Advertisement
ಮಾ.5ರಂದು ಬೆಳಗ್ಗೆ 11ಗಂಟೆಗೆ ಮುಕ್ತ ವಿವಿಯ ಘಟಿಕೋತ್ಸವ ಭವನದಲ್ಲಿ 16ನೇ ಘಟಿಕೋತ್ಸವ ನಡೆಯಲಿದೆ ಎಂದು ವಿವಿ ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ತಿಳಿಸಿದರು. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವವಿದ್ಯಾಲಯದ ಸಮಕುಲಾಧಿಪತಿಗಳಾದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅಧ್ಯಕ್ಷತೆ ವಹಿಸಲಿದ್ದು, ನ್ಯಾಕ್ ನಿರ್ದೇಶಕ ಪ್ರೊ.ಎಸ್.ಸಿ.ಶರ್ಮ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ.
Related Articles
Advertisement
ಎಂಕಾಂ 806, ಎಂಬಿಎ 681, ಬಿಕಾಂ 1,133, ಬಿ.ಇಡಿ (ವಿಶೇಷ) 287, ವಿಜ್ಞಾನ-ತಂತ್ರಜ್ಞಾನ ಮತ್ತು ಮಾಹಿತಿ ವಿಜ್ಞಾನದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಯಲ್ಲಿ 282 ವಿದ್ಯಾರ್ಥಿಗಳು ಸೇರಿದಂತೆ ಪದವಿ ಪಡೆಯಲು 17,512 ವಿದ್ಯಾರ್ಥಿಗಳು ಅರ್ಹರಾಗಿದ್ದು, ಈ ಪೈಕಿ 5,364 ಪುರುಷ, 12,148 ಮಹಿಳಾ ವಿದ್ಯಾರ್ಥಿಗಳಿದ್ದಾರೆ ಎಂದರು.
ಹುತಾತ್ಮ ಯೋಧನ ಪತ್ನಿಗೆ ಉಚಿತ ಶಿಕ್ಷಣ: ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ಗುಡಿಗೆರೆ ಕಾಲೊನಿಯ ವೀರಯೋಧ ಗುರು ಅವರ ಪತ್ನಿ ಕಲಾವತಿಗೆ ಉಚಿತ ಶಿಕ್ಷಣ ನೀಡಲು ಮುಕ್ತ ವಿವಿ ಮುಂದಾಗಿದೆ. ಹುತಾತ್ಮ ಯೋಧ ಗುರು ಅವರ ಪತ್ನಿ ಕಲಾವತಿ ಎಸ್., ಮುಕ್ತ ವಿವಿಯ ರಾಮನಗರ ಪ್ರಾದೇಶಿಕ ಕೇಂದ್ರದ ಮೂಲಕ ಪ್ರಥಮ ವರ್ಷದ ರಾಜ್ಯಶಾಸ್ತ್ರ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆದಿದ್ದಾರೆ.
ವಿದ್ಯಾಭ್ಯಾಸ ಮುಂದುವರಿಸಲು ಅವರಿಗಿರುವ ಆಸಕ್ತಿಯನ್ನು ಮನಗಂಡು ಅವರಿಂದ ಯಾವುದೇ ಶುಲ್ಕ ಪಡೆಯದೆ ಉಚಿತ ಶಿಕ್ಷಣ ನೀಡಲು ಉದ್ದೇಶಿಸಿದೆ. ಈ ಸಂಬಂಧ ಮುಂದಿನ ವ್ಯವಸ್ಥಾಪನಾ ಮಂಡಳಿ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಗುವುದು ಎಂದು ಕುಲಪತಿ ಪ್ರೊ.ಶಿವಲಿಂಗಯ್ಯ ತಿಳಿಸಿದರು.
ಪಿ.ಎಚ್‌ಡಿ ಪ್ರವೇಶಾತಿ: ಪಿ.ಎಚ್‌ಡಿ ಅಧ್ಯಯನ ಮಾಡಲು ಇಚ್ಛಿಸುವ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಕಲ್ಪಿಸಲು ಸದ್ಯದಲ್ಲೇ ಕ್ರಮವಹಿಸಲಾಗುವುದು. ಜೊತೆಗೆ ಸಿಬಿಸಿಎಸ್ ಪಠ್ಯಗಳನ್ನು ಅಳವಡಿಸಲು ಕ್ರಮವಹಿಸಲಾಗಿದೆ. ಪ್ರಸ್ತುತ ಬೋಧಿಸುತ್ತಿರುವ ಪಠ್ಯ ಹಾಗೂ ಪರೀಕ್ಷಾ ಕೈಪಿಡಿಗಳನ್ನು ಪರಿಷ್ಕರಿಸಲಾಗುವುದು. ಎನ್‌ಎಡಿ ಮೂಲಕ ವಿದ್ಯಾರ್ಥಿಗಳ ಅಂಕಪಟ್ಟಿ ಮುಂತಾದ ಪ್ರಮಾಣ ಪತ್ರಗಳನ್ನು ಸಂರಕ್ಷಿಸಲಾಗುವುದು. ವಿದ್ಯಾರ್ಥಿಗಳ ಅಂಕಪಟ್ಟಿ, ಪದವಿ ಪ್ರಮಾಣಪತ್ರ ಮುಂತಾದವುಗಳ ಸುರಕ್ಷತೆಯ ಬಗ್ಗೆ ಬಾರ್‌ಕೋಡ್ ಸಿಸ್ಟಂ ಜಾರಿಗೆ ತರಲು ಕ್ರಮವಹಿಸಲಾಗಿದೆ ಎಂದರು.
ಹೊಸ ಕೋರ್ಸ್‌ಗಳ ಆರಂಭ: ಮುಂಬರುವ ದಿನಗಳಲ್ಲಿ ಕೌಶಲ್ಯಾಧಾರಿತ ಕೋರ್ಸ್‌ಗಳು, ಬಿಎಸ್ಸಿ, ಬಿಎಸ್‌ಡಬ್ಲೂé, ಬಿಬಿಎ, ಎಂಎಸ್‌ಡಬ್ಲೂ, ಎಂಎಸ್ಸಿ (ಬಾಟ್ನಿ), ಎಂಎಸ್ಸಿ(ಜುವಾಲಜಿ), ಎಂ.ಎ (ಶಿಕ್ಷಣ), ಡಿಪ್ಲೋಮ ಮತ್ತು ಪಿಜಿ ಡಿಪ್ಲೋಮ ಕೋರ್ಸ್‌ಗಳನ್ನು ಆರಂಭಿಸಲಾಗುವುದು ಎಂದು ತಿಳಿಸಿದರು.ಮುಕ್ತ ವಿವಿ ಕುಲಸಚಿವ ಪ್ರೊ.ಬಿ.ರಮೇಶ, ಮೌಲ್ಯಮಾಪನ ಕುಲಸಚಿವ ಡಾ.ಎಂ.ಎಸ್.ರಮಾನಂದ, ಹಣಕಾಸು ಅಧಿಕಾರಿ ಖಾದರ್‌ಪಾಷಾ ಹಾಜರಿದ್ದರು. ಅವಧಿ ವಿಸ್ತರಿಸಿದರೆ ಬಾಕಿ ಕೆಲಸ ಪೂರ್ಣ: ಎರಡೂವರೆ ವರ್ಷ ಅಜ್ಞಾತವಾಸ ಮುಗಿಸಿ, ಎಲ್ಲರ ಸಹಕಾರದಿಂದ ಪಾರದರ್ಶಕತೆಯಿಂದ ಮುಕ್ತ ವಿವಿ ಮೇಲಿದ್ದ ಕಾರ್ಮೋಡ ಸರಿಸಿ, ಇದೀಗ ಹಳಿಗೆ ತಂದಿದ್ದೇನೆ. ಕುಲಪತಿ ಅವಧಿಯನ್ನು ಒಂದು ವರ್ಷಗಳ ಕಾಲ ವಿಸ್ತರಣೆ ಮಾಡಲು ಕಾಯ್ದೆಯಲ್ಲಿ ಅವಕಾಶವಿದೆ. ಅದರಂತೆ ತಾವು ಕೂಡ ರಾಜ್ಯಪಾಲರಿಗೆ ಮನವಿ ಮಾಡಿದ್ದು, ನನ್ನ ಅವಧಿ ಪೂರ್ಣಗೊಂಡ ನಂತರ ವಿಸ್ತರಣೆ ಮಾಡುವ ವಿಶ್ವಾಸವಿದೆ. ನಾನು ಮಾಡಿದ ಕೆಲಸ ತೃಪ್ತಿತಂದಿದ್ದು, ಇನ್ನೂ ಶೇ.25ರಷ್ಟು ಕೆಲಸ ಬಾಕಿ ಇದೆ. ಅವಧಿ ವಿಸ್ತರಣೆಯಾಗಿ ಅವಕಾಶ ಸಿಕ್ಕರೆ ಪೂರ್ಣಗೊಳಿಸಿ ಹೋಗುತ್ತೇನೆ ಎಂದು ವಿವಿ ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ತಿಳಿಸಿದರು.