Advertisement

ಆಪರೇಷನ್‌ ಶುರು, ಒತ್ತಡದಲ್ಲಿ “ಕೈ’ನಾಯಕರು

12:30 AM Jan 16, 2019 | Team Udayavani |

ಬೆಂಗಳೂರು: ಆಪರೇಷನ್‌ ಕಮಲದ ಬಗ್ಗೆ ನಿರ್ಲಕ್ಷ್ಯ ತೋರಿದ್ದ ಕಾಂಗ್ರೆಸ್‌ ನಾಯಕರು ಮನೆಗೆ ಬೆಂಕಿ ಬಿದ್ದಾಗ ಬಾವಿ ತೋಡಿದಂತೆ ದಿಢೀರ್‌ ಎಚ್ಚೆತ್ತುಕೊಂಡು ಶಾಸಕರನ್ನು ರಕ್ಷಿಸಿಕೊಳ್ಳುವ ಕಸರತ್ತು ಆರಂಭಿಸಿದ್ದಾರೆ. ರಾಷ್ಟ್ರೀಯ ಕಾರ್ಯಕಾರಿಣಿಗೆ ದೆಹಲಿಗೆ ತೆರಳಿ
ಬಿಜೆಪಿ ಶಾಸಕರು ಬೆಂಗಳೂರಿಗೆ ವಾಪಸ್‌ ಆಗದೇ ಹರಿಯಾಣದ ಗುರುಗ್ರಾಮದ ರೆಸಾರ್ಟ್‌ಗೆ ವಾಸ್ತವ್ಯ ಬದಲಾಯಿಸಿದ್ದು, ರಮೇಶ್‌
ಜಾರಕಿಹೊಳಿ ನೇತೃತ್ವದಲ್ಲಿ ಕಾಂಗ್ರೆಸ್‌ ಶಾಸಕರು ಮುಂಬೈನಲ್ಲಿ ವಾಸ್ತವ್ಯ ಹೂಡಿರುವ ಮಾಹಿತಿ ಬಹಿರಂಗವಾಗುತ್ತಿದ್ದಂತೆ ಕಾಂಗ್ರೆಸ್‌
ಹೈಕಮಾಂಡ್‌ ಅಲರ್ಟ್‌ ಆಗಿ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಅವರನ್ನು ಸೋಮವಾರ ರಾತ್ರಿಯೇ ಬೆಂಗಳೂರಿಗೆ ಕಳುಹಿಸಿ ಕೊಟ್ಟಿದೆ.

Advertisement

ಮಂಗಳವಾರ ಇಡೀ ದಿನ ಕೆ.ಸಿ.ವೇಣುಗೋಪಾಲ್‌ ಕುಮಾರಕೃಪಾ ಗೆಸ್ಟ್‌ ಹೌಸ್‌ನಲ್ಲಿಯೇ ಕುಳಿತು ರಾಜ್ಯ ಕಾಂಗ್ರೆಸ್‌ ನಾಯಕರಾದ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಡಿಸಿಎಂ ಪರಮೇಶ್ವರ್‌, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಪ್ರಚಾರ ಸಮಿತಿ ಅಧ್ಯಕ್ಷ ಎಚ್‌.ಕೆ. ಪಾಟೀಲ್‌, ಗೃಹ ಸಚಿವ ಎಂ.ಬಿ. ಪಾಟೀಲ್‌, ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆ, ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್‌ ಹಾಗೂ ಮುಖ್ಯಮಂತ್ರಿ ಕುಮಾರ ಸ್ವಾಮಿ ಜತೆಗೆ ಪ್ರತಿ ಕ್ಷಣದ ಬೆಳವಣಿಗೆ ಕುರಿತು ಸಮಾಲೋಚನೆ ನಡೆಸಿದರು. 

ಪ್ರಮುಖವಾಗಿ ಬಿಜೆಪಿಯಿಂದ ಆಪರೇಷನ್‌ ಗೊಳಗಾಗುತ್ತಾರೆ ಎನ್ನುವ ಶಾಸಕರೊಂದಿಗೆ ನಿರಂತರ ಸಂಪರ್ಕದಲ್ಲಿರುವ ಪ್ರಯತ್ನ ನಡೆಸಿದ್ದಾರೆ. ಕೆಲವು ಶಾಸಕರೊಂದಿಗೆ ಮಾತುಕತೆಯನ್ನೂ ನಡೆಸಿದ್ದು, ಪಕ್ಷ ತೊರೆಯುವುದಿಲ್ಲ ಎಂಬ ಭರವಸೆಯನ್ನೂ ಪಡೆದುಕೊಂಡಿದ್ದಾರೆಂದು ತಿಳಿದು ಬಂದಿದೆ. ಆದರೆ, ಈಗಾಗಲೇ ಮುಂಬೈಗೆ ತೆರಳಿರುವ ರಮೇಶ್‌ ಜಾರಕಿಹೊಳಿ, ಬಿ. ನಾಗೇಂದ್ರ, ಮಹೇಶ್‌ ಕುಮಟಠಳ್ಳಿ ಹಾಗೂ ಉಮೇಶ್‌ ಜಾಧವ್‌ ಅವರನ್ನು ಸಂಪರ್ಕಿಸಲು ಪ್ರಯತ್ನ ನಡೆಸಿದರೂ, ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಹೇಳಲಾಗಿದೆ.

ಒಂದು ಮೂಲದ ಪ್ರಕಾರ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರನ್ನು ಕೆ.ಸಿ.ವೇಣುಗೋಪಾಲ್‌ ದೂರವಾಣಿ ಮೂಲಕ ಸಂಪರ್ಕ ಮಾಡಿ, ಮತ್ತೆ ಸಚಿವರನ್ನಾಗಿ ಮಾಡುವ ಭರವಸೆ ನೀಡಿ ವಾಪಸ್‌ ಬರುವಂತೆ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ, ರಮೇಶ್‌ ಜಾರಕಿಹೊಳಿ, ಅವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ ಎಂದು ಹೇಳಲಾಗುತ್ತಿದೆ.

ನಾಲ್ವರು ಶಾಸಕರನ್ನು ಹೊರತುಪಡಿಸಿ ಬಿಜೆಪಿಯವರ ಸಂಪರ್ಕದಲ್ಲಿದ್ದಾರೆಂದು ಹೇಳಲಾಗುತ್ತಿರುವ ಶ್ರೀಮಂತ್‌ ಪಾಟೀಲ್‌, ಪ್ರತಾಪ್‌ಗೌಡ ಪಾಟೀಲ್‌, ಅಮರೇಗೌಡ ಬಯ್ನಾಪುರ್‌, ಬಸನಗೌಡ ದದ್ದಲ್‌, ಶರಣಬಸಪ್ಪ ದರ್ಶನಾಪುರ್‌, ಮಹಾಂತೇಶ್‌ ಕೌಜಲಗಿ ಅವರನ್ನು ಮಾಜಿ ಸಿಎಂ ಸಿದ್ದರಾಮಯ್ಯ, ಕೆ.ಸಿ.ವೇಣು ಗೋಪಾಲ್‌ ದೂರವಾಣಿ ಮೂಲಕ ಸಂಪರ್ಕಿಸಿದ್ದು, ಅವರು ತಾವು ಆಪರೇಷನ್‌ ಕಮಲಕ್ಕೆ ಒಳಗಾಗುತ್ತಿಲ್ಲ ಎಂಬ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಅಲ್ಲದೇ ಪಕ್ಷದ ನಾಯಕರು ಬಯಸಿದರೆ ಬೆಂಗಳೂರಿಗೆ ಬರುವುದಾಗಿಯೂ ಭರವಸೆ ನೀಡಿದ್ದಾರೆಂದು ತಿಳಿದು ಬಂದಿದೆ.

Advertisement

ಪರಂ, ಗುಂಡೂರಾವ್‌ ವಿರುದ್ಧ ಗರಂ: ಬಿಜೆಪಿಯವರು ಆಪರೇಷನ್‌ ಕಮಲ ನಡೆಸಲು ಕಳೆದ ಒಂದು ವಾರದಿಂದ ನಿರಂತರ ಪ್ರಯತ್ನ
ನಡೆಸುತ್ತಿದ್ದರೂ, ಉಪ ಮುಖ್ಯಮಂತ್ರಿ ಪರಮೇಶ್ವರ್‌ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಜವಾಬ್ದಾರಿಯಿಂದ ಶಾಸಕರನ್ನು ಸಂಪರ್ಕಿಸಿ ಅವರನ್ನು ಹಿಡಿತದಲ್ಲಿಟ್ಟುಕೊಳ್ಳುವ ಪ್ರಯತ್ನ ಮಾಡದೇ ನಿರ್ಲಕ್ಷ್ಯ ವಹಿಸಿದ್ದೇಕೆ ಎಂದು ಕೆ.ಸಿ.ವೇಣುಗೋಪಾಲ್‌ ತರಾಟೆಗೆ ತೆಗೆದುಕೊಂಡಿದ್ದಾರೆಂದು ತಿಳಿದು ಬಂದಿದೆ. ಚಿಂಚೊಳ್ಳಿ ಶಾಸಕ ಉಮೇಶ್‌ ಜಾಧವ್‌ ಅವರನ್ನು ಸಮಾಧಾನ ಪಡಿಸುವ ಕೆಲಸ ಮಾಡದಿರುವ ಬಗ್ಗೆ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆ ಅವರಿಗೂ ವೇಣುಗೋಪಾಲ್‌ ತರಾಟೆಗೆ ತೆಗೆದುಕೊಂಡರು ಎಂದು ತಿಳಿದು ಬಂದಿದೆ.

ಆದರೆ, ಬಿಜೆಪಿಯವರು ಹೇಳುವಷ್ಟು ಸಂಖ್ಯಾ ಬಲ ಅವರ ಬಳಿ ಇಲ್ಲ. ನಾಲ್ಕರಿಂದ ಐದು ಜನ ಮಾತ್ರ ಮುಂಬೈಗೆ ತೆರಳಿದ್ದು, ಅವರನ್ನು ವಾಪಸ್‌ ಕರೆತರುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಸಮಜಾಯಿಸಿ ನೀಡಿದ್ದಾರೆಂದು ತಿಳಿದು ಬಂದಿದೆ. ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಕೂಡ ಬಿಜೆಪಿಯವರು ಹೇಳುವಷ್ಟು ಸಂಖ್ಯಾ ಬಲ ಅವರೊಂದಿಗಿಲ್ಲ. ಅವರು ಸುಮ್ಮನೆ ಮಾಧ್ಯಮಗಳ ಮೂಲಕ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆಂದು ಸಮಜಾಯಿಷಿ ನೀಡಿದರು ಎಂದು ತಿಳಿದು ಬಂದಿದೆ.

ಎಚ್‌ಡಿಕೆ ವಿರುದ್ಧ ಡಿಕೆಶಿ ಅಸಮಾಧಾನ
ಕಾಂಗ್ರೆಸ್‌ ಶಾಸಕರ ಅಸಮಾಧಾನಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನಡವಳಿಕೆಯೇ ಕಾರಣ ಎಂದು ಸಚಿವ ಡಿಕೆಶಿ ಹೇಳಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್‌ ಶಾಸಕರು ತಮ್ಮ ಬೇಡಿಕೆಗಳಿಗೆ ಮುಖ್ಯಮಂತ್ರಿಯವರನ್ನು ಭೇಟಿ ಮಾಡಲು ತೆರಳಿದಾಗ ಅವರಿಗೆ ಸರಿಯಾದ ಸ್ಪಂದನೆ ಸಿಗದೇ ಇರುವುದರಿಂದ ಬೇಸರಗೊಂಡಿದ್ದಾರೆ. ಮುಂಬೈಗೆ ತೆರಳಿರುವ ಶಾಸಕರನ್ನು ವಾಪಸ್‌ ಕರೆತರುವ ಪ್ರಯತ್ನ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ ಎನ್ನಲಾಗಿದೆ. ಕೆ.ಸಿ.ವೇಣುಗೋಪಾಲ್‌ ಇಡೀ ದಿನ ಮುಂಬೈ ಹಾಗೂ ದೆಹಲಿಯಲ್ಲಿ ನಡೆಯುವ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಕಾರ್ಯತಂತ್ರ ಹೇಗಿರಬೇಕು ಎಂದು ಪಕ್ಷದ ನಾಯಕರ ಜೊತೆ ನಿರಂತರ ಕಾರ್ಯತಂತ್ರ ರೂಪಿಸುವಲ್ಲಿ ನಿರತರಾಗಿದ್ದರು. 

ಸಂಪರ್ಕಕ್ಕೆ ಸಿಗದ ಹೆಬ್ಟಾರ್‌, ಕಂಪ್ಲಿ ಗಣೇಶ್‌
ಬಿಜೆಪಿಯವರ ಆಪರೇಷನ್‌ ಕಮಲದ ಪಟ್ಟಿಯಲ್ಲಿದ್ದಾರೆ ಎಂದು ಹೇಳಲಾಗುತ್ತಿರುವ ಯಲ್ಲಾಪುರ ಶಾಸಕ ಶಿವರಾಮ ಹೆಬ್ಟಾರ್‌ ಹಾಗೂ ಕಂಪ್ಲಿ ಶಾಸಕ ಜೆ.ಎನ್‌. ಗಣೇಶ್‌ ರಾಜ್ಯ ನಾಯಕರ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಹೇಳಲಾಗುತ್ತಿದೆ. ಎರಡು ದಿನಗಳ ಹಿಂದೆ ಜಲ
ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿ ಮಾಡಿ ಯಾವುದೇ ಕಾರಣಕ್ಕೂ ಆಪರೇಷನ್‌ ಕಮಲಕ್ಕೆ ಒಳಗಾಗುವುದಿಲ್ಲ ಎಂದು ಹೇಳಿದ್ದರು. ಆದರೆ, ಎರಡು ದಿನಗಳಿಂದ ಕಾಂಗ್ರೆಸ್‌ ನಾಯಕರ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ತಿಳಿದು ಬಂದಿದೆ. ಯಲ್ಲಾ 
ಪುರ ಶಾಸಕ ಶಿವರಾಮ ಹೆಬ್ಟಾರ್‌ ಎರಡು ದಿನಗಳಿಂದ ಪಕ್ಷದ ನಾಯಕರ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಹೇಳಲಾಗುತ್ತಿದೆ. ಆದರೆ, ಅವರು ಕುಟುಂಬ ಸಮೇತ ಅಂಡಮಾನ್‌ ನಿಕೋಬಾರ್‌ ಪ್ರವಾಸ ಕೈಗೊಂಡಿರುವುದಾಗಿ ಅವರ ಸೊಸೆ ಟ್ವೀಟ್‌ ಮಾಡಿದ್ದರು. ಆದರೆ,
ಕಾಂಗ್ರೆಸ್‌ ಮೂಲಗಳ ಪ್ರಕಾರ ಶಿವರಾಮ ಹೆಬ್ಟಾರ್‌ ಗೋವಾದಲ್ಲಿದ್ದು, ಬಿಜೆಪಿ ನಾಯಕರ ಸಂಪರ್ಕದಲ್ಲಿದ್ದಾರೆಂಬ ಆತಂಕ ಶುರುವಾಗಿದೆ ಎಂದು ತಿಳಿದು ಬಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next