Advertisement

ವ್ಯಾಪಾರ ಸಮರಕ್ಕೆ ತೆರೆ?

01:17 PM Jul 01, 2019 | Sriram |

ಒಸಾಕ: ಜಪಾನ್‌ನಲ್ಲಿ ನಡೆದ ಜಿ20 ರಾಷ್ಟ್ರಗಳ ಶೃಂಗದಲ್ಲಿ ವ್ಯಾಪಾರ ಸಂಘರ್ಷಕ್ಕೆ ಅಂತ್ಯ ಹಾಡುವಲ್ಲಿ ಅಮೆರಿಕ ಹಾಗೂ ಚೀನಾ ಮಹತ್ವದ ನಿರ್ಧಾರ ಕೈಗೊಂಡಿದ್ದು, ಕಳೆದ ಹಲವು ತಿಂಗಳುಗಳಿಂದಲೂ ಸ್ಥಗಿತಗೊಂಡಿದ್ದ ಮಾತುಕತೆಯನ್ನು ಪುನಾರಂಭಿಸಲು ಸಮ್ಮತಿಸಿವೆ. ಅಷ್ಟೇ ಅಲ್ಲ, ಚೀನಾದ ಸರಕುಗಳ ಮೇಲೆ ಮತ್ತೆ ಸುಂಕ ಹೇರದಿರಲೂ ಅಮೆರಿಕ ನಿರ್ಧರಿಸಿದೆ.

Advertisement

ಎರಡೂ ದೇಶಗಳ ಸುಂಕ ಸಂಘರ್ಷದಿಂದಾಗಿ ವಿಶ್ವದ ಆರ್ಥಿಕತೆಯೇ ಸಂಕಷ್ಟಕ್ಕೆ ಸಿಲುಕಿತ್ತು. ಜಿ20 ಶೃಂಗದ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಸುದೀರ್ಘ‌ ಮಾತುಕತೆ ನಡೆಸಿದ್ದು, ಮುಂದಿನ ದಿನಗಳಲ್ಲಿ ಎರಡೂ ದೇಶಗಳ ಸಮಿತಿಯು ಈ ನಿಟ್ಟಿನಲ್ಲಿ ಹೆಚ್ಚುವರಿ ಪೂರಕ ಚರ್ಚೆ ನಡೆಸಲಿದೆ. ಚೀನಾಗೆ ದಿಗ್ಬಂಧ ಹೇರುವುದು ನಮ್ಮ ಉದ್ದೇಶವಲ್ಲ. ಎರಡೂ ದೇಶಗಳ ಮಧ್ಯದ ಸಂಬಂಧವನ್ನು ಸುಧಾರಿಸಲು ಅಮೆರಿಕ ಬದ್ಧವಾಗಿದೆ ಎಂದು ಟ್ರಂಪ್‌ ಹೇಳಿದ್ದಾರೆ. ಆರ್ಥಿಕ ಹಿಂಜರಿತದ ಅಪಾಯವನ್ನು ಎದುರಿಸುತ್ತಿರುವ ಚೀನಾಗೆ ಅಮೆರಿಕದ ಈ ನಿರ್ಧಾರ ಅತ್ಯಂತ ಅನುಕೂಲಕರವಾಗಿದೆ.

ಗಡಿ ಭಾಗಕ್ಕೆ ಬನ್ನಿ ಕೈಕುಲುಕೋಣ ಎಂದು ಕರೆದ ಟ್ರಂಪ್‌!: ಚೇತರಿಸಿಕೊಂಡಿದ್ದ ಅಮೆರಿಕ ಮತ್ತು ಉತ್ತರ ಕೊರಿಯಾ ಮಧ್ಯದ ಸಂಬಂಧ ಇನ್ನೇನು ಮತ್ತೆ ಕುಸಿಯುತ್ತಿರುವ ಮಧ್ಯೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌, ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ರನ್ನು ಹಠಾತ್‌ ಭೇಟಿಗೆ ಆಹ್ವಾನಿಸಿದ್ದಾರೆ. ಟ್ವೀಟ್ ಮೂಲಕ ಟ್ರಂಪ್‌ ನೀಡಿದ ಈ ಆಹ್ವಾನ ಅಚ್ಚರಿ ಹುಟ್ಟಿಸಿದೆ.

ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಜೊತೆ ಸಭೆ ಹಾಗೂ ಇತರ ಕೆಲವು ಪ್ರಮುಖ ಸಭೆಗಳ ನಂತರ ನಂತರ, ನಾನು ದಕ್ಷಿಣ ಕೊರಿಯಾ ಮೂಲಕ ಅಮೆರಿಕಕ್ಕೆ ಪ್ರಯಾಣಿಸುತ್ತಿದ್ದೇನೆ. ಈ ಮಧ್ಯೆ ಉತ್ತರ ಕೊರಿಯಾ ಅಧ್ಯಕ್ಷರು ಲಭ್ಯವಿದ್ದರೆ ಗಡಿಯಲ್ಲಿ ಭೇಟಿ ಮಾಡಿ ಕೈಕುಲುಕಿ ಹೆಲೋ ಎಂದು ಹೇಳಬಹುದು ಎಂದು ಟ್ರಂಪ್‌ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಉತ್ತರ ಕೊರಿಯಾ ಉಪವಿದೇಶಾಂಗ ಸಚಿವ ಚೋಯ್‌ ಸೊನ್‌ ಹುಯಿ, ಟ್ರಂಪ್‌ ಆಹ್ವಾನ ಆಸಕ್ತಿಕರವಾಗಿದೆ. ಆದರೆ ಈವರೆಗೂ ನಮಗೆ ಅಧಿಕೃತ ಆಹ್ವಾನ ಬಂದಿಲ್ಲ ಎಂದಿದ್ದಾರೆ.

ಒಂದು ವೇಳೆ ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಭೇಟಿಗೆ ಸಮ್ಮತಿಸಿದರೆ, ಇದು ಅಮೆರಿಕ ಮತ್ತು ಉ.ಕೊರಿಯಾದ ಮೂರನೇ ಭೇಟಿಯಾಗಲಿದೆ. ಕಳೆದ ಎರಡು ಬಾರಿ ನಡೆಸಿದ ಮಾತುಕತೆಯಲ್ಲೂ ಉಭಯ ದೇಶಗಳು ಯಾವುದೇ ಸ್ಪಷ್ಟ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ.

ಉಪಾಹಾರದಲ್ಲಿ ಸ್ನೇಹಿತರಾದ ಅಮೆರಿಕ-ಸೌದಿ

ಇತ್ತೀಚೆಗೆ ಸೌದಿ ಅರೇಬಿಯಾ ಪತ್ರಕರ್ತ ಜಮಾಲ್ ಕಶೋಗ್ಗಿ ಹತ್ಯೆ ಪ್ರಕರಣದಲ್ಲಿ ಸೌದಿ ರಾಜಮನೆತನಕ್ಕೇ ಕಳಂಕ ಅಂಟಿಕೊಂಡಿತ್ತು. ಅಂತಾರಾಷ್ಟ್ರೀಯ ಸಮುದಾಯಗಳು ಸೌದಿ ಜೊತೆ ಗುರುತಿಸಿಕೊಳ್ಳಲೂ ಅಂಜುವಂತಾಗಿತ್ತು. ಜಿ20ಗೆ ಆಗಮಿಸಿದ ಸೌದಿ ರಾಜ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಎಂದಿನಂತೆಯೇ ಎಲ್ಲ ದೇಶದ ಮುಖಂಡರೊಂದಿಗೆ ಮಾತುಕತೆ ನಡೆಸುತ್ತಿದ್ದರಾದರೂ, ಸೌದಿ ಅರೇಬಿಯಾದ ಅಸ್ತಿತ್ವ ನಗಣ್ಯವಾಗಿತ್ತು. ಆದರೆ ಶನಿವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಜೊತೆಗೆ ಸೌದಿ ರಾಜ ಸಲ್ಮಾನ್‌ ಬೆಳಗಿನ ಉಪಾಹಾರವನ್ನು ಒಟ್ಟಿಗೆ ಮಾಡಿದಾಗ ಎರಡೂ ದೇಶಗಳ ಮಧ್ಯದ ಬಿಕ್ಕಟ್ಟು ಸಡಿಲವಾದಂತಿತ್ತು. ಸಲ್ಮಾನ್‌ರನ್ನು ಯಥೇಚ್ಛವಾಗಿ ಹೊಗಳಿದ ಟ್ರಂಪ್‌, ಸೌದಿಯಲ್ಲಿ ಸಲ್ಮಾನ್‌ ಸುಧಾರಣೆಗೆ ಮುನ್ನುಡಿ ಬರೆದಿದ್ದಾರೆ ಎಂದು ಪ್ರಶಂಸಿಸಿದ್ದಾರೆ. ಟ್ರಂಪ್‌ ಹಾವಭಾವ ಹೇಗಿತ್ತೆಂದರೆ, ಕಳೆದ ಕೆಲವು ತಿಂಗಳುಗಳ ಹಿಂದಷ್ಟೇ ಎರಡೂ ದೇಶಗಳ ಮಧ್ಯೆ ಏನೂ ನಡೆದೇ ಇಲ್ಲವೇನೋ ಎಂಬಂತಿತ್ತು. ಇದು ವಿಶ್ವದ ಇತರ ದೇಶಗಳಿಗೆ ಮಹತ್ವದ ಸಂದೇಶವನ್ನೂ ನೀಡಿದ್ದು, ಕಶೋಗ್ಗಿ ಸಾವಿಗಿಂತ ಉಭಯ ದೇಶಗಳ ಸಂಬಂಧ ಅತ್ಯಂತ ಮಹತ್ವದ್ದು ಎಂಬ ಭಾವನೆ ಮೂಡಿದೆ.

ಸೌದಿ ವಿರುದ್ಧ ಬೊಟ್ಟು ಮಾಡುವುದೇ ಇಲ್ಲ!

ಸೌದಿ ಅರೇಬಿಯಾ ಪತ್ರಕರ್ತ ಜಮಾಲ್ ಕಶೋಗ್ಗಿ ಹತ್ಯೆಗೆ ಸಂಬಂಧಿಸಿದಂತೆ ಸೌದಿ ಅರೇಬಿಯಾದ ರಾಜರ ಕಡೆಗೆ ಯಾರೂ ಬೊಟ್ಟು ಮಾಡುತ್ತಿಲ್ಲದಿರುವುದು ನನಗೆ ಸಿಟ್ಟು ತರಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಹೇಳಿದ್ದಾರೆ. ಸೌದಿ ಅರೇಬಿಯಾ ದೊರೆ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಜೊತೆಗೆ ಟ್ರಂಪ್‌ ಜಿ20 ಶೃಂಗದ ವೇಳೆ ಮಾತುಕತೆ ನಡೆಸಿದ್ದು, ಈ ವೇಳೆ ಕಶೋಗ್ಗಿ ಪ್ರಕರಣ ಚರ್ಚೆಯಾಯಿತೇ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಟ್ರಂಪ್‌ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
Advertisement
Advertisement

Udayavani is now on Telegram. Click here to join our channel and stay updated with the latest news.

Next