Advertisement

ಚಾಲನೆ ಸಂದರ್ಭ ಮೊಬೈಲ್‌ ಬಳಕೆ ವಿರುದ್ಧ ಕ್ರಮ: ಕಮಿಷನರ್‌

12:09 PM Nov 04, 2017 | Team Udayavani |

ಪಾಂಡೇಶ್ವರ: ದ್ವಿಚಕ್ರ ವಾಹನ ಸವಾರರು ಚಾಲನೆ ಸಂದರ್ಭದಲ್ಲಿ ಮೊಬೈಲ್‌ ಫೋನ್‌ನಲ್ಲಿ ಮಾತನಾಡುತ್ತಿರುವುದು ಅಪಘಾತಗಳಿಗೆ ಕಾರಣವಾಗುತ್ತಿರುವ ಪ್ರಕರಣಗಳು ಹೆಚ್ಚುತಿವೆ. ಈ ಬಗ್ಗೆ ತಪಾಸಣೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್‌ ಆಯುಕ್ತ ಟಿ.ಆರ್‌. ಸುರೇಶ್‌ ತಿಳಿಸಿದರು. ಶುಕ್ರವಾರ ತಮ್ಮ ಕಚೇರಿಯಲ್ಲಿ ಜರಗಿದ ಫೋನ್‌ಇನ್‌ ಕಾರ್ಯಕ್ರಮದಲ್ಲಿ ಅವರು ಮಹಿಳೆಯೊಬ್ಬರು ಮಾಡಿದ ಕರೆಗೆ ಉತ್ತರಿಸಿದರು.

Advertisement

ನಗರದ ಹೈಲ್ಯಾಂಡ್‌ನ‌ ಎಸ್‌.ಎಲ್‌. ಮಥಾಯಸ್‌ ರಸ್ತೆಯಲ್ಲಿ ಇತ್ತೀಚೆಗೆ ದ್ವಿಚಕ್ರ ವಾಹನ ಸವಾರರೊಬ್ಬರು ಮೊಬೈಲ್‌ಫೋನ್‌ನಲ್ಲಿ ಮಾತನಾಡುತ್ತಾ ಇನ್ನೊಂದು ವಾಹನವನ್ನು ಓವರ್‌ಟೇಕ್‌ ಮಾಡುವ ಸಂದರ್ಭದಲ್ಲಿ ಪಾದಚಾರಿ ಮಗುವಿಗೆ ಢಿಕ್ಕಿ ಹೊಡೆದಿತ್ತು. ಗಂಭೀರವಾಗಿ ಗಾಯಗೊಂಡಿರುವ ಮಗು ಇನ್ನು 3 ತಿಂಗಳು ಮನೆಯೊಳಗೆ ಇರಬೇಕಾದ ಪರಿಸ್ಥಿತಿ ಬಂದಿದೆ. ಆದ್ದರಿಂದ ಮೊಬೈಲ್‌ನಲ್ಲಿ ಮಾತನಾಡುತ್ತಾ ವಾಹನ ಚಲಾಯಿಸುತ್ತಿರುವ ಸವಾರರ ಮೇಲೆ ಕ್ರಮ ಜರಗಿಸಬೇಕು ಎಂದು ಫೋನ್‌ ಕರೆ ಮಾಡಿದ ಮಹಿಳೆ ಮನವಿ ಮಾಡಿದರು.

ನಿಯಮ ಉಲ್ಲಂಸುವ ಸವಾರರು
ಬೈಕ್‌ ಸವಾರರು ಹೆಲ್ಮೆಟ್‌ ಧರಿಸುತ್ತಿಲ್ಲ; ಬೈಕ್‌ಗಳಲ್ಲಿ ಮೂವರು ಪ್ರಯಾಣಿಸುತ್ತಾರೆ. ಅತ್ತಾವರ ನ್ಯೂ ರೋಡ್‌ನ‌ಲ್ಲಿ ಬೆಳಗ್ಗಿನ 6 ಗಂಟೆ ವೇಳೆಗೆ ಟ್ಯೂಶನ್‌ಗೆ ಹೋಗುವ ಅನೇಕ ಮಂದಿ ಲೈಸನ್ಸ್‌ ಇಲ್ಲದೆ ವಾಹನ ಚಲಾಯಿಸುತ್ತಾರೆ. ಬಿಕರ್ನಕಟ್ಟೆ ಶಕ್ತಿನಗರ ಕ್ರಾಸ್‌ ಬಳಿ ರಾಂಗ್‌ ಸೈಡ್‌ನಿಂದ ವಾಹನ ಚಲಾಯಿಸಿಕೊಂಡು ಬರುತ್ತಿರುವುದರಿಂದ ಸಮಸ್ಯೆಯಾಗುತ್ತಿದೆ. ಅಪಘಾತಗಳು ಸಂಭವಿಸುವ ಸಾಧ್ಯತೆಗಳಿವೆ ಎಂಬ ದೂರುಗಳು ಬಂದವು.

ಪಣಂಬೂರು ಜಂಕ್ಷನ್‌ನಲ್ಲಿ ಪಿ.ಎ. ಸಿಸ್ಟಂ ಆರಂಭಿಸುವ ಬಗ್ಗೆ ಪ್ರಾಯೋಜನೆಗೆ ಎನ್‌ಎಂಪಿಟಿ ಮುಂದೆ ಬಂದಿದೆ ಎಂದು ಟ್ರಾಫಿಕ್‌ ಉತ್ತರ ಠಾಣೆಯ ಇನ್‌ ಸ್ಪೆಕ್ಟರ್‌ ಮಂಜುನಾಥ ಅವರು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಮಿಷನರ್‌, ಪ್ರಾಯೋಜಕರು ಲಭ್ಯ ವಿರುವ ಜಂಕ್ಷನ್‌ಗಳಲ್ಲಿ ಪ್ರಾಯೋಜಕರಿಗೆ ಮೈಕ್‌ ಸಿಸ್ಟಂ ಅಳವಡಿಸಲು ಅವಕಾಶ ನೀಡಲಾಗುವುದು. ಪ್ರಾಯೋಜಕರು ಸಿಗದ ಜಂಕ್ಷನ್‌ಗಳಲ್ಲಿ ಪೊಲೀಸ್‌ ಇಲಾಖೆಯ ವತಿಯಿಂದಲೇ ಪಿ.ಎ. ಸಿಸ್ಟಂ ಆರಂಭಿಸಲಾಗುವುದು ಎಂದರು.

ಕೆ.ಪಿ.ಟಿ. ಮತ್ತು ನಗರದ ಪುರಭವನದ ಬಳಿ 3- 4 ಮಂದಿ ಪೊಲೀಸರು ನಿಂತು ಸಂಚಾರ ನಿರ್ವಹಿಸುತ್ತಿದ್ದಾರೆ. ಪೊಲೀಸರು ವಾಹನಗಳನ್ನು ನಿಲ್ಲಿಸುತ್ತಿರುವುದರಿಂದ ಟ್ರಾಫಿಕ್‌ ಜಾಂ ಉಂಟಾಗಲು ಕಾರಣರಾಗುತ್ತಿದ್ದಾರೆ ಎಂದೊಬ್ಬರು ನೀಡಿದ ದೂರಿಗೆ ಪ್ರತಿಕ್ರಿಯಿಸುತ್ತಾ ಕಮಿಷನರ್‌ ಈ ವಿಷಯವನ್ನು ತಿಳಿಸಿದರು.

Advertisement

ಇಂಟರ್‌ಸೆಪ್ಟರ್‌ ಮೂಲಕ ತಪಾಸಣೆ
ಮಿತಿ ಮಿರೀದ ವೇಗ ಮತ್ತು ಮದ್ಯಪಾನ ಮಾಡಿ ವಾಹನ ಚಾಲನೆ ಮತ್ತಿತರ ಪ್ರಕರಣಗಳ ಪತ್ತೆಗಾಗಿ ಟ್ರಾಫಿಕ್‌ ಪೊಲೀಸರ ಬಳಿ 3 ಇಂಟರ್‌ಸೆಪ್ಟರ್‌ ವಾಹನಗಳಿದ್ದು, ಅವುಗಳನ್ನು ವಿವಿಧ ರಸ್ತೆಗಳಲ್ಲಿ ನಿಗದಿತ ಸಮಯದಲ್ಲಿ ಕಾರ್ಯಾಚರಣೆ ನಡೆಸಲು ವ್ಯವಸ್ಥೆ ಮಾಡಲಾಗುವುದು ಎಂದು ಕಮಿಷನರ್‌ ವಿವರಿಸಿದರು.

4 ಡಿ ರೂಟ್‌ ನಂಬ್ರದ ‘ನವೀನ್‌’ ಬಸ್‌ನ ಮಾಲಕರು ಎರಡು ಸಿಟಿ ಬಸ್‌ಗಳಿಗೆ ಪರವಾನಿಗೆ ಪಡೆದು ಒಂದನ್ನು ಮಾತ್ರ ಕಾರ್ಯಾಚರಣೆ ಮಾಡುತ್ತಿದ್ದಾರೆ. ಇನ್ನೊಂದು ಬಸ್ಸನ್ನು ಮನೆ ಆವರಣದಲ್ಲಿ ಇರಿಸಲಾಗಿದೆ. ಅವರ ಬಳಿ ಇರುವ ಇನ್ನೊಂದು ಪರವಾನಿಗೆಗೆ ಅವರಲ್ಲಿ ಬಸ್ಸು ಇದ್ದರೂ ಓಡಿಸುತ್ತಿಲ್ಲ; ಬೇರೆ ಮಾಲಕರಿಗೆ ಬಸ್‌ ಹಾಕಲು ಬಿಡುತ್ತಿಲ್ಲ ಎಂದೊಬ್ಬರು ದೂರಿದರು.

ಇದಕ್ಕೆ ಸ್ಪಂದಿಸಿದ ಕಮಿಷನರ್‌ ಈ ಬಗ್ಗೆ ಸಾರಿಗೆ ಅಧಿಕಾರಿಗಳಿಗೆ ಬರೆಯಲಾಗುವುದು. ‘ನವೀನ್‌’ ಬಸ್ಸಿನ ಮಾಲಕರು ಬಸ್ಸು ಓಡಿಸದಿದ್ದರೆ ಅವರ ಬಳಿ ಇರುವ ಲೈಸನ್ಸ್‌ ರದ್ದತಿಗೆ ಶಿಫಾರಸು ಮಾಡ ಲಾಗುವುದು ಎಂದರು. ಅದೇ ರೀತಿ ಚೇಳೈರಿಗೆ ಪರವಾನಿಗೆ ಇರುವ ಎರಡು ಬಸ್ಸುಗಳ ಮಾಲಕರು ಅಲ್ಲಿತನಕ ಹೋಗು ತ್ತಿಲ್ಲ ಎಂಬ ದೂರಿಗೆ ಪ್ರತಿಕ್ರಿಯಿಸಿದ ಕಮಿಷನರ್‌, ಈ ವಿಷಯವನ್ನು ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.

ಅನಧಿಕತೃತ ಬಾರ್‌ ವಿರುದ್ಧ ಕ್ರಮ
ಮೂಲ್ಕಿ ಲಿಂಗಪ್ಪಯ್ಯಕಾಡಿನಲ್ಲಿ ವೈನ್‌ಶಾಪ್‌ ಹೆಸರಿನಲ್ಲಿ ಲೈಸನ್ಸ್‌ ಪಡೆದು ಬಾರ್‌ ನಡೆಸಲಾಗುತ್ತಿದೆ. ಕಳೆದ ಒಂದು ತಿಂಗಳಿಂದ ಅನಧಿಕೃತವಾಗಿ ಕಾರ್ಯ ನಿರ್ವಹಿಸುತ್ತಿರುವ ಈ ಬಾರ್‌ನ ಬಗ್ಗೆ ಸಂಬಂಧ ಪಟ್ಟ ಇಲಾಖೆಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಮಹಿಳೆಯೊಬ್ಬರು ದೂರು ನೀಡಿದರು. ಈ ಬಾರ್‌ ಅನಧಿಕೃತ ಆಗಿದ್ದಲ್ಲಿ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದು ಕಮಿಷನರ್‌ ತಿಳಿಸಿದರು.

ಬಿಕರ್ನಕಟ್ಟೆ ಬಾಲ ಯೇಸು ಮಂದಿರದ ದ್ವಾರದ ಬಳಿ ಗುರುವಾರ ಬಸ್‌ ಢಿಕ್ಕಿ ಹೊಡೆದು ಮಹಿಳೆಯೊಬ್ಬರು ಸಾವನ್ನಪ್ಪಿದ ಪ್ರಕರಣವನ್ನು ಉಲ್ಲೇಖೀಸಿ, ಹಲವರು ಕರೆಮಾಡಿ ಈ ಸ್ಥಳದಲ್ಲಿ ಅಪಘಾತ ನಿಯಂತ್ರಿಸುವ ಬಗ್ಗೆ ಪೊಲೀಸ್‌ ಸಿಬಂದಿಯನ್ನು ನೇಮಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಇಲ್ಲಿನ ಬಜಾರ್‌ ಒಂದರ ವಾಹನ ಇಡೀ ದಿನ ರಸ್ತೆಯಲ್ಲಿಯೇ ನಿಲ್ಲಿಸಿ ಸುಗಮ ಸಂಚಾರಕ್ಕೆ ಅಡ್ಡಿ ಉಂಟು ಮಾಡುತ್ತಿದೆ. ಒಂದು ಕಡೆ ಕೆಂಪು ಕಲ್ಲುಗಳನ್ನು ಮಾರಾಟಕ್ಕಾಗಿ ರಾಶಿ ಹಾಕಲಾಗಿದೆ ಎಂದು ಸಾರ್ವಜನಿಕರು ವಿವರಿಸಿದರು. 

ಸೆಂಟ್ರಲ್‌ ರೈಲು ನಿಲ್ದಾಣ ರಸ್ತೆ ಅಗಲ ಕಿರಿದಾಗಿದ್ದು, ಸಂಜೆ ಹೊತ್ತು ಸಂಚಾರ ದುಸ್ತರವಾಗಿದೆ. ಆದ್ದರಿಂದ ರಸ್ತೆ ಅಗಲ ಮಾಡಬೇಕು ಎಂಬ ಸಲಹೆಗೆ ಪ್ರತಿಕ್ರಿಯಿಸಿದ ಕಮಿಷನರ್‌, ಈ ಕುರಿತಂತೆ ರೈಲ್ವೇ ಮತ್ತು ಮಹಾ ನಗರ ಪಾಲಿಕೆಗೆ ಬರೆಯಲಾಗುವುದು ಎಂದರು.

ಇದು 62ನೇ ಫೋನ್‌ ಇನ್‌ ಕಾರ್ಯಕ್ರಮವಾಗಿದ್ದು, ಒಟ್ಟು 28 ಕರೆಗಳು ಸ್ವೀಕೃತವಾದವು. ಡಿಸಿಪಿಗಳಾದ ಹನುಮಂತರಾಯ ಮತ್ತು ಉಮಾ ಪ್ರಶಾಂತ್‌, ಎಸಿಪಿ ಗಳಾದ ಮಂಜುನಾಥ ಶೆಟ್ಟಿ (ಟ್ರಾಫಿಕ್‌ ಮತ್ತು ಕ್ರೈಂ) ಮತ್ತು ವೆಲೆಂಟೈನ್‌ ಡಿ’ಸೋಜಾ, ಇನ್‌ ಸ್ಪೆಕ್ಟರ್‌ಗಳಾದ ಸುರೇಶ್‌ ಕುಮಾರ್‌, ಮಂಜುನಾಥ್‌, ಮಹಮದ್‌ ಶರೀಫ್‌, ಎಎಸ್‌ಐ ಯೂಸುಫ್‌, ಹೆಡ್‌ಕಾನ್‌ಸ್ಟೆಬಲ್‌ ಹಾಗೂ ಮತ್ತಿತರರಿದ್ದರು.

ಇಲಾಖೆಯೇ ನಂಬರ್‌ಪ್ಲೇಟ್‌ ಬರೆದು ಕೊಡಲಿ
ವಾಹನಗಳ ನಂಬರ್‌ ಪ್ಲೇಟ್‌ಗಳು ಕ್ರಮಬದ್ಧವಾಗಿಲ್ಲದ ಬಗ್ಗೆ ಕೇಸು ದಾಖಲಿಸಲಾಗುತ್ತಿರುವ ಬಗ್ಗೆ ಸಾರ್ವಜನಿಕರೊಬ್ಬರು ಪ್ರಸ್ತಾವಿಸಿ, ವಾಹನಗಳ ನಂಬರ್‌ ಪ್ಲೇಟ್‌ ಅನ್ನು ಕ್ರಮಬದ್ಧವಾಗಿ ಬರೆಯುವ ಅಧಿಕೃತ ವ್ಯಕ್ತಿಗಳನ್ನು ನೇಮಕ ಮಾಡುವ ಆವಶ್ಯಕತೆ ಇದೆ. ಇಲ್ಲವೇ ಸಾರಿಗೆ ಇಲಾಖೆಯಲ್ಲಿಯೇ ನಂಬರ್‌ ಪ್ಲೇಟ್‌ ಬರೆದು ಕೊಡುವ ವ್ಯವಸ್ಥೆ ಆಗಬೇಕೆಂದು ಸಲಹೆ ಮಾಡಿದರು.

ಪಬ್ಲಿಕ್‌ ಎಡ್ರೆಸ್‌ (ಪಿ.ಎ.) ಸಿಸ್ಟಂ ಅನುಷ್ಠಾನಕ್ಕೆ ಸಲಹೆ
ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ಸಂಚಾರ ನಿರ್ವಹಣೆಗೆ ಮೈಕ್‌ನಲ್ಲಿ ಅನೌನ್ಸ್‌ ಮಾಡುವ ಪಬ್ಲಿಕ್‌ ಎಡ್ರೆಸ್‌ (ಪಿ.ಎ.) ಸಿಸ್ಟಂ ಜಾರಿಗೊಳಿಸಲಾಗುವುದು ಎಂದು ಕಮಿಷನರ್‌ ಟಿ.ಆರ್‌. ಸುರೇಶ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next