ಪುತ್ತೂರು: ನಗರಸಭಾ ವ್ಯಾಪ್ತಿಯ ಮುಖ್ಯ ರಸ್ತೆ ಸೇರಿದಂತೆ ವಿವಿಧ ರಸ್ತೆ ಬದಿಗಳಲ್ಲಿ ತಲೆ ಎತ್ತಿರುವ ಅನಧಿಕೃತ ಅಂಗಡಿ ಮತ್ತು ಗೂಡಂಗಡಿಗಳ ವಿರುದ್ಧ ನಗರಸಭೆಯ ಆರೋಗ್ಯ ವಿಭಾಗದ ಅಧಿಕಾರಿಗಳು ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ.
ನಗರದಾದ್ಯಂತ ಅಕ್ರಮ ಅಂಗಡಿಗಳು ಹಾಗೂ ವಿಶೇಷವಾಗಿ ಹಣ್ಣಿನ ಅಂಗಡಿಗಳು ತಲೆ ಎತ್ತಿರುವ ಕುರಿತು ನಗರಸಭೆಗೆ ದೂರುಗಳು ಬಂದಿವೆ. ಇಂತಹ ಅಕ್ರಮ ಅಂಗಡಿಗಳಿಗೆ ಯಾವುದೇ ರಿಯಾಯಿತಿ ನೀಡದಂತೆ ಆರೋಗ್ಯ ವಿಭಾಗದ ಅಧಿಕಾರಿ ಗಳಿಗೆ ಪೌರಾಯುಕ್ತೆ ರೂಪಾ ಟಿ. ಶೆಟ್ಟಿ ಸೂಚಿಸಿದ್ದಾರೆ.
ಪರವಾನಿಗೆ ಪಡೆಯದೇ ಅನಧಿಕೃತ ವಾಗಿ ತಾತ್ಕಾಲಿಕ ಅಂಗಡಿಗಳನ್ನು ನಿರ್ಮಿಸಿ ಬಳಿಕ ಅವುಗಳನ್ನು ಶಾಶ್ವತ ಅಂಗಡಿ ಗಳನ್ನಾಗಿ ಪರಿವರ್ತಿಸುವ ಕೆಲಸಗಳು ನಡೆಯುತ್ತಿವೆ. ನಗರಸಭಾ ವ್ಯಾಪ್ತಿಯ ಅಕ್ರಮ ಅಂಗಡಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ನಗರಸಭೆಯ ಬಿಜೆಪಿ ಸದಸ್ಯರು, ಸಾರ್ವಜನಿಕರು ದೂರು ನೀಡಿದ್ದರು. ಸಹಾಯಕ ಆಯುಕ್ತ ಎಚ್.ಕೆ. ಕೃಷ್ಣಮೂರ್ತಿ ಅವರೂ ಅಕ್ರಮ ಅಂಗಡಿಗಳ ಸಮಸ್ಯೆ ಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮಕ್ಕೆ ನಗರಸಭೆಗೆ ನಿರ್ದೇಶನ ನೀಡಿದ್ದರು.
ನಗರಸಭಾ ವ್ಯಾಪ್ತಿಯಲ್ಲಿ ಅಕ್ರಮ ಅಂಗಡಿಗಳ ವಿರುದ್ಧ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕರಾದ ರಾಮಚಂದ್ರ, ಶ್ವೇತಾ ಕಿರಣ್, ಪರಿಸರ ಎಂಜಿನಿಯರ್ ಗುರುಪ್ರಸಾದ್, ಪೌರ ಕಾರ್ಮಿಕರು ಪಾಲ್ಗೊಂಡಿದ್ದಾರೆ.
ವಿವಿಧ ಅಂಗಡಿಗಳಲ್ಲಿ ಮಾರಾಟಕ್ಕೆ ಇಡಲಾದ ಸಿದ್ಧ ತಿಂಡಿಗಳ ಪ್ಯಾಕೆಟ್‌ಗಳನ್ನು ಅಧಿಕಾರಿಗಳ ತಂಡ ಪರಿಶೀಲನೆ ಮಾಡಿದೆ. ಜನಾರೋಗ್ಯದ ಹಿನ್ನೆಲೆಯಲ್ಲಿ ನಗರ ಸಭೆಯಿಂದ ಈ ಕ್ರಮ ಆರಂಭಿಸಲಾಗಿದೆ.
ಹಳಸಲು ಪದಾರ್ಥ
ಅಕ್ರಮ ಅಂಗಡಿಗಳಲ್ಲಿ ಮತ್ತು ಇತರ ಅಂಗಡಿಗಳಲ್ಲಿ ಹೊಟೇಲ್‌ಗಳನ್ನು ನಡೆಸುತ್ತಿರುವುದನ್ನು ಅಧಿಕಾರಿಗಳ ತಂಡ ಪತ್ತೆ ಮಾಡಿದೆ. ಹಳಸಲು ಪದಾರ್ಥಗಳನ್ನು ಮುಟ್ಟುಗೋಲು ಹಾಕಿದೆ. ಅಂಗಡಿಯೊಂದರಲ್ಲಿ ಮಾರಾಟಕ್ಕೆ ಇಡಲಾಗಿದ್ದ ಪಾನೀಯದ ಬಾಟಲಿಯಲ್ಲಿ ನೊಣ ಇರುವುದು ಪತ್ತೆಯಾಗಿದೆ.