Advertisement

Operation Azm-i-Istehkam; ಅಮೆರಿಕದ ಬಳಿ ಸಣ್ಣ ಶಸ್ತ್ರಾಸ್ತ್ರಗಳನ್ನು ಕೇಳಿದ ಪಾಕಿಸ್ಥಾನ

05:36 PM Jun 29, 2024 | Team Udayavani |

ಇಸ್ಲಾಮಾಬಾದ್: ಪಾಕಿಸ್ಥಾನವು ಹೊಸದಾಗಿ ಅನುಮೋದಿಸಲಾದ ಉಗ್ರ ನಿಗ್ರಹ ಉಪಕ್ರಮ ‘ಆಪರೇಷನ್ ಅಜ್ಮ್-ಇ-ಇಸ್ತೇಕಾಮ್‌’ ನ ಯಶಸ್ಸನ್ನು ಖಚಿತಪಡಿಸಿಕೊಳ್ಳಲು ಸಣ್ಣ ಶಸ್ತ್ರಾಸ್ತ್ರಗಳು ಮತ್ತು ಆಧುನಿಕ ಉಪಕರಣಗಳನ್ನು ಒದಗಿಸುವಂತೆ ಪಾಕಿಸ್ಥಾನದ ರಾಯಭಾರಿ ಅಮೆರಿಕಕ್ಕೆ ಒತ್ತಾಯಿಸಿದ್ದಾರೆ.

Advertisement

ಪಾಕಿಸ್ಥಾನದಿಂದ ಉಗ್ರವಾದವನ್ನು ತೊಡೆದುಹಾಕುವ ಸಲುವಾಗಿ 2014 ರಲ್ಲಿ ಅನುಮೋದಿಸಲಾದ ರಾಷ್ಟ್ರೀಯ ಕ್ರಿಯಾ ಯೋಜನೆಯ ಅಪೆಕ್ಸ್ ಕಮಿಟಿ ಸಭೆಯಲ್ಲಿ ಜೂನ್ 22 ರಂದು ‘ಅಜ್ಮ್-ಎ-ಇಸ್ತೇಕಾಮ್’ ಕಾರ್ಯಾಚರಣೆಯನ್ನು ಪ್ರಾರಂಭಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಪಾಕಿಸ್ಥಾನ ಸರಕಾರವು ಇತ್ತೀಚೆಗೆ ಪುನಶ್ಚೇತನಗೊಂಡ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಅಭಿಯಾನವನ್ನು ಅನುಮೋದಿಸಿದೆ. ಉಗ್ರ ಜಾಲಗಳನ್ನು ವಿರೋಧಿಸಲು ಮತ್ತು ತೊಡೆದುಹಾಕಲು ಪಾಕಿಸ್ಥಾನವು ಅಜ್ಮ್-ಇ-ಇಸ್ತೇಕಾಮ್ ಕಾರ್ಯಾಚರಣೆ ಪ್ರಾರಂಭಿಸಿದ್ದು, ನಮಗೆ ಅತ್ಯಾಧುನಿಕ ಸಣ್ಣ ಶಸ್ತ್ರಾಸ್ತ್ರಗಳು ಮತ್ತು ಸಂವಹನ ಉಪಕರಣಗಳು ಬೇಕು ಎಂದು ರಾಯಭಾರಿ ಮಸೂದ್ ಖಾನ್ ಹೇಳಿರುವುದಾಗಿ ಡಾನ್ ಪತ್ರಿಕೆ ವರದಿ ಮಾಡಿದೆ.

ಈ ವಾರದ ಆರಂಭದಲ್ಲಿ ವಾಷಿಂಗ್ಟನ್ ಥಿಂಕ್ ಟ್ಯಾಂಕ್, ವಿಲ್ಸನ್ ಸೆಂಟರ್‌ನಲ್ಲಿ ಯುಎಸ್ ನೀತಿ ನಿರೂಪಕರು, ವಿದ್ವಾಂಸರು, ಬುದ್ಧಿಜೀವಿಗಳು ಮತ್ತು ಕಾರ್ಪೊರೇಟ್ ನಾಯಕರನ್ನು ಉದ್ದೇಶಿಸಿ ಅವರು ಈ ಹೇಳಿಕೆಗಳನ್ನು ನೀಡಿದ್ದಾರೆ ಎಂದು ತಿಳಿದು ಬಂದಿದೆ.

‘ಅಜ್ಮ್-ಇ-ಇಸ್ತೇಕಾಮ್’ ಮೂರು ಅಂಶಗಳನ್ನು ಒಳಗೊಂಡಿದ್ದು, ಸೈದ್ಧಾಂತಿಕ, ಸಾಮಾಜಿಕ ಮತ್ತು ಕಾರ್ಯಾಚರಣೆ. ಈಗಾಗಲೇ ಮೊದಲ ಎರಡು ಹಂತಗಳ ಕಾಮಗಾರಿ ಆರಂಭವಾಗಿದ್ದು, ಮೂರನೇ ಹಂತವನ್ನು ಶೀಘ್ರದಲ್ಲಿಯೇ ಅನುಷ್ಠಾನಗೊಳಿಸಲಾಗುವುದು ಎಂದು ಖಾನ್ ವಿವರಿಸಿದ್ದಾರೆ.

Advertisement

ಅಮೆರಿಕ ವಿದೇಶಾಂಗ ಇಲಾಖೆ ಪಾಕಿಸ್ಥಾನದ ಕ್ರಮಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, ಜೂನ್ 26 ರಂದು, ಸ್ಟೇಟ್ ಡಿಪಾರ್ಟ್ಮೆಂಟ್ ನ ವಕ್ತಾರ ಮ್ಯಾಥ್ಯೂ ಮಿಲ್ಲರ್ ಪ್ರಶ್ನೆಗಳಿಗೆ ಪ್ರತಿಕ್ರಿಯಿಸುವಾಗ “ಉಗ್ರವಾದವನ್ನು ಎದುರಿಸಲು, ಕಾನೂನು ಮತ್ತು ಮಾನವ ಹಕ್ಕುಗಳ ರಕ್ಷಣೆಯನ್ನು ಉತ್ತೇಜಿಸುವ ರೀತಿಯಲ್ಲಿ ಅದರ ನಾಗರಿಕರ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ನಾವು ಪಾಕಿಸ್ಥಾನದ ಪ್ರಯತ್ನಗಳನ್ನು ಬೆಂಬಲಿಸುತ್ತೇವೆ” ಎಂದು ಹೇಳಿದ್ದಾರೆ.

“ಪಾಕಿಸ್ಥಾನದ ಜನರು ಉಗ್ರರ ದಾಳಿಯಿಂದ ಅಪಾರವಾಗಿ ನೊಂದಿದ್ದಾರೆ. ಯಾವುದೇ ದೇಶವು ಇಂತಹ ಭಯೋತ್ಪಾದಕ ಕೃತ್ಯಗಳಿಗೆ ಒಳಗಾಗಬಾರದು ಎಂದು ಮ್ಯಾಥ್ಯೂ ಮಿಲ್ಲರ್ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next