ಅರಸೀಕೆರೆ: ನಗರದ ಸರ್ಕಾರಿ ಜೆ.ಸಿ.ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ 5 ಹಾಸಿಗೆಯ ಕೊರೊನಾ ಚಿಕಿತ್ಸಾ ವಾರ್ಡ್ ಸ್ಥಾಪಿಸಲಾಗಿದೆ ಎಂದು ತಾಲೂಕು ಆರೋಗ್ಯ ಇಲಾಖೆ ವೈದ್ಯಾಧಿಕಾ ಡಾ.ನಾಗಪ್ಪ ತಿಳಿಸಿದರು. ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ಸುದ್ದಿಗಾರೊಂದಿಗೆ ಮಾತನಾಡಿದರು.
ಶಂಕಿತ ಕೊರೊನಾ ಸೋಂಕು ಕಂಡು ಬಂದ ವ್ಯಕ್ತಿಗಳನ್ನು ಸುರಕ್ಷತಾ ಕ್ರಮಗಳೊಂದಿಗೆ ಪರೀಕ್ಷೆಗೆ ಒಳಪಡಿಸಿ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಶಂಕಿತ ವ್ಯಕ್ತಿಗಳ ಕಫ ಮಾದರಿ ಸಂಗ್ರಹಿಸಿ ಜಿಲ್ಲಾ ಆಸ್ಪತ್ರೆಗೆ ಪರೀಕ್ಷೆಗೆ ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ. ಕೊರಾನಾ ಚಿಕಿತ್ಸೆಗೆ ಅಗತ್ಯವಾದ ಸಾಧನಾ ಸಲಕರಣೆಗಳು ಹಾಗೂ ಔಷಧಿ ಮಾತ್ರೆಗಳನ್ನು ದಾಸ್ತಾನು ಮಾಡಿಕೊಳ್ಳಲು ಸೂಚಿಸಲಾಗಿದೆ ಎಂದು ಹೇಳಿದರು.
ವಿದೇಶದಿಂದ ಬಂದವರು ಮಾಹಿತಿ ನೀಡಬೇಕು: ವಿದೇಶದಿಂದ ಆಮಿಸಿದ ವ್ಯಕ್ತಿಗಳು ತಾಲೂಕು ಆರೋಗ್ಯಾಧಿಕಾರಿಗಳ ಗಮನಕ್ಕೆ ಅಥವಾ ಸಹಾಯವಾಣಿ 104ಕ್ಕೆ ಮಾಹಿತಿ ನೀಡಬೇಕಾಗಿದೆ. ತಮ್ಮ ಮನೆಯಲ್ಲಿ 14 ದಿನಗಳ ಕಾಳ ಪ್ರತ್ಯೇಕ ಕೊಠಡಿಯಲ್ಲಿ ಉಳಿದು ತಮ್ಮ ಆರೋಗ್ಯದ ಬಗ್ಗೆ ನಿಗಾ ವಹಿಸಬೇಕು. ಪ್ರತಿನಿತ್ಯ ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ನೀಡಿ ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಬೇಕು ಎಂದರು.
ಸೋಂಕು ಶಂಕಿತ ವ್ಯಕ್ತಿ ಎಂದು ಕಂಡು ಬಂದಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಸ್ಥಾಪಿಸಿರುವ ವಿಶೇಷ ವಾರ್ಡ್‌ಗೆ ಆ್ಯಂಬುಲೆನ್ಸ್‌ನಲ್ಲಿ ಕರೆತಂದು ಚಿಕಿತ್ಸೆ ನೀಡಲಾಗುತ್ತದೆ ಎಂದರು. ಕೆಮ್ಮು, ಜ್ವರ, ಉಸಿರಾಟದ ತೊಂದರೆ ಇರುವವರು ಮಾತ್ರ ಮಾಸ್ಕ್ ಧರಿಸಬೇಕು. ಆರೋಗ್ಯವಂತರು ಮಾಸ್ಕ್ ಧರಿಸುವ ಅಗತ್ಯವಿಲ್ಲ ಎಂದು ಸಲಹೆ ನೀಡಿದರು.
ಮುಂಜಾಗ್ರತೆ ವಹಿಸಿ: ಸರ್ಕಾರಿ ಜೆ.ಸಿ.ಆಸ್ಪತ್ರೆ ವೈದ್ಯಾಧಿಕಾರಿ ಡಾ.ಕರಿಯಪ್ಪ ಮಾತನಾಡಿ, ಕೊರೊನಾ ಸೋಂಕು ಹರಡದಂತೆ ಸಾರ್ವಜನಿಕರು ಮುಂಜಾಗ್ರತಾ ಕ್ರಮ ವಹಿಸಬೇಕು. ಭಯ ಪಡುವ ಅಗತ್ಯವಿಲ್ಲ. ತೀವ್ರ ಜ್ವರ, ನೆಗಡಿ ಕೆಮ್ಮು, ಉಸಿರಾಟದ ತೊಂದರೆ ಹಾಗೂ ಭೇದಿಯಿಂದ ಬಳಲುತ್ತಿರುವವರು ತಕ್ಷಣ ಸ್ಥಳೀಯ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ತಜ್ಞ ವೈದ್ಯರಾದ ಡಾ.ಷಡಕ್ಷರಿ, ತಾಲೂಕು ಆರೋಗ್ಯ ರಕ್ಷಾ ಸಮಿತಿ ಸದಸ್ಯ ಎಂ.ವೈ.ಖಾನ್ ಹಾಗೂ ಆಸ್ಪತ್ರೆಯ ಸಿಬ್ಬಂದಿ ಲೋಕೇಶ್ ಹಾಜರಿದ್ದರು.