Advertisement

ಮುಕ್ತ ವಿವಿ 17,512 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

12:52 PM Mar 14, 2019 | Team Udayavani |

ಮೈಸೂರು: ಮುಕ್ತ ಗಂಗೋತ್ರಿಯ ಘಟಿಕೋತ್ಸವ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ 16ನೇ ವಾರ್ಷಿಕ ಘಟಿಕೋತ್ಸವದಲ್ಲಿ 17512 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

Advertisement

ಯುಜಿಸಿ ಮಾನ್ಯತೆ ನವೀಕರಣಗೊಳ್ಳದೆ ಸ್ಥಗಿತಗೊಂಡಿದ್ದ ಹಿನ್ನೆಲೆಯಲ್ಲಿ ಮೂರು ವರ್ಷಗಳ ಬಳಿಕ ನಡೆದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ 16ನೇ ಘಟಿಕೋತ್ಸವದಲ್ಲಿ 10 ಸಂಶೋಧನಾ ವಿದ್ಯಾರ್ಥಿಗಳು ಪಿಎಚ್‌.ಡಿ ಪದವಿ, 7 ವಿದ್ಯಾರ್ಥಿಗಳು ಚಿನ್ನದ ಪದಕ, 8 ವಿದ್ಯಾರ್ಥಿಗಳು ನಗದು ಬಹುಮಾನ ಸೇರಿ 5,364 ಪುರುಷ ಮತ್ತು 12,148 ಮಹಿಳಾ ಅಭ್ಯರ್ಥಿಗಳು ಸೇರಿದಂತೆ ಒಟ್ಟು 17,512 ವಿದ್ಯಾರ್ಥಿಗಳು ಪದವಿಗಳನ್ನು ಪಡೆದರು.

ಸಮಾರಂಭದಲ್ಲಿ ಘಟಿಕೋತ್ಸವ ಭಾಷಣ ಮಾಡಿದ ನ್ಯಾಕ್‌ ನಿರ್ದೇಶಕ ಪ್ರೊ.ಎಸ್‌.ಸಿ.ಶರ್ಮ, ನಾಳಿನ ನಾಯಕರುಗಳಾದ ಯುವ ಸಮೂಹ, ಭಾರತೀಯತೆಯ ಚೇತನ ಮತ್ತು ಆದರ್ಶಗಳನ್ನು ಗೌರವಿಸುತ್ತಾ ಅದನ್ನು ಜೀವನದಲ್ಲಿ ಅನುಶೀಲನವಾಗಿ ಅಳವಡಿಸಿಕೊಳ್ಳಬೇಕು. ನೀವುಗಳು ನಾಳಿನ ನೇತಾರರು ಮಾತ್ರವಲ್ಲ, ಇಂದಿನ ರೂವಾರಿಗಳು. ನೀವು ಬದಲಾವಣೆ ಹರಿಕಾರರಾಗುವ ಮೂಲಕ ರಾಷ್ಟ್ರದ ಪ್ರಗತಿಗೆ ಕಾರಣರಾಗಬಲ್ಲಿರಿ. ಹೀಗಾಗಿ ನಾವು ಪಡೆದ ಜ್ಞಾನವು ಸದ್ವಿನಿಯೋಗವಾಗಬೇಕು ಎಂದು ಸಲಹೆ ನೀಡಿದರು. 

ವಿಶ್ವವಿದ್ಯಾನಿಲಯದ ಸಮಕುಲಾಧಿಪತಿಗಳಾದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅಧ್ಯಕ್ಷತೆ ವಹಿಸಿದ್ದರು. ಮುಕ್ತ ವಿವಿ ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಸಂದೇಶ್‌ ನಾಗರಾಜ್‌, ಪುಟ್ಟಣ್ಣ, ಮುಕ್ತ ವಿವಿ ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ, ಕುಲಸಚಿವ ಪ್ರೊ.ಬಿ.ರಮೇಶ, ಮೌಲ್ಯಮಾಪನ ವಿಭಾಗದ ಕುಲಸಚಿವ ಡಾ.ಎಂ.ಎಸ್‌.ರಮಾನಂದ, ಪ್ರಾಧ್ಯಾಪಕ ಜಗದೀಶ್‌ ಮೊದಲಾದವರು ಉಪಸ್ಥಿತರಿದ್ದರು.

ಕಾನ್ವೋಕೇಷನ್‌ ಡಿಸಾಲ್ಟ್ಡ್ ಎಂದು ಕ್ಷಮೆಕೋರಿದ ಜಿಟಿಡಿ!: ವಿಶ್ವವಿದ್ಯಾಲಯಗಳ ಕುಲಾಧಿಪತಿಗಳಾದ ರಾಜ್ಯಪಾಲರ ಅನುಪಸ್ಥಿತಿಯಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ 16ನೇ ಘಟಿಕೋತ್ಸವದ ಅಧ್ಯಕ್ಷತೆವಹಿಸಿದ್ದ ಸಮಕುಲಾಧಿಪತಿಗಳಾದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಸೂಚನೆ ಕೊಡುವ ಭರದಲ್ಲಿ ಘಟಿಕೋತ್ಸವವನ್ನು ಮುಕ್ತಾಯಗೊಳಿಸುತ್ತಿದ್ದೇನೆ ಎಂದು ಇಂಗ್ಲಿಷ್‌ನಲ್ಲಿ ಹೇಳಿ ಗೊಂದಲ ಮೂಡಿಸಿದರು.

Advertisement

ಆದರೆ, ಆಗಿನ್ನೂ ಘಟಿಕೋತ್ಸವ ಭಾಷಣವೇ ಆಗಿರಲಿಲ್ಲ. ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ಅವರು ವಿಶ್ವವಿದ್ಯಾಲಯದ 16ನೇ ವಾರ್ಷಿಕ ಘಟಿಕೋತ್ಸವದಲ್ಲಿ ಪದವಿ ಪಡೆಯಲು ಅರ್ಹರಾದ ಅಭ್ಯರ್ಥಿಗಳನ್ನು ಒಪ್ಪಿಸಿಕೊಳ್ಳುವಂತೆ ಇಂಗ್ಲಿಷ್‌ನಲ್ಲಿ ಕೋರಿದಾಗ ಸಚಿವರು ಇಂಗ್ಲಿಷ್‌ನಲ್ಲಿ ಒಪ್ಪಿಸಿಕೊಂಡಿದ್ದೇನೆ ಎನ್ನುವ ಬದಲು ಕಾನ್ವೋಕೇಷನ್‌ ಡಿಸಾಲ್ಟ್ಡ್ ಎಂದು ಬಿಟ್ಟರು. ಪಕ್ಕದಲ್ಲಿದ್ದ ಪ್ರೊ.ಎಸ್‌.ಸಿ.ಶರ್ಮ ಅವರು ತಿದ್ದಿದ ನಂತರ ಸ್ಸಾರಿ..ಸ್ಸಾರಿ..ಅಡ್ಮಿಟೆಡ್‌ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next