ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ವಾಡಿಕೆಗಿಂತಲೂ ಹೆಚ್ಚು ಮಳೆ ಸುರಿದ ಹಿನ್ನೆಲೆಯಲ್ಲಿ ನೀರು ಸರಾಗವಾಗಿ ಹರಿಯಲು ರಾಜಕಾಲುವೆ ನಿರ್ಮಿಸಲು ಜಿಲ್ಲಾಡಳಿತ ಮುಂದಾಗಿದೆ. ಈಗಾಗಲೇ ಅಕ್ರಮವಾಗಿ ಒತ್ತುವರಿ ಆಗಿರುವ ಕಾಲುವೆಗಳನ್ನು ತೆರವುಗೊಳಿಸುವ ಅಭಿಯಾನವನ್ನೂ ಆರಂಭಿಸಲಾಗಿದೆ.
ಸತತವಾಗಿ ಸುರಿದ ಮಳೆಯಿಂದ ರಾಜಕಾಲುವೆಗಳಲ್ಲಿ ಹರಿಯಬೇಕಿದ್ದ ಮಳೆ ನೀರು, ಅಪಾರ ಪ್ರಮಾ ಣದ ಬೆಳೆ ನಾಶವಾಗಿ, ನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ, ನಾಗರಿಕರು ಸಂಕಷ್ಟಕ್ಕೆ ಸಿಲುಕಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ. ಸುಧಾಕರ್ ಸೂಚನೆ ಮೇರೆಗೆ ಜಿಲ್ಲಾಧಿಕಾರಿ ಆರ್. ಲತಾ ಚಿಕ್ಕಬಳ್ಳಾಪುರ ನಗರ, ಜಿಲ್ಲಾದ್ಯಂತ ರಾಜಕಾಲುವೆ ಗುರುತಿಸಿ ಅವುಗಳ ಅಭಿವೃದ್ಧಿಗೆ ಕ್ರಮ ಕೈಗೊಂಡಿದ್ದಾರೆ.
ಒತ್ತುವರಿ ತೆರವುಗೊಳಿಸಿ: ಚಿಕ್ಕಬಳ್ಳಾಪುರ ನಗರಕ್ಕೆ ಹೊಂದಿಕೊಂಡಿರುವ ಕಂದವಾರ ಕೆರೆಯ ಕೋಡಿ ನೀರು ಸರಾಗವಾಗಿ ಹರಿಯಲು ಮಾರ್ಗ ಇಲ್ಲದೆ, ಸುತ್ತಮುತ್ತಲಿನ ವಸತಿ ಪ್ರದೇಶಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿತು.
ಈ ವೇಳೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ ನಾಗರಿಕರು ಮಳೆ ನೀರು ಸರಾಗವಾಗಿ ಹರಿಯಲು ನಿರ್ಮಿಸಿರುವ ರಾಜಕಾಲುವೆಯನ್ನು ಕೆಲವರು ಅಕ್ರಮ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ದೂರಿದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ. ಸುಧಾಕರ್ ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಕೂಡಲೇ ರಾಜಕಾಲುವೆ ಒತ್ತುವರಿ ತೆರವುಗೊಳಿಸಲು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ವ್ಯಾಪಕ ಮಳೆಯಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಆರ್.ಲತಾ ಅವರು ವಿವಿಧ ತಾಲೂಕುಗಳಿಗೆ ಭೇಟಿ ನೀಡಿ ಕೆರೆ ಕೋಡಿ ಹರಿದಿರುವ ಪ್ರದೇಶಗಳಿಗೆ ತೆರಳಿ, ಅಲ್ಲಿ ರೈತರ ಬೆಳೆ ಹಾನಿ, ಕೆರೆ, ರಾಜಕಾಲುವೆಗಳ ಒತ್ತುವರಿಗೆ ಸಂಬಂಧಿಸಿದಂತೆ ಕಂದಾಯ ಇಲಾಖೆ ಅಧಿಕಾರಿಗಳು, ಅಚ್ಚುಕಟ್ಟೆ ಪ್ರದೇಶಗಳ ಜನರು, ರೈತರಿಂದ ಮಾಹಿತಿ ಸಂಗ್ರಹಿಸಿ ಕಠಿಣ ಕ್ರಮ ಜರುಗಿಸಲು ಮುಂದಾಗಿದ್ದಾರೆ.
ಒತ್ತುವರಿ ತೆರವಿಗೆ ನಿರ್ದಾಕ್ಷಿಣ್ಯ ಕ್ರಮ: ಚಿಕ್ಕಬಳ್ಳಾಪುರ ನಗರಕ್ಕೆ ಹೊಂದಿಕೊಂಡಿರುವ ಕಂದವಾರ ಕೆರೆ, ವಿನಾಯಕ ನಗರದಿಂದ ಅಮಾಣಿ ಗೋಪಾಲಕೃಷ್ಣ ಕೆರೆಗೆ ನೀರು ಹರಿಯುವ ಸಂಪರ್ಕಿತ ರಾಜಕಾಲುವೆಗಳ ಒತ್ತುವರಿ ತೆರವುಗೊಳಿಸುವ ಅಭಿಯಾನವನ್ನು ಜಿಲ್ಲಾಡಳಿತ ಕೈಗೊಂಡಿದೆ. ಈಗಾಗಲೇ ಸ್ವತಃ ಜಿಲ್ಲಾಧಿಕಾರಿ ಆರ್.ಲತಾ ಅವರು ತಹಶೀಲ್ದಾರ್ ಗಣಪತಿ ಶಾಸ್ತ್ರಿ, ನಗರಸಭೆ ಪೌರಾಯುಕ್ತ ಮಹಾಂತೆಧೀಶ್, ಕಂದಾಯ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ರಾಜಕಾಲುವೆಗಳ ಅಕ್ರಮ ಒತ್ತುವರಿಯನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಲು ಕ್ರಮ ಕೈಗೊಂಡಿದ್ದಾರೆ.
ಅದೇ ರೀತಿ ಶಿಡ್ಲಘಟ್ಟ ನಗರಕ್ಕೆ ಹೊಂದಿಕೊಂಡಿರುವ ಅಮಾನಿಕೆರೆಯಲ್ಲಿ ಅಕ್ರಮ ಒತ್ತುವರಿ ಆಗಿದ್ದ ರಾಜಕಾಲುವೆಗಳನ್ನು ತೆರವುಗೊಳಿಸಲು ಕ್ರಮಕೈಗೊಂಡಿ ದ್ದಾರೆ. ಇದರಿಂದ ಗೋಪಾಲಕೃಷ್ಣ ಕೆರೆಯ ನೀರು ಅಮಾನಿಕೆರೆಗೆ ಹರಿಸುವ ಸಾಧ್ಯತೆಗಳು ಹೆಚ್ಚಾಗಿದೆ. ಮಳೆಯಿಂದ ಜನರನ್ನು ರಕ್ಷಿಸುವ ಸಲುವಾಗಿ ಡೀಸಿ ಹಲವು ವರ್ಷಗಳ ಹಿಂದೆ ಅಕ್ರಮ ಒತ್ತುವರಿ ಆಗಿದ್ದ ರಾಜಕಾಲುವೆ ತೆರವುಗೊಳಿಸುತ್ತಿದ್ದಾರೆ. ನಾಗರಿಕರು ಅದನ್ನು ಸಂರಕ್ಷಣೆ ಮಾಡಿಕೊಳ್ಳಬೇಕಾಗಿದೆ.
“ಚಿಕ್ಕಬಳ್ಳಾಪುರ ನಗರಕ್ಕೆ ಹೊಂದಿಕೊಂಡಿರುವ ಕಂದವಾರ ಕೆರೆಯಿಂದ ಅಮಾನಿಗೋಪಾಲಕೃಷ್ಣ ಕೆರೆಗೆ ನೀರು ಹರಿಯುವ ರಾಜಕಾಲುವೆಯನ್ನು ಒತ್ತುವರಿ ಆಗಿರುವ ಕಡೆ ತೆರವುಗೊಳಿಸುವ ಕಾರ್ಯ ಮಾಡಲಾಗಿದೆ. ಮುಂದೆ ಅಭಿವೃದ್ಧಿಪಡಿಸಲು, ರಸ್ತೆ, ಅಗತ್ಯ ಇರುವ ಕಡೆ ಬಾಕ್ಸ್ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಸಂಬಂಧ ಯೋಜನಾ ವರದಿ(ಡಿಪಿಆರ್) ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು.”
– ಆರ್.ಲತಾ, ಜಿಲ್ಲಾಧಿಕಾರಿ, ಚಿಕ್ಕಬಳ್ಳಾಪುರ ಜಿಲ್ಲೆ.