Advertisement

ಅಕ್ರಮ ವಿದೇಶಿ ಉದ್ಯೋಗ ನೇಮಕಾತಿ ಏಜೆನ್ಸಿಗಳ ವಿರುದ್ಧ ಕಾರ್ಯಾಚರಣೆ

10:01 AM Dec 19, 2019 | mahesh |

ಮಂಗಳೂರು: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ ಮೋಸ ಮಾಡುವ ಅಕ್ರಮ ಏಜೆನ್ಸಿಗಳು ಕೂಡಲೇ ವ್ಯವಹಾರ ಸ್ಥಗಿತಗೊಳಿಸಬೇಕು. ಇಲ್ಲವಾದರೆ ಕಠಿನ ಕ್ರಮ ಶತಸ್ಸಿದ್ಧ… ಇದು ರಾಜ್ಯಕ್ಕೆ ಮೊದಲ ಪ್ರಾದೇಶಿಕ ಪ್ರೊಟೆಕ್ಟರ್‌ ಆಫ್‌ ಎಮಿಗ್ರೆಂಟ್ಸ್‌ ಅಧಿಕಾರಿಯಾಗಿ ನೇಮಕಗೊಂಡಿರುವ ಐಎಫ್ಎಸ್‌ ಅಧಿಕಾರಿ ಶುಭಂ ಸಿಂಗ್‌ ನೀಡಿರುವ ಕಟು ಎಚ್ಚರಿಕೆ. ವಿದೇಶೀ ಉದ್ಯೋಗಿಗಳ ಹಿತ ಕಾಯಲು
ವಿದೇಶಾಂಗ ಸಚಿವಾಲಯದಡಿ ಕಾರ್ಯಾಚರಿಸುತ್ತಿರುವ “ಪ್ರೊಟೆಕ್ಟರ್‌ ಆಫ್‌ ಎಮಿಗ್ರೆಂಟ್ಸ್‌’ ಕಚೇರಿ ಡಿ. 2ರಂದು ಬೆಂಗಳೂರಿನಲ್ಲಿ ಆರಂಭಗೊಂಡಿದೆ. ನೂತನ ಪ್ರಾದೇಶಿಕ ಪ್ರೊಟೆಕ್ಟರ್‌ ಆಫ್‌ ಎಮಿ ಗ್ರೆಂಟ್ಸ್‌ ಅಧಿಕಾರಿ ಮಂಗಳವಾರ ಮಂಗಳೂರಿಗೆ ಆಗಮಿಸಿದ್ದು, “ಉದಯವಾಣಿ’ ಜತೆ ಮಾತ ನಾಡಿದರು. ಅದರ ಸಾರ ಇಲ್ಲಿದೆ.

Advertisement

ಅಕ್ರಮ ಏಜೆನ್ಸಿಗಳಿಗೆ ಕಡಿವಾಣ
ಕೆಲಸ ಕೊಡಿಸುವುದಾಗಿ ನಂಬಿಸಿ ವಂಚಿಸುವ ಪ್ರಕರಣಗಳು ಅಲ್ಲಲ್ಲಿ ಬೆಳಕಿಗೆ ಬರುತ್ತಿವೆ. ಅಂಥ ಅಕ್ರಮ ಏಜೆನ್ಸಿಗಳಿಗೆ ಕಡಿವಾಣ ಹಾಕುವುದಕ್ಕೆ ಮೊದಲ ಆದ್ಯತೆ ನೀಡಲು ತೀರ್ಮಾನಿಸಿದ್ದೇವೆ. ಕಾನೂನುಬದ್ಧ ನೋಂದಣಿ ಮಾಡದೆ ವಿದೇಶಿ ಉದ್ಯೋಗಗಳಿಗೆ ನೇಮಕ ಮಾಡಿಕೊಳ್ಳುವುದು ಅಕ್ರಮ. ಇಂತಹ ಏಜೆನ್ಸಿಗಳು ಕೂಡಲೇ ವ್ಯವಹಾರ ಕೊನೆಗೊಳಿಸಬೇಕು. ರಾಜ್ಯದಲ್ಲಿ ಸುಮಾರು 15 ಕಾನೂನುಬದ್ಧ ವಿದೇಶೀ ಉದ್ಯೋಗ ನೇಮಕಾತಿ ಏಜೆನ್ಸಿಗಳಿವೆ. ನೋಂದಾಯಿಸದ ಏಜೆನ್ಸಿಗಳು ಕೂಡಲೇ ನೋಂದಣಿ ಮಾಡಿಕೊಳ್ಳಬೇಕು. ಸೂಕ್ತ ದಾಖಲೆಗಳೊಂದಿಗೆ ಕಚೇರಿಯನ್ನು ಸಂಪರ್ಕಿ ಸಿದರೆ ತ್ವರಿತವಾಗಿ ನೋಂದಾಯಿಸಲಾಗುತ್ತದೆ.

ಬೆಂಗಳೂರಿನಲ್ಲಿ ಹೊಸ ಕಚೇರಿ
ದ.ಭಾರತದಲ್ಲಿ ಕರ್ನಾಟಕ ಬಿಟ್ಟು ಉಳಿದೆಲ್ಲ ರಾಜ್ಯಗಳಲ್ಲಿ ಪ್ರಾದೇಶಿಕ ಪ್ರೊಟೆಕ್ಟರ್‌ ಆಫ್‌ ಎಮಿಗ್ರೆಂಟ್ಸ್‌ ಕಚೇರಿ ಇತ್ತು. ಈಗ ಕೇಂದ್ರ ಸರಕಾರ ಬೆಂಗಳೂರಿನಲ್ಲಿ ಈ ಕಚೇರಿಯನ್ನು ಆರಂಭಿಸಿದ್ದು, ಡಿ.3ರಂದು ಅಧಿಕಾರ ಸ್ವೀಕರಿಸಿದ್ದೇನೆ. ಈಗ ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತಿದ್ದೇನೆ. ದಕ್ಷಿಣ ಕನ್ನಡ ಜಿಲ್ಲೆಗೆ ಇದು ಪ್ರಥಮ ಭೇಟಿ. ದೇಶದಲ್ಲಿ ಒಟ್ಟು 10 ಪ್ರೊಟೆಕ್ಟರ್‌ ಆಫ್‌ ಎಮಿಗ್ರೆಂಟ್ಸ್‌ ಪ್ರಾದೇಶಿಕ ಕಚೇರಿಗಳಿದ್ದವು. ಹೊಸದಾಗಿ ಬೆಂಗಳೂರು, ಗುವಾಹಾಟಿ ಮತ್ತು ಪಟ್ನಾಗಳಿಗೆ ಮಂಜೂರು ಮಾಡಲಾಗಿತ್ತು. ಬೆಂಗಳೂರು, ಪಟ್ನಾ ಕಚೇರಿ ಆರಂಭಗೊಂಡಿವೆ.

ವಿದೇಶಗಳಿಗೆ ಉದ್ಯೋ ಗಕ್ಕೆ ತೆರಳುವವರಿಗೆ ರಕ್ಷಣೆ ನೀಡಿ ಅವರು ವಂಚನೆ, ಶೋಷಣೆಗೆ ಒಳಗಾಗದಂತೆ ನೋಡಿಕೊಳ್ಳುವುದು ನನ್ನ ಕಚೇರಿಯ ಮುಖ್ಯ ಕಾರ್ಯ. ವಿದೇಶಕ್ಕೆ ಉದ್ಯೋಗಾರ್ಥ ನೇಮಕಾತಿ ಮಾಡಿ ಅಲ್ಲಿ ಸೂಕ್ತ ಉದ್ಯೋಗ ನೀಡದೆ ವಂಚಿಸುವುದು, ಮೂದಿಸಿರುವುದಕ್ಕಿಂತ ಕಡಿಮೆ ವೇತನ ಅಥವಾ ವೇತನ ದೊರಕದಿರುವುದು ಮುಂತಾದ ದೂರುಗಳು ಬಂದಾಗ ನೇಮಕಾತಿ ಮಾಡಿಕೊಂಡ ಏಜೆನ್ಸಿಗಳ ವಿರುದ್ಧ ತನಿಖೆ ನಡೆಸಿ ಪರವಾನಿಗೆ ರದ್ದುಪಡಿಸುವುದು, ಬಾಧಿತರಿಗೆ ಪರಿಹಾರ ಮುಂತಾದ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.

ವೆಬ್‌ಸೈಟ್‌ನಲ್ಲಿ ಪರಿಶೀಲಿಸಿ
ಕಾನೂನುಬದ್ಧ ವಿದೇಶೀ ಉದ್ಯೋಗ ನೇಮಕಾತಿ ಏಜೆನ್ಸಿಗಳ ಪಟ್ಟಿ ಇಲಾಖೆಯ ವೆಬ್‌ಸೈಟ್‌ನಲ್ಲಿದೆ. www.emigrate.gov.in ಪರಿಶೀಲಿಸಬಹುದು. ಏಜೆನ್ಸಿಗಳನ್ನು ಸಂಪರ್ಕಿಸುವವರು ಮೊದಲು ಇದನ್ನು ಪರಿಶೀಲಿಸಿ ಖಾತ್ರಿಪಡಿಸಿಕೊಳ್ಳುವುದು ಉತ್ತಮ. ಎರಡು ವರ್ಷ ಜೈಲು, ದಂಡ ವಂಚನೆ ಕಂಡುಬಂದರೆ ಸೂಕ್ತ ತನಿಖೆ ನಡೆಸಿ ವರದಿಯನ್ನು ಎಮಿಗ್ರೆಂಟ್ಸ್‌ ಪ್ರೊಟೆಕ್ಟರ್‌ ಜನರಲ್‌ಗೆ ಕಳುಹಿಸಿ ಸಮ್ಮತಿ ಪಡೆದು ನ್ಯಾಯಾಲಯಗಳಲ್ಲಿ ಪ್ರಕರಣ ದಾಖಲಿಸಲಾಗುವುದು. 2 ವರ್ಷ ಜೈಲು ಮತ್ತು ದಂಡ ವಿಧಿಸಲು ಅವಕಾಶವಿದೆ.

Advertisement

ದೂರು ನೀಡಿ
ಕಾನೂನುಬದ್ಧವಾಗಿ ನೋಂದಣಿ ಮಾಡಿಕೊಳ್ಳದೆ ವಿದೇಶಿ ಉದ್ಯೋಗಗಳಿಗೆ ನೇಮಕಾತಿ ಮಾಡಿಕೊಳ್ಳುವ ಅಥವಾ ವಂಚಿಸುವ ಏಜೆನ್ಸಿಗಳು ಕಂಡುಬಂದರೆ ಸಾರ್ವಜನಿಕರು PoEbengaluru@mea.gov.in ನಲ್ಲಿ ದೂರು ದಾಖಲಿಸಬಹುದು. ದೂರು ನೀಡಿದವರ ಬಗ್ಗೆ ಗೌಪ್ಯತೆಯನ್ನು ಕಾಪಾಡಲಾಗುವುದು. ದೂರು ದಾಖಲಿಸಿಕೊಂಡು ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ. ಉದ್ಯೋಗದ ಭರವಸೆ ಮೇಲೆ ವಿದೇಶಕ್ಕೆ ಹೋಗಿ ಅಲ್ಲಿ ವಂಚನೆಗೀಡಾದವರೂ ಭಾರತೀಯ ರಾಯಭಾರಿ ಕಚೇರಿ ಮೂಲಕ ನಮ್ಮ ಕೇಂದ್ರವನ್ನು ಸಂಪರ್ಕಿಸಿ ನೆರವು ಪಡೆಯಬಹುದು.
ಶುಭಂ ಸಿಂಗ್‌, ಪ್ರಾದೇಶಿಕ ಪ್ರೊಟೆಕ್ಟರ್‌ ಆಫ್‌ ಎಮಿಗ್ರೆಂಟ್ಸ್‌

– ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next