Advertisement

ಬಯಲು ಶೌಚ ಮುಕ್ತ ಉಡುಪಿಯಲ್ಲಿ ಬಹಿರ್ದೆಸೆಗೆ ಪರದಾಟ!

09:03 PM Jul 27, 2021 | Team Udayavani |

ಉಡುಪಿ:  ಸ್ವಚ್ಛ ಭಾರತ ಅಭಿಯಾನದ ಬಯಲು ಶೌಚ ಮುಕ್ತ ಪ್ರಮಾಣ ಪತ್ರ ಪಡೆದ ಉಡುಪಿ ನಗರಸಭೆ ಮಣಿಪಾಲದಲ್ಲಿ ಸಾರ್ವಜನಿಕ ಶೌಚಗೃಹ ಹಾಗೂ ತೆಂಕಪೇಟೆಯ ಅಂಗವಿಕಲರ ಶೌಚಗೃಹ ಕಾರ್ಯಾಚರಿಸದ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗಿದೆ.

Advertisement

ವಿದ್ಯಾರ್ಥಿಗಳು ಸೇರಿದಂತೆ ಜನರ ಓಡಾಟ ಹೆಚ್ಚಾಗಿರುವ ಮಣಿಪಾಲದ ಭಾಗಗಳಲ್ಲಿಯೇ ಸಾರ್ವಜನಿಕ ಶೌಚಾಲಯಗಳ ಕೊರತೆ ತೀವ್ರವಾಗಿ ಕಾಡುತ್ತಿದೆ. ಇದೀಗ ಈ ಸಮಸ್ಯೆಗೆ ಮತ್ತೂಂದು ಸೇರ್ಪಡೆ ಎಂಬಂತೆ ನಗರದಲ್ಲಿ ಸುವ್ಯವಸ್ಥಿತ ಅಂಗವಿಕಲರ ಶೌಚಾಲಯಕ್ಕೆ ಬೀಗ ಹಾಕಲಾಗಿದೆ.

ಜನನಿಬಿಡ ಸ್ಥಳಗಳಲ್ಲೊಂದಾದ ಮಣಿಪಾಲದ ಕೆಎಂಸಿ ಪಕ್ಕದಲ್ಲಿ ಶಿವಮೊಗ್ಗ, ಕಾರ್ಕಳ, ಹೆಬ್ರಿ ಕಡೆ ಸಾಗುವ ಬಸ್‌ ನಿಲ್ದಾಣದಲ್ಲಿ ಎರಡು ಶೌಚಗೃಹವಿದ್ದು ಲಾಕ್‌ಡೌನ್‌ ಸಮಯದಲ್ಲಿ ಇದಕ್ಕೆ ಬೀಗ ಜಡಿಯಲಾಗಿದೆ. ಶೌಚಾಲಯ ಹುಡುಕಿ ಬರುವ ಸಾರ್ವಜನಿಕರನ್ನು ಮುಚ್ಚಿದ ಬಾಗಿಲುಗಳು ಸ್ವಾಗತಿಸುತ್ತವೆ. ಮಣಿಪಾಲ – ಉಡುಪಿ ಮಾರ್ಗ ವಾಗಿರುವ ಬಸ್‌ ನಿಲ್ದಾಣದಲ್ಲಿರುವ ಸಾರ್ವಜನಿಕ ಶೌಚಾಲಯಗಳು ಹೊರಗಿನಿಂದ ಬಂದವರಿಗೆ ಪಕ್ಕನೆ ಗಮನಕ್ಕೆ ಬರುವುದಿಲ್ಲ. ಕತ್ತಲಾಗುತ್ತಿದ್ದಂತೆಯೇ ಹಲವೆಡೆ ಫ‌ುಟ್‌ಪಾತ್‌ ಮೇಲೆಯೇ ಜನ ದೇಹಬಾಧೆ ತೀರಿಸಿಕೊಳ್ಳುವ ದೃಶ್ಯಗಳು ಸಾರ್ವ ಜನಿಕರ ಮುಜುಗರಕ್ಕೂ ಕಾರಣವಾಗಿವೆ.

ಇ- ಶೌಚಾಲಯ- ಹಿಡಿಶಾಪ:

ನಗರದಲ್ಲಿ ಹಲವಡೆ ಸಾರ್ವಜನಿಕ ಶೌಚಗೃಹ ಹಾಗೂ ಇ-ಶೌಚಾಲಯಗಳನ್ನು ಅಲ್ಲಲ್ಲಿ ನಿರ್ಮಿಸ ಲಾಗಿದೆ. ಅದರಲ್ಲಿ ಸಾರ್ವಜನಿಕರಿಗೆ ಎಷ್ಟು ಉಪಯೋಗವಾಗುತ್ತದೆ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ. ಇ-ಶೌಚಗೃಹಗಳಿಗೆ ಕೆಲವೊಮ್ಮೆ ನಾಣ್ಯ ಹಾಕಿದರೂ ಬಾಗಿಲು ತೆರೆಯುತ್ತಿಲ್ಲ. ಇದರಿಂದ ಬೇಸತ್ತ ಜನರು ಹಿಡಿಶಾಪ ಹಾಕುತ್ತಾ ಬೇರೆ ಸಾರ್ವಜನಿಕ ಶೌಚಗೃಹದತ್ತ ಮುಖ ಮಾಡುತ್ತಿದ್ದಾರೆ.

Advertisement

ಯಾರಿಗೆ ಶೌಚಾಲಯ ನಿರ್ವಹಣೆ? :

ನಗರಸಭೆ ಶೌಚಾಲಯಗಳನ್ನು ಅಲ್ಲಲ್ಲಿ ನಿರ್ಮಿಸಿದೆ. ಗುತ್ತಿಗೆ ವಹಿಸಿಕೊಂಡವರ ನಿರ್ವಹಣ ಅವಧಿ ಮುಗಿದ ಬಳಿಕ ಹೆಚ್ಚು ಆದಾಯವಿಲ್ಲದ ಶೌಚಾಲಯವನ್ನು ಯಾರು ನಿರ್ವಹಣೆ ಮಾಡು ತ್ತಾರೆ ಎನ್ನುವ ಪ್ರಶ್ನೆ ಎದುರಾಗುತ್ತಿದೆ. ಈ ಬಗ್ಗೆ ನಗರಸಭೆಯವರನ್ನು ಕೇಳಿದರೆ ಶೌಚಗೃಹ ನಿರ್ವ ಹಣೆಗೆ ಟೆಂಡರ್‌ ಆಹ್ವಾನಿಸಲಾಗಿತ್ತು. ಯಾರೂ ಟೆಂಡರ್‌ಗೆ ಆಸಕ್ತಿ ವಹಿಸದ ಹಿನ್ನೆಲೆಯಲ್ಲಿ ಶೌಚಗೃಹ ಬಂದ್‌ ಆಗಿದೆ ಎಂದು ಜಾರಿಕೊಳ್ಳುತ್ತಿದ್ದಾರೆ. ಸಾರ್ವಜನಿಕರ ಅನುಕೂಲಕ್ಕಾಗಿ ಶೌಚಾಲಯ ತೆರೆಯಬೇಕು ಎನ್ನುವ ಸದಾಶಯ ನಗರಸಭೆಗೆ ಇದ್ದಂತಿಲ್ಲ ಎಂದು ಸ್ಥಳೀಯರು ದೂರುತ್ತಿದ್ದಾರೆ.

ಅಂಗವಿಕಲರ ಬಳಕೆ ಇಲ್ಲ :

ತೆಂಕಪೇಟೆ ವಾರ್ಡ್‌ನ ನಾರ್ತ್‌ ಶಾಲೆ ಬಳಿ ವಿಶೇಷವಾಗಿ ಅಂಗವಿಕಲರಿಗಾಗಿ 2013-14ನೇ ಸಾಲಿನ ಎಸ್‌ಎಫ್ಸಿ ಶೇ. 3ರಷ್ಟು ನಿಧಿ ಬಳಸಿಕೊಂಡು ಸುಮಾರು 4.30 ಲ.ರೂ. ವೆಚ್ಚದಲ್ಲಿ ಒಂದೇ ಕಟ್ಟಡದಲ್ಲಿ ಪುರುಷರಿಗೆ, ಮಹಿಳೆಯರಿಗೆ ಹಾಗೂ ಅಂಗವಿಕಲರಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಲಾಗಿತ್ತು. ಅದರೆ ಈ ಶೌಚಾಲಯ ಯಾರಿಗಾಗಿ ನಿರ್ಮಿಸಲಾಗಿತ್ತೋ ಅವರಿಗೆ ಬಳಕೆ ಮಾಡಲು ಸಾಧ್ಯವಾಗುತ್ತಿಲ್ಲ. ಅಂಗವಿಕಲರು ಶೌಚಗೃಹ ಬೀಗ ಹಾಕಿದ್ದರಿಂದ ಹಲವರು ರಸ್ತೆಯಲ್ಲೇ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ.

ಇ- ಶೌಚ ಗೃಹ ಬೇಡಿಕೆ : ಹೆಬ್ರಿ, ಶಿವಮೊಗ್ಗ, ಕಾರ್ಕಳ ಮಾರ್ಗವಾಗಿ  ಮಣಿಪಾಲದಲ್ಲಿ ಬಸ್‌ಗಾಗಿ ಕಾಯುವವರು ಶೌಚ ಮಾಡಲು ಪರದಾಡಬೇಕಾಗುತ್ತಿದೆ. ರಾತ್ರಿ ವೇಳೆ ಬೀದಿ ದೀಪಗಳು ಇಲ್ಲದೆ ಕತ್ತಲ ಕೂಪವಾಗುವ ಮಣಿಪಾಲ ಬಸ್‌ ನಿಲ್ದಾಣದಲ್ಲಿ ಎರಡು ರಸ್ತೆ ದಾಟಿಕೊಂಡು ಶೌಚ ಮಾಡಿ ಬರುವುದು ಮಹಿಳೆಯರು, ಮಕ್ಕಳು, ಹಿರಿಯ ಪಾಲಿಗೆ ಕಷ್ಟವಾಗಿದೆ. ಶೀಘ್ರದಲ್ಲಿ ಬೀಗ ಹಾಕಲಾದ ಶೌಚಗೃಹ ಸಾರ್ವಜನಿಕ ಬಳಕೆಗೆ ಅವಕಾಶ ನೀಡಬೇಕು. ಇಲ್ಲವೇ ಇ -ಶೌಚಾಲಯವನ್ನಾದರೂ ನಿರ್ಮಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದರು.

ಮಣಿಪಾಲ ಬಸ್‌ ನಿಲ್ದಾಣದ ಶೌಚಗೃಹ ನಿರ್ವಹಣೆಗೆ ಟೆಂಡರ್‌ ಆಹ್ವಾನಿಸಲಾಗಿತ್ತು. ಯಾರೂ ಟೆಂಡರ್‌ಗೆ ಆಸಕ್ತಿ ವಹಿಸದ ಕಾರಣ ಶೌಚಗೃಹ ಬಂದ್‌ ಇದೆ. ತೆಂಕಪೇಟೆ ಅಂಗವಿಕಲರ ಶೌಚಗೃಹ ತೆರೆಯದಿರುವುದರ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ಗಮನ ಹರಿಸಲಾಗುವುದು. -ಸುಮಿತ್ರಾ ಆರ್‌. ನಾಯಕ್‌, ಅಧ್ಯಕ್ಷರು, ನಗರಸಭೆ ಉಡುಪಿ 

 

– ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next