್ನಲ್ಲೇ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಆಪರೇಷನ್‌ ಹಸ್ತ ಮಾಡುವುದಾಗಿ ತಿರುಗೇಟು ನೀಡಿದ್ದಾರೆ.

ಕುಂದಗೋಳ ಚುನಾವಣೆ ನಿಮಿತ್ತ ಪ್ರವಾಸದಲ್ಲಿರುವ ಬಿಎಸ್‌ವೈ, ಮೈತ್ರಿಪಕ್ಷಗಳಲ್ಲಿ ಆಂತರಿಕ ಕಚ್ಚಾಟ ಹೆಚ್ಚಾಗಿದೆ. ಸಚಿವ ಸಂಪುಟ ಸಭೆ ಮುಗಿಯುತ್ತಿದ್ದಂತೆ ಮುಖ್ಯಮಂತ್ರಿ ಸಹಿತ ಅನೇಕ ನಾಯಕರು ರೆಸಾರ್ಟ್‌ ಸೇರಿದ್ದಾರೆ. ಇದರಿಂದಾಗಿ ಮೈತ್ರಿ ಸರಕಾರದಲ್ಲಿ ಅಸಮಾಧಾನ ಭುಗಿಲೆದ್ದಿದೆ ಎಂಬುದು ಗೋಚರಿಸುತ್ತಿದೆ. ಎರಡು ಉಪ ಚುನಾವಣೆಗಳ ಅನಂತರ ಬಿಜೆಪಿ ಶಾಸಕರ ಸಂಖ್ಯೆ 104ರಿಂದ 106ಕ್ಕೆ ಹೆಚ್ಚಲಿದೆ. ಮೈತ್ರಿಪಕ್ಷಗಳ 20ಕ್ಕೂ ಹೆಚ್ಚು ಶಾಸಕರ ಅತೃಪ್ತಿ ಸರಕಾರದ ಪತನಕ್ಕೆ ಕಾರಣವಾಗಲಿದೆ ಎಂದರು.

10 ಸೆಳೆದರೆ ನಾವು 20ಕ್ಕೆ ಕೈಹಾಕ್ತೇವೆ
ಬಿಜೆಪಿಯೇನಾದರೂ ನಮ್ಮ ಹತ್ತು ಶಾಸಕರಿಗೆ ಕೈ ಹಾಕಿದರೆ, ನಾವು ಅವರ ಇಪ್ಪತ್ತು ಶಾಸಕರನ್ನು ಸೆಳೆಯುತ್ತೇವೆ. ಆ ಮಟ್ಟದ ಸಂಪರ್ಕ, ಸಾಮರ್ಥ್ಯ ನಮಗೂ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಎಚ್ಚರಿಕೆ ನೀಡಿದ್ದಾರೆ. ‘ಉದಯವಾಣಿ’ ಜತೆ ಮಾತನಾಡಿದ ಅವರು, ಕಳೆದೊಂದು ವರ್ಷದಿಂದ ಬಿಜೆಪಿಯವರು ಆಡುತ್ತಿರುವ ಎಲ್ಲ ಆಟಗಳನ್ನು ನೋಡಿದ್ದೇವೆ. ಅವರ ಆಟಕ್ಕೆ ಪ್ರತಿ ಆಟದ ಎದುರೇಟು ನೀಡಬಲ್ಲ ಕಲೆ ನಮಗೂ ಗೊತ್ತಿದೆ ಎಂದು ಖಡಕ್‌ ಎಚ್ಚರಿಕೆ ನೀಡಿದರು.

ರಮೇಶ್‌ ಜತೆ ನಾಲ್ವರ ರಾಜೀನಾಮೆ?
ಮೇ 23ರ ಬಳಿಕ ರಮೇಶ್‌ ಜಾರಕಿಹೊಳಿ ಜತೆ ನಾಲ್ಕು ಶಾಸಕರು ರಾಜೀನಾಮೆ ನೀಡಲಿದ್ದಾರೆಯೇ? ಈ ಬಗ್ಗೆ ಸ್ವತಃ ರಮೇಶ್‌ ಅವರೇ, ತಮ್ಮ ಆಪ್ತರಿಗೆ ಸುಳಿವು ನೀಡಿದ್ದಾರೆ ಎಂದು ತಿಳಿದುಬಂದಿದೆ. ಮೈತ್ರಿ ಸರಕಾರದ ಚಟುವಟಿಕೆಗಳಿಂದ ದೂರ ಉಳಿದಿರುವ ರಮೇಶ ಜಾರಕಿಹೊಳಿ, ಶುಕ್ರವಾರ ನಗರದ ಖಾಸಗಿ ಹೊಟೇಲ್ನಲ್ಲಿ ಯಮಕನಮರಡಿಯ ಬಿಜೆಪಿ ಹಿರಿಯ ಮುಖಂಡ ಬಿ.ಬಿ.ಹಂಜಿ ಹಾಗೂ ಅವರ ಪುತ್ರ ರವಿ ಹಂಜಿ ಜತೆ ಅರ್ಧಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ ಅವರು, ಕ್ಷೇತ್ರದ ಮಾಹಿತಿ ಹಾಗೂ ಅಲ್ಲಿನ ಬಿಜೆಪಿ ಸಂಘಟನೆ ಕುರಿತು ಚರ್ಚಿಸಿದ್ದಾರೆ. ಮೈತ್ರಿ ಸರಕಾರ ಪತನದ ಅನಂತರ ಬಿಜೆಪಿ ಸರಕಾರ ರಚನೆಯಾಗುವುದು ಖಚಿತ ಎಂದು ಹೇಳಿದ್ದಾರೆ.

Advertisement

ರಮೇಶ ಜಾರಕಿಹೊಳಿ ಅವರಿಗೆ ಕಾಂಗ್ರೆಸ್‌ ಏನೂ ಅನ್ಯಾಯ ಮಾಡಿಲ್ಲ. ಹಲವು ಅವಕಾಶಗಳನ್ನು ನೀಡಿದೆ. ಸಚಿವ ಸ್ಥಾನ ನೀಡಿದ್ದರೂ ಅವರು ಸಂಪುಟ ಸಭೆಗೆ ಬರಲಿಲ್ಲ. ಕೆಲವು ವೈಯಕ್ತಿಕ ಕಾರಣಕ್ಕೆ ಅವರು ಅಸಮಾಧಾನಗೊಂಡಿರಬೇಕು.
– ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next