Advertisement
ಬಿಸಿಯೂಟ ಕಾರ್ಯಕರ್ತರ ಆಹೋರಾತ್ರಿ ಪ್ರತಿಭಟನೆ ತೀವ್ರ ಸ್ವರೂಪಕ್ಕೆ ತಿರುಗುವ ಮುನ್ಸೂಚನೆ ಕಂಡುಬಂದ ಹಿನ್ನೆಲೆಯಲ್ಲಿಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕರ್ತರ ಸಂಘಟನೆ ಪ್ರಮುಖರೊಂದಿಗೆ ಶುಕ್ರವಾರ ಸಂಜೆ ಸಭೆ ನಡೆಸಿದರು. ಶೀಘ್ರದಲ್ಲೇ ಬಜೆಟ್ ಇರುವುದರಿಂದ ಈ ಹಂತದಲ್ಲಿ ವೇತನ ಹೆಚ್ಚಳ ಘೋಷಣೆ ಮಾಡಲು ಸಾಧ್ಯವಿಲ್ಲ. ಅಲ್ಲದೆ, ಕನಿಷ್ಠ ವೇತನ ನೀಡುವುದೂ ಅಸಾಧ್ಯ. ಆದರೆ, ನಿಮ್ಮ ವೇತನ ಹೆಚ್ಚಳ ಬೇಡಿಕೆಯನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಹೋರಾಟ ಮುಂದುವರಿಸಲು ಕಾರ್ಯಕರ್ತೆಯರು ನಿರ್ಧರಿಸಿದ್ದರು. ಆದರೆ, ಮುಖ್ಯಮಂತ್ರಿಗಳ ಭರವಸೆ ಹಿನ್ನೆಲೆಯಲ್ಲಿ ಪ್ರತಿಭಟನೆ ವಾಪಸ್ ಪಡೆದಿದ್ದಾರೆ. ಬೆಳಗ್ಗೆ ಶಿಕ್ಷಣ ಇಲಾಖೆ ಕಾರ್ಯದರ್ಶಿ ಶಾಲಿನಿ ರಜನೀಶ್ ಸ್ಥಳಕ್ಕೆ ಭೇಟಿ ನೀಡಿ ಕಾರ್ಯಕರ್ತೆಯರ ಜತೆ ಮಾತುಕತೆ ನಡೆಸಿದ್ದರು. ನಂತರ ಸಿಐಟಿಯು ರಾಜ್ಯಾಧ್ಯಕ್ಷೆ ವರಲಕ್ಷ್ಮೀ ಹಾಗೂ ಇತರೆ ಐವರು ಮುಖಂಡರೊಂದಿಗೆ ಸರ್ವಶಿಕ್ಷಣ ಅಭಿಯಾನ ಕಚೇರಿಯಲ್ಲಿ ಸಚಿವ ತನ್ವೀರ್ ಸೇಠ್ ನೇತೃತ್ವದಲ್ಲಿ ಸಭೆ ನಡೆಸಲಾಗಿತ್ತು.
Related Articles
Advertisement
ಶೆಟ್ಟರ್ ಭೇಟಿ: ಬೆಳಗ್ಗೆ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್, ಬಿಸಿಯೂಟ ಕಾರ್ಯಕರ್ತೆಯರು ನಾಲ್ಕು ದಿನವಾದರೂ ಸಚಿವರು ಮತ್ತು ಸರ್ಕಾರದ ಕಡೆಯಿಂದ ಯಾರೂ ಬಂದಿಲ್ಲ. ಇದು ಸರ್ಕಾರದ ವಿರೋಧಿ ಧೋರಣೆ ತೋರಿಸುತ್ತದೆ ಎಂದು ಆರೋಪಿಸಿದ್ದರು.
ವಿಧಾನಸಭೆಯಲ್ಲಿ ಬಿಸಿಯೂಟ : ಬಿಸಿಯೂಟದ ಕಾರ್ಯಕರ್ತೆಯರ ಪ್ರತಿಭಟನೆ ಕುರಿತು ಶುಕ್ರವಾರ ವಿಧಾನಸಭೆಯಲ್ಲಿಯೂ ಚರ್ಚೆಯಾಗಿತ್ತು. ಸರ್ಕಾರ ಸ್ಪಂದಿಸದಿರುವುದಕ್ಕೆ ಬಿಜೆಪಿ,ಜೆಡಿಎಸ್ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದರು. ಅವರ ಬೇಡಿಕೆ ನ್ಯಾಯಯುತವಾಗಿದ್ದು ಸರ್ಕಾರ ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಕನಿಷ್ಠ ವೇತನ ನಿಗದಿಗೆ ಮಾಡಬೇಕೆಂದು ಒತ್ತಾಯಿಸಿದ್ದರು.
ಪೊಲೀಸ್ ಕಟ್ಟೆಚ್ಚರ: ಭಾರೀ ಭದ್ರತೆಬಿಸಿಯೂಟ ಕಾರ್ಯಕರ್ತೆಯರು ಹಾಗೂ ಕಂದಾಯ ಇಲಾಖೆ ಗ್ರಾಮ ಸಹಾಯಕ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಬಿ.ಕೆ.ಸಿಂಗ್, ಡಿಸಿಪಿ ಅನುಚೇತ್, ಚೇತನ್ ಸಿಂಗ್ ರಾಥೋಡ್, ಶರಣಪ್ಪ ನೇತೃತ್ವದಲ್ಲಿ ಭಾರೀ ಭದ್ರತೆ ನೀಡಲಾಗಿದೆ. 5 ಮಂದಿ ಎಸಿಪಿ, 15 ಮಂದಿ ಇನ್‌ಸ್ಪೆಕ್ಟರ್, 700ಕ್ಕೂ ಅಧಿಕ ಮಂದಿ ಪೊಲೀಸ್ ಪೇದೆಗಳು, 200 ಮಹಿಳಾ ಪೇದೆಗಳು, 2 ವಾಟರ್‌ಜೆಟ್, 5 ಕೆಎಸ್‌ಆರ್‌ಪಿ ತುಕಡಿ ನಿಯೋಜಿಸಲಾಗಿತ್ತು. ಸಂಘಟನೆಗಳಿಂದ ಆಹಾರ ವಿತರಣೆ
ನಾಲ್ಕು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ಕಾರ್ಯಕರ್ತರಿಗೆ ಅಂಬೇಡ್ಕರ್ ಸೇನೆ, ಸಾಮಾಜಿಕ ಸೇವಾ ಸಂಸ್ಥೆ ಹಾಗೂ ಪರಿಷತ್ ಸದಸ್ಯ ಶರವಣ ಸೇರಿದಂತೆ ವಿವಿಧ ಸಂಘಟನೆ ಕಾರ್ಯಕರ್ತರು ಆಹಾರ ಹಾಗೂ ನೀರು ವಿತರಿಸಿದ್ದರು. ಪ್ರತಿಭಟನಾ ನಿರತರಿಗಾಗಿ ತಾತ್ಕಾಲಿಕ ಶೌಚಾಲಯಗಳ ವ್ಯವಸ್ಥೆ ಕಲ್ಪಿಸಲಾಗಿತ್ತು. ರಾಜ್ಯ ಸರ್ಕಾರ 1,600 ರೂ. ಕೇಂದ್ರ ಸರ್ಕಾರ 600 ರೂ. ಒಟ್ಟು 2,200 ರೂ. ವೇತನ ನಿಗದಿ ಮಾಡಲಾಗಿದೆ. ಎಐಟಿಯುಸಿ ಮತ್ತು ಟಿಐಸಿಯು ಸಂಘಟನೆಗಳು ನಾಲ್ಕು ದಿನಗಳಿಂದ ಪ್ರತಿಭಟನೆ ನಡೆಸುತ್ತಿವೆ. ಫೆ.16ರಂದು ರಾಜ್ಯದ ಬಜೆಟ್ ಮಂಡನೆಯಾಗಲಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಅಂತಿಮ ತೀರ್ಮಾನಕ್ಕೆ ಬರಲಾಗುವುದು. ಹಾಗೆಯೇ ಹೋರಾಟಗಾರರಲ್ಲಿ ಪ್ರತಿಭಟನೆ ಕೈ ಬಿಡುವಂತೆ ಮನವಿ ಮಾಡಿದ್ದೇನೆ.
– ತನ್ವೀರ್ ಸೇಠ್ ಶಿಕ್ಷಣ ಸಚಿವ