ತೆಕ್ಕಟ್ಟೆ: ಕುಂದಾಪುರದ ಗುಡ್ಡಟ್ಟು ಪ್ರದೇಶದಲ್ಲಿ ತಿಂಗಳುಗಳಿಂದ ನಿರಂತರವಾಗಿ ಭಯದ ವಾತಾವರಣ ಸೃಷ್ಟಿಸಿದ್ದ ಚಿರತೆಯೊಂದು ಕಳೆದ ರಾತ್ರಿ ಬೋನಿಗೆ ಬಿದ್ದಿದೆ.
ಯಡಾಡಿ-ಮತ್ಯಾಡಿ ಗ್ರಾಮದ ಗುಡ್ಡಟ್ಟು ಬಳಿ ಅರಣ್ಯ ಇಲಾಖೆ ಇರಿಸಿದ ಬೋನಿಗೆ ಚಿರತೆ ಬಿದ್ದಿದ್ದು ಬುಧವಾರ ಮುಂಜಾನೆ ಅರಣ್ಯಾಧಿಕಾರಿಗಳು ಚಿರತೆಯನ್ನು ಸುರಕ್ಷಿತವಾಗಿ ರಕ್ಷಿಸಿ ಅಭಯಾರಣ್ಯಕ್ಕೆ ರವಾನಿಸಿದ್ದಾರೆ.
ಶಂಕರನಾರಾಯಣ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿರುವ ಇಲ್ಲಿ ಚಿರತೆ ಉಪಟಳ ಹೆಚ್ಚಿದ್ದು, ದಿನೇ ದಿನೇ ಸಾಕು ಪ್ರಾಣಿಗಳು ಬಲಿಯಾಗುತ್ತಿದ್ದವು. ಈ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಗೆ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕಳೆದ ತಿಂಗಳು ಚಂದ್ರಾವತಿ ಗುಡ್ಡೆಮನೆ ಎನ್ನುವರ ಜಾಗದಲ್ಲಿ ಬೋನು ಇಟ್ಟಿದ್ದರು.
ಸಾಕಷ್ಟು ಉಪಟಳ ನೀಡಿದ್ದ ಚಿರತೆ ಇಂದು ಬೆಳಿಗ್ಗೆ ಬೋನಿಗೆ ಬಿದ್ದಿದೆ. ಸುಮಾರು 5 ವರ್ಷ ಪ್ರಾಯದ ಗಂಡು ಚಿರತೆ ಇದಾಗಿದ್ದು, ಅರಣ್ಯಾಧಿಕಾರಿಗಳು ಚಿರತೆಯನ್ನು ಪರಿಶೀಲಿಸಿ ಅಭಯಾರಣ್ಯಕ್ಕೆ ಬಿಟ್ಟಿದ್ದಾರೆ.