ತುಮಕೂರು: ನಗರ ವ್ಯಾಪ್ತಿಯಲ್ಲಿರುವ ಹೊರವಲಯಕ್ಕೆ ಹೊಂದಿಕೊಂಡಂತಿರುವ ಜಯನಗರದ ಮನೆಯೊಂದಳ ಒಳಗೆ ಶನಿವಾರ ಬೆಳ್ಳಂಬೆಳಗ್ಗೆ ಚಿರತೆಯೊಂದು ನುಗ್ಗಿ ಅಡಗಿ ಕುಳಿತಿದೆ. ಚಿರತೆಯ ಸೆರೆಗಾಗಿ ಅರಣ್ಯ ಇಲಾಖೆ,ಪೊಲೀಸ್ ಸಿಬಂದಿಗಳು ಸತತ 6 ಗಂಟೆಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಮನೆಯೊಳಗೆ ಚಿರತೆ ಕಾಣಿಸಿಕೊಳ್ಳುತ್ತಿದ್ದಂತೆ ಒಳಗಿದ್ದ ಅತ್ತೆ, ಸೊಸೆ ಹೆದರಿ ಕಂಗಾಲಾಗಿ ಬಾತ್‌ರೂಂಗೆ ತೆರಳಿ ಬಾಗಿಲು ಹಾಕಿಕೊಂಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಮನೆಯ ಯಜಮಾನ ರಂಗನಾಥ್ ಹೊರಗಿನಿಂದ ಬಾಗಿಲು ಹಾಕಿ ಅರಣ್ಯ ಇಲಾಖೆ ಅವರಿಗೆ ಸುದ್ದಿ ತಿಳಿಸಿದ್ದಾರೆ.
ಹಾಸನದಿಂದಲೂ ಬಂದಿರುವ ಅರಣ್ಯ ಇಲಾಖೆ ಸಿಬಂದಿಗಳು,ಅರಿವಳಿಕೆ ಚಚ್ಚು ಮದ್ದು, ಬಲೆಗಳು ಮತ್ತು ಬೋನಿನೊಂದಿಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಡ್ರೋನ್ ಕ್ಯಾಮರಗಳನ್ನು ಬಳಸಿಕೊಳ್ಳಲಾಗಿದೆ.
ಮನೆಯೊಳಗೆ ಬಂಧಿಯಾಗಿರುವ ಅತ್ತೆ ವಿಶಾಲಾಕ್ಷಿ ಸೊಸೆ ವಿನುತಾ ಅವರನ್ನು ಮೊದಲು ರಕ್ಷಿಸಲು ಆಧ್ಯತೆ ನೀಡಿ ಪೊಲೀಸರು ಮತ್ತು ಅಗ್ನಿ ಶಾಮಕ ಸಿಬಂದಿಗಳು ಗ್ಯಾಸ್ ಕಟ್ಟರ್ ಬಳಸಿ ಗೋಡೆ ಒಡೆದು ಇಬ್ಬರನ್ನು ಸುರಕ್ಷಿತವಾಗಿ ಹೊರಗೆ ಕರೆ ತಂದಿದ್ದಾರೆ. ರಾತ್ರಿ ಯಾದ ಬಳಿಕ ಅರಿವಳಿಕೆ ಬಳಸಿ ಚಿರತೆಯನ್ನುಸೆರೆ ಹಿಡಿಯುವ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ವರದಿಯಾಗಿದೆ.
ಮಧ್ಯಾಹ್ನದ 3 ಗಂಟೆಯ ವೇಳೆ ಬಂದ ವರದಿಯಂತೆ ಚಿರತೆ ಅಡುಗೆ ಮನೆಯ ಅಟ್ಟದಲ್ಲಿ ಅಡಗಿ ಕುಳಿತಿದೆ ಎಂದು ತಿಳಿದು ಬಂದಿದೆ.
ಜಿಲ್ಲಾಧಿಕಾರಿ ಮೋಹನ್ ರಾಜ್ ಅವರು ಸ್ಥಳಕ್ಕಾಗಮಿಸಿ ಕಾರ್ಯಾಚರಣೆಗಿಳಿದಿರುವ ಸಿಬಂದಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಪೊಲೀಸ್ ಅಧಿಕಾರಿಗಳು ಮತ್ತು ಸಿಬಂದಿಗಳು ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ. ಸಾವಿರಾರು ಕುತೂಹಲಿಗಳು ಮನೆಯ ಸುತ್ತಲು ಜಮಾಯಿಸಿದ್ದಾರೆ.
ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.