ಹೊಸದಿಲ್ಲಿ : ನೋಟು ನಿಷೇಧದ ಬಳಿಕ ತಮ್ಮ ಬ್ಯಾಂಕ್ ಖಾತೆಗಳಿಗೆ ಐದು ಲಕ್ಷ ಮೀರಿ ಶಂಕಾಸ್ಪದ ಹಣ ಜಮೆ ಮಾಡಿರುವ ಸುಮಾರು 18 ಲಕ್ಷ ಮಂದಿಯನ್ನು ಆದಾಯ ತೆರಿಗೆ ಇಲಾಖೆ ಗುರುತಿಸಿದೆ; ಮಾತ್ರವಲ್ಲದೆ ಅವರಿಗೆ ಈ ಹಣದ ಮೂಲದ ಬಗ್ಗೆ ವಿವರಣೆ ನೀಡುವಂತೆ ಇ-ಮೇಲ್ ಹಾಗೂ ಎಸ್‌ಎಂಎಸ್ ಸಂದೇಶಗಳನ್ನು ಕಳುಹಿಸಲು ಮುಂದಾಗಿದೆ.
ಈ ವ್ಯಕ್ತಿಗಳು ತಮಗೆ ಇ-ಮೇಲ್ ಅಥವಾ ಎಸ್‌ಎಂಎಸ್ ತಲುಪಿದ 10 ದಿನಗಳ ಒಳಗೆ ಆದಾಯ ತೆರಿಗೆ ಇಲಾಖೆಗೆ ಉತ್ತರ ನೀಡಬೇಕಾಗಿದೆ.
ಆದಾಯ ತೆರಿಗೆ ಇಲಾಖೆಯು ಸಿಬಿಡಿಟಿ ಯೋಜನೆಯಡಿ “ಸ್ವಚ್ಛ ಧನ ಅಭಿಯಾನ’ವನ್ನು ಇಂದು ಮಂಗಳವಾರ ಆರಂಭಿಸಿದೆ. ನ.8ರಂದು ನೋಟು ಅಪನಗದೀಕರಣ ಮಾಡಲಾದ ಬಳಿಕದಲ್ಲಿ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಿರುವ ಹಣವು ಆಯಾ ಖಾತೆದಾರರ ಆದಾಯಕ್ಕೆ ತಾಳೆಯಾಗದಿದ್ದಲ್ಲಿ ಅವರಿಗೆ ಇಲಾಖೆಯು ಉತ್ತರ ನೀಡುವಂತೆ ಸೂಚಿಸಿ ಇ-ಮೇಲ್, ಎಸ್‌ಎಂಎಸ್‌ಗಳನ್ನು ಕಳುಹಿಸಲಿದೆ.
ಆಪರೇಶನ್ ಕ್ಲೀನ್ ಮನಿ ಅಥವಾ ಸ್ವಚ್ಛ ಧನ ಅಭಿಯಾನವು ಒಂದು ತಂತ್ರಾಂಶವಾಗಿದೆ. ಜನರು ತಮ್ಮ ಬ್ಯಾಂಕ್ ಖಾತೆಗಳಲ್ಲಿ ಶಂಕಾಸ್ಪದ ಹಣ ಜಮೆ ಮಾಡಿರುವವರಿಂದ ಪ್ರಾಥಮಿಕ ಉತ್ತರಗಳನ್ನು ಪಡೆದ ಬಳಿಕ ಎಲ್ಲ ಠೇವಣಿದಾರರಿಂದ ಉತ್ತರಗಳನ್ನು ಪಡೆಯಲು ಈ ತಂತ್ರಾಂಶವನ್ನು ಬಳಸಲಾಗುತ್ತದೆ. ಅಗತ್ಯವೆಂದು ಕಂಡುಬಂದಲ್ಲಿ ಮಾತ್ರವೇ ಈ ಜನರ ವಿರುದ್ಧ ಕಾನೂನು ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಕಂದಾಯ ಕಾರ್ಯದರ್ಶಿ ಹಸ್‌ಮುಖ್ ಅಧಿಯಾ ಹೇಳಿದ್ದಾರೆ.