Advertisement

ಕಾರ್ಯ ನಿರ್ವಹಿಸಿ, ಇಲ್ಲದಿದ್ದರೆ ತಾಲೂಕಿನಿಂದ ಹೊರ ನಡೆಯಿರಿ

06:04 AM Jan 30, 2019 | Team Udayavani |

ಚನ್ನಗಿರಿ: ಸರ್ಕಾರ ಅಧಿಕಾರಿಗಳಿಗೆ ಸಂಬಳ ನೀಡುತ್ತಿರುವುದು ಸಾರ್ವಜನಿಕರ ಸೇವೆ ಮಾಡಲು. ನಿಮ್ಮ ಕರ್ತವ್ಯ ಅರಿತು ಕಾರ್ಯನಿರ್ವಹಿಸಿ. ಅದು ಸಾಧ್ಯವಾಗದಿದ್ದರೆ ತಾಲೂಕಿನಿಂದ ಹೊರ ನಡೆಯಬಹುದು ಎಂದು ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಹೇಳಿದರು.

Advertisement

ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ 2ನೇ ತ್ತೈಮಾಸಿಕ ಇಲಾಖೆವಾರು ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಕಚೇರಿ ವೇಳೆಗೆ ಸರಿಯಾಗಿ ಇಲಾಖೆಯ ಯಾವೊಬ್ಬ ಅಧಿಕಾರಿಗಳು ಕೆಲಸಕ್ಕೆ ಬರುತ್ತಿಲ್ಲ. ಹೇಳ್ಳೋರು, ಕೇಳ್ಳೋರು ಯಾರು ಇಲ್ಲ ಎಂಬಂತಾಗಿದೆ. ಈ ಬಗ್ಗೆ ಸಾಕಷ್ಟು ದೂರು ಕೇಳಿ ಬಂದಿವೆ. ಅಧಿಕಾರಿಗಳ ವಿರುದ್ಧ ಮೇಲಿನ ಅಧಿಕಾರಿಗಳಿಗೆ ಶಿಸ್ತು ಕ್ರಮಕ್ಕೆ ಒತ್ತಾಯಿಸುವ ಮುನ್ನಾ ಎಲ್ಲಾ ಇಲಾಖೆಗಳಲ್ಲಿ ಅಧಿಕಾರಿಗಳು ಬಯೋಮೆಟ್ರಿಕ್‌ ಅಳವಡಿಸಿಕೊಂಡು ಸಮಯ ಪಾಲನೆ ಮಾಡಬೇಕು ಎಂದು ಸೂಚಿಸಿದರು.

ಪರಿಶಿಷ್ಟಜಾತಿ, ಪರಿಶಿಷ್ಟ ಪಂಗಡಗಳ ಅರ್ಹ ಫಲಾನುಭವಿಗಳಿಗೆ ಸರ್ಕಾರಿ ಯೋಜನೆಗಳನ್ನು ಸಮರ್ಪಕವಾಗಿ ತಲುಪಿಸಲು ಅಧಿಕಾರಿಗಳು ಶ್ರಮಿಸಬೇಕು. ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ಕೇಳಿದವರಿಗೆ ಮಾಹಿತಿ ನೀಡದೆ ದೌರ್ಜನ್ಯದಿಂದ ನಡೆದುಕೊಂಡರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.

ತಾಲೂಕಿನ ವ್ಯಾಪ್ತಿಯಲ್ಲಿರುವ ಎಲ್ಲ ಇಲಾಖೆಗಳ ಅಧಿಕಾರಿಗಳು ಪರಿಶಿಷ್ಟಜಾತಿ, ಪರಿಶಿಷ್ಟಪಂಗಡಗಳಿಗೆ ಸರ್ಕಾರದಿಂದ ಬಂದ ಅನುದಾನ ಫಲಾನುಭವಿಗಳಿಗೆ ತಲುಪಿಸುವ ಕಾರ್ಯ ಮಾಡಬೇಕು. ಬಂದಿರುವ ಅನುದಾನ ನ್ಯಾಯಸಮ್ಮತವಾಗಿ ಖರ್ಚು ಮಾಡದಿದ್ದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

Advertisement

ಬೆಸ್ಕಾಂ ಇಲಾಖೆಯಲ್ಲಿ ಗಂಗಾಕಲ್ಯಾಣ ಯೋಜನೆಯಡಿ ಉಚಿತ ಪಂಪ್‌ಸೆಟ್ ವಿದ್ಯುತ್‌ ನೀಡಲು ಟೆಂಡರ್‌ದಾರರು ರೈತರ ಹತ್ತಿರ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದರು.

ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ವೈದ್ಯರು ಸರಿಯಾಗಿ ಸ್ಪಂದಿಸುತ್ತಿಲ್ಲ. ಸಮಯಕ್ಕೆ ಸರಿಯಾಗಿ ಆಸ್ಪತ್ರೆಯಲ್ಲಿ ಇರುವುದಿಲ್ಲ. ಔಷಧಗಳನ್ನು ಖಾಸಗಿ ಮೆಡಿಕಲ್ಸ್‌ಗಳಲ್ಲಿ ತೆಗೆದುಕೊಳ್ಳಲು ಚೀಟಿ ಬರೆಯುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗಳಿಗೆ ಬರುವವರೆಲ್ಲ ಬಡವರು. ಕೂಡಲೇ ವೈದ್ಯಾಧಿಕಾರಿಗಳು ಇಂತಹ ದೂರುಗಳು ಬರದಂತೆ ಕ್ರಮವಹಿಸಬೇಕು ಎಂದು ಸೂಚಿಸಿದರು.

ಡಾ| ಗಿರೀಶ್‌ ಮಾತನಾಡಿ, ಆಸ್ಪತ್ರೆಗೆ ಚಿಕಿತ್ಸೆಗೆ ಬರುವ ರೋಗಿಗಳಿಗೆ ಸರ್ಕಾರದ ಎಲ್ಲ ಸೌಲಭ್ಯ ನೀಡಲಾಗುತ್ತಿದೆ. ಖಾಸಗಿ ಮೆಡಿಕಲ್ಸ್‌ಗಳಿಗೆ ಚೀಟಿ ಬರಿಯುತ್ತಿರುವುದರ ಬಗ್ಗೆ ಮಾಹಿತಿ ಪಡೆದು ಸರಿಪಡಿಸಲಾಗುವುದು ಎಂದರು.

ತಹಶೀಲ್ದಾರ್‌ ಎ.ಜೆ. ನಾಗರಾಜ್‌ ಮಾತನಾಡಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ಬಿಸಿಎಂ ಇಲಾಖೆ ಹಾಸ್ಟೆಲ್‌ಗ‌ಳಿಗೆ ಭೇಟಿ ನೀಡಿದ್ದು, ಅಲ್ಲಿ ನಿಲಯ ಮೇಲ್ವಿಚಾರಕರು ಇಲ್ಲದಿರುವುದು ಗಮನಕ್ಕೆ ಬಂದಿದೆ. ಮಕ್ಕಳು ಬೇಕಾಬಿಟ್ಟಿ ರಾತ್ರಿ ಪಾಳೆಯದಲ್ಲಿ ತಿರುಗುರುತ್ತಾರೆ. ವಿದ್ಯಾರ್ಥಿ ನಿಲಯದ ಹಾಸ್ಟೆಲ್‌ಗ‌ಳಲ್ಲಿ ಬೀದಿ ದೀಪಗಳೇ ಉರಿಯುವುದಿಲ್ಲ. ಏನಾದರೂ ಕೇಳ್ಳೋಣ ಎಂದು ದೂರವಾಣಿ ಮಾಡಿದರೆ ಕರೆ ಸ್ವೀಕರಿಸುವುದಿಲ್ಲ. ಶೌಚಾಲಯ ಸ್ವಚ್ಛತೆ ಇಲ್ಲದೆ ಗಬ್ಬೆದ್ದು ನಾರುತ್ತಿವೆ. ಬೆಡ್‌ಗಳು ನೋಡುವ ಸ್ಥಿತಿಯಲ್ಲಿಲ್ಲ. ಓರ್ವ ವಿದ್ಯಾರ್ಥಿಗೆ ಸರ್ಕಾರ 1,400 ಖರ್ಚು ಮಾಡುತ್ತದೆ. ಸಂಬಂಧಪಟ್ಟ ಅಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.

ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಮಾತನಾಡಿ, ಸಾರ್ವಜನಿಕರ ಸಮಸ್ಯೆ ಆಲಿಸಲು ಅಧಿಕಾರಿಗಳಿಗೆ ಸರ್ಕಾರ ದೂರವಾಣಿ ಸಂಪರ್ಕ ಕಲ್ಪಿಸಿದೆ. ಜನಪ್ರತಿನಿಧಿಗಳು, ಸಾರ್ವಜನಿಕರ ಕರೆಗಳನ್ನು ಸ್ವೀಕರಿಸದಿದ್ದರೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆಯಲಾಗುತ್ತದೆ ಎಂದು ಎಚ್ಚರಿಸಿದರು.

ಕಾರ್ಯ ನಿರ್ವಹಣಾಧಿಕಾರಿ ಪ್ರಕಾಶ್‌ ಮಾತನಾಡಿ, ಅಧಿಕಾರಿಗಳು ಇರುವ ಜವಾಬ್ದಾರಿಗಳನ್ನು ಪ್ರಾಮಾಣಿಕತೆಯಿಂದ ಮಾಡಿದರೆ ಯಾರೊಬ್ಬರು ದೂರು ನೀಡುವುದಿಲ್ಲ. ಸಾರ್ವಜನಿಕ ಸೇವೆಗೆ ಎಲ್ಲ ಅಧಿಕಾರಿಗಳು ಸದಾಕಾಲ ಸಿದ್ಧರಿರಬೇಕು ಎಂದರು.

ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು ಇಲಾಖೆಗಳ ವರದಿ ನೀಡಿದರು. ತಾಪಂ ಅಧ್ಯಕ್ಷೆ ರೂಪಾ, ಉಪಾಧ್ಯಕ್ಷೆ ಗೀತಾ, ಜಿಪಂ ಸದಸ್ಯರಾದ ಯಶೋಧಮ್ಮ, ಮಂಜುಳಮ್ಮ, ಸಾಕಮ್ಮ, ಲೋಕೇಶ್ವರ, ವಾಗೀಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next