ಕೊಪ್ಪಳ: ನಗದರ ಕಿಮ್ಸ್‌ನಲ್ಲಿ ಕೋವಿಡ್-19 ಸ್ಕ್ರೀನಿಂಗ್ ಪರೀಕ್ಷೆ ಹಾಗೂ ಆರ್‌ಟಿಪಿಸಿಆರ್ ಪ್ರಯೋಗಾಲಯದಿಂದ ಕೋವಿಡ್ ನೆಗೆಟಿವ್ ಮತ್ತು ಇತರೆ ಲಕ್ಷಣಗಳನ್ನು ತಿಳಿದುಕೊಳ್ಳಲು ಅನುಕೂಲವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ ಹೇಳಿದರು.
ನಗರದ ಕಿಮ್ಸ್‌ನಲ್ಲಿ ವೈರಾಣು ಸಂಶೋಧನೆ ಮತ್ತು ರೋಗ ನಿರ್ಣಯ ಪ್ರಯೋಗಾಲಯ ಉದ್ಘಾಟನೆ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ಪ್ರಯೋಗಾಲಯಕ್ಕೆ ಎಸ್‌ಡಿಆರ್ ಎಫ್ ನಿಧಿಯಲ್ಲಿ ಸಿವಿಲ್ ಕಾಮಗಾರಿಗೆ 23.70 ಲಕ್ಷ ರೂ. ಉಪಕರಣಗಳ ಖರೀದಿಗೆ 111.93 ಲಕ್ಷ ರೂ. ಖರ್ಚಾಗಿದೆ. ಟ್ರೂನಾಟ್ ಉಪಕರಣದಲ್ಲಿ ಪ್ರತಿ ಶಿಫ್ಟ್‌ಗೆ 20ರಿಂದ 25 ಜನ ಹಾಗೂ ಪ್ರತಿ ದಿನ 40ರಿಂದ 50 ಪರೀಕ್ಷೆಗಳನ್ನು ಮಾಡಲಾಗುತ್ತದೆ. ಆರ್‌ಟಿಪಿಸಿಆರ್ ಉಪಕರಣದಲ್ಲಿ ಪ್ರತಿ ಶಿಫ್ಟ್‌ಗೆ 70-75 ಜನರು ಹಾಗೂ ಪ್ರತಿದಿನ 140-145 ಪರೀಕ್ಷೆಗಳನ್ನು ಮಾಡಲಾಗುವುದು. ಸ್ಕ್ರೀನಿಂಗ್ ಪರೀಕ್ಷೆ (ಟ್ರೂನಾಟ್), ಆರ್‌ಟಿಪಿಸಿಆರ್ ಪರೀಕ್ಷೆಗಳನ್ನು ಸಂಶೋಧನಾ ವಿಜ್ಞಾನಿಗಳು, ಸಂಶೋಧನಾ ಸಹಾಯಕರು, ಪ್ರಯೋಗಶಾಲಾ ತಜ್ಞರು ಮಾಡುತ್ತಾರೆ ಎಂದರು.
ಈಗಾಗಲೆ 55 ಪರೀಕ್ಷೆಗಳನ್ನು ಮಾಡಿದ್ದು, ಎಲ್ಲಾ 55 ಪರೀಕ್ಷೆಗಳು ನೆಗೆಟಿವ್ ಬಂದಿವೆ. ಕೋವಿಡ್ ಸೋಂಕು ಹೆಚ್ಚಾಗುತ್ತಿದ್ದರೂ ಯಾರೂ ಗಾಬರಿ ಪಡಬೇಕಾಗಿಲ್ಲ. ಏಕೆಂದರೆ ರೋಗನಿರೋಧಕ ಶಕ್ತಿ ಕಡಿಮೆ ಇರುವವರು ಮತ್ತು ವಯಸ್ಸಾದವರು ಮರಣ ಹೊಂದುತ್ತಿದ್ದರೂ, ಮರಣ ಪ್ರಮಾಣ ಬಹಳ ಕಡಿಮೆಯಿದೆ. ಕೆಲವೊಬ್ಬರಿಗೆ ಯಾವುದೇ ಕೋವಿಡ್-19 ಲಕ್ಷಣಗಳು ಕಂಡುಬರದಿದ್ದರೂ ಅವರಿಗೆ ಪರೀಕ್ಷೆ ಮಾಡಿಸಿದಾಗ ಪಾಸಿಟಿವ್ ಬಂದಿರುವುದು ಕಂಡುಬಂದಿವೆ. ಇದು ಬಹುತೇಕ ಮಹಾರಾಷ್ಟ್ರದಿಂದ ಬಂದವರಿಂದಲೇ ಕಂಡುಬಂದಿದೆ ಎಂದರು.
ಕೋವಿಡ್ ವೇಳೆ ಕೇಂದ್ರವು 20 ಲಕ್ಷ ಕೋಟಿ ಆರ್ಥಿಕ ಪ್ಯಾಕೆಜ್ ಘೋಷಣೆ ಮಾಡಿದೆ. ರಾಜ್ಯ ಸರ್ಕಾರ ಸಂಕಷ್ಟದಲ್ಲಿರುವ ವಿವಿಧ ವರ್ಗಕ್ಕೆ ಪ್ಯಾಕೇಜ್ ಘೋಷಣೆ ಮಾಡಿದೆ. ಮೆಕ್ಕೆಜೋಳಕ್ಕಾಗಿ ರೂ. 500 ಕೋಟಿ ಅನುದಾನ ಘೋಷಿಸಿದೆ. ರೈತರು ತಮ್ಮ ಚಾಲ್ತಿ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಜೋಡಣೆ ಮಾಡಬೇಕು. ಕೆಲವೊಂದು ರೈತರು ಖಾತೆಯ ಸರಿಯಾದ ಮಾಹಿತಿ ನೀಡದ ಕಾರಣದಿಂದ ರೈತರ ಖಾತೆಗೆ ಹಾಕಿದ ಹಣ ಬೇರೆ ಬೇರೆ ಖಾತೆಗೆ ಸಂದಾಯವಾದ ದೂರುಗಳು ಕೇಳಿಬಂದಿವೆ ಎಂದರು.
ಕೃಷಿ ಇಲಾಖೆಯ ಆತ್ಮ ಯೋಜನೆಯಡಿ ಇರುವವರನ್ನ ಕೆಲಸದಿಂದ ತೆಗೆಯುವುದಿಲ್ಲ. ಯಾವುದೇ ವದಂತಿಗಳಿಗೆ ಕಿವಿಗೊಡಬಾರದು. ಕಳೆದ ಕೆಲವು ವರ್ಷಗಳಿಂದ ರೈತರ ಬೆಳೆ ವಿಮೆ ಬಂದಿಲ್ಲ. ಈ ಕುರಿತು ಅಧಿಕಾರಿಗಳ ಜೊತೆ ಚರ್ಚಿಸಿದ್ದೇನೆ. ಬೆಳೆ ಸರ್ವೇ ಮಿಸ್ ಮ್ಯಾಚ್ ಆಗಿದ್ದರಿಂದ ಸರಿಪಡಿಸಿ ವಿಮಾ ಮೊತ್ತ ಬಿಡುಗಡೆಗೆ ಈಗಾಗಲೇ ಸೂಚನೆ ನೀಡಿದ್ದೇನೆ ಎಂದರು.
ಈ ವೇಳೆ ಜಿಪಂ ಅಧ್ಯಕ್ಷ ಎಚ್. ವಿಶ್ವನಾಥ ರೆಡ್ಡಿ, ಸಂಸದ ಸಂಗಣ್ಣ ಕರಡಿ, ಶಾಸಕರಾದ ಅಮರೇಗೌಡ ಬಯ್ನಾಪೂರ, ಪರಣ್ಣ ಮುನವಳ್ಳಿ, ಬಸವರಾಜ ದಢೇಸೂಗೂರು, ಡಿಸಿ ಪಿ. ಸುನೀಲ್ ಕುಮಾರ್, ಜಿಪಂ ಸಿಇಒ ರಘುನಂದನ್ ಮೂರ್ತಿ ಸೇರಿ ಇತರರು ಇದ್ದರು.