ಹುಳಿಯಾರು: ರಾಗಿ ಬೆಳೆಗೆ ಹೆಸರಾಗಿರುವ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ದಶಕಗಳ ನಂತರ ಉತ್ತಮ ಇಳುವರಿ ಬಂದಿದ್ದು, ಆದರೆ ದಿಢೀರ್ ಬೆಲೆ ಕುಸಿದಿರುವುದು ರೈತರನ್ನು ಕಂಗಾಲಾಗಿಸಿದ್ದು, ತಕ್ಷಣ ರಾಗಿ ಖರೀದಿ ಕೇಂದ್ರ ತೆರೆಯಬೇಕಿದೆ.
ಕೃಷಿ ಇಲಾಖೆ ಮಾಹಿತಿ ಪ್ರಕಾರ 2018-19ನೇ ಸಾಲಿನಲ್ಲಿ 26,020 ಹೆಕ್ಟೇರ್ ರಾಗಿ ಬಿತ್ತನೆ ಗುರಿಯಲ್ಲಿ 19,700 ಹೆಕ್ಟೇರ್ ಪ್ರಗತಿ ಸಾಧಿಸಲಾಗಿದೆ. 1 ಹೆಕ್ಟೇರ್‌ಗೆ 20 ಕ್ವಿಂಟಲ್ ಇಳುವರಿ ಬಂದಿದೆಯಾದರೂ ತಾಲೂಕಿನಲ್ಲಿ 3.5 ಲಕ್ಷಕ್ಕೂ ಹೆಚ್ಚು ಕ್ವಿಂಟಲ್ ಇಳುವರಿ ಬಂದಿರಬಹುದೆಂದು ಅಂದಾಜಿಸಲಾಗಿದೆ.
ಸುಗ್ಗಿ ಕಾಲ ಆರಂಭಕ್ಕೂ ಮುನ್ನ ಕ್ವಿಂಟಲ್ ರಾಗಿಗೆ ಮೂರ್‍ನಾಲ್ಕು ಸಾವಿರ ಇದ್ದ ಬೆಲೆ ರಾಗಿ ಕೂಯ್ಲು ಆರಂಭವಾದ ತಕ್ಷಣ ದಿಢೀರ್ 2 ಸಾವಿರ ರೂ. ಆಸುಪಾಸಿಗೆ ಕುಸಿದಿದೆ. ಅವಕ ಹೆಚ್ಚಾಗಿರುವ ಜೊತೆಗೆ ರಾಗಿ ತೆನೆ ಮಳೆಗೆ ಸಿಲುಕಿ ಕಪ್ಪು ಬಣ್ಣಕ್ಕೆ ತಿರುಗಿದ್ದು, ಕೆಂಪು ರಾಗಿ ರಫ್ತು ಆಗುತ್ತಿದ್ದ ತಮಿಳುನಾಡು, ಕೇರಳ, ಮಹರಾಷ್ಟ್ರ ರಾಜ್ಯಗಳಲ್ಲಿ ಬೇಡಿಕೆ ಕುಸಿತದಿಂದ ಬೆಲೆ ಕಡಿಮೆಯಾಗಿದೆ ಎನ್ನುತ್ತಾರೆ ಹುಳಿಯಾರಿನ ರಾಗಿ ವರ್ತಕ ಎಲ್.ಆರ್.ಬಾಲಾಜಿ.
ಕಳೆದ 7-8 ವರ್ಷಗಳಿಂದ ಬಿತ್ತಿದ್ದ ರಾಗಿ ಕೈ ಸೇರದೆ ನಷ್ಟ ಅನುಭವಿಸಿದ್ದ ರೈತರಿಗೆ ಸರ್ಕಾರ 3200 ರೂ. ಬೆಂಬಲ ಬೆಲೆ ಘೋಷಿಸಿತ್ತು. ಆದರೆ ಮಾರುಕಟ್ಟೆಯಲ್ಲಿ ಬೆಲೆ ಕುಸಿದಿದ್ದರೂ ಇನ್ನೂ ಖರೀದಿ ಕೇಂದ್ರ ಆರಂಭಿಸದಿದ್ದರಿಂದ ಹಣದ ಅಗತ್ಯ ಇರುವ ರೈತರು ಸಿಗುವ ಬೆಲೆಗೆ ರಾಗಿ ಮಾರುತ್ತಿದ್ದಾರೆ. ಒಂದು ಕ್ವಿಂಟಲ್ ರಾಗಿ ಬೆಳೆಯಲು ಕನಿಷ್ಠ 2 ಸಾವಿರ ರೂ. ಖರ್ಚಾಗುತ್ತಿದ್ದು, ಅದಕ್ಕಿಂತಲೂ ಕಡಿಮೆ ಬೆಲೆ ಮಾರುಕಟ್ಟೆಯಲ್ಲಿದೆ.
ರೈತನ ಗೋಳು ಕೇಳುವವರೂ ಇಲ್ಲ. ರಾಗಿ ಕೊಯ್ಲು ಆರಂಭದ ದಿನದಲ್ಲೇ ಸರ್ಕಾರ ಖರೀದಿ ಕೇಂದ್ರ ಆರಂಭಿಸಿದರೆ ಮಾರುಕಟ್ಟೆಯಲ್ಲಿ ರಾಗಿ ಬೆಲೆ ಪಾತಾಳ ಸೇರುತ್ತಿರಲಿಲ್ಲ. ಆದರೆ ಸರ್ಕಾರದ ಈ ನಿರ್ಲಕ್ಷ್ಯದಿಂದ ವರ್ತಕರಿಗೆ ಲಾಭವಾಗುತ್ತಿದೆ. ಹಬ್ಬ, ಮದುವೆ, ವಿದ್ಯಾಭ್ಯಾಸ ಎಂದು ರೈತ ಬೆಳೆದ ರಾಗಿಯನ್ನೆಲ್ಲಾ ಮಾರುವ ಮುಂಚೆ ಖರೀದಿ ಕೇಂದ್ರ ತೆರೆಯುವ ಅಗತ್ಯವಿದೆ.
ಬೆಂಬಲ ಬೆಲೆಗಿಂತ ಮಾರುಕಟ್ಟೆ ಬೆಲೆ ಕಡಿಮೆಯಾದ ತಕ್ಷಣ ನಫೆಡ್ ಕೇಂದ್ರ ತೆರೆಯಬೇಕು. ಆದರೆ 2 ತಿಂಗಳಿಂದ 2 ಸಾವಿರ ಆಸುಪಾಸಿಗೆ ರಾಗಿ ಬೆಲೆ ಮಾರುಕಟ್ಟೆಯಲ್ಲಿದ್ದರೂ ಸರ್ಕಾರ ಖರೀದಿ ಕೇಂದ್ರ ತೆರೆಯುತ್ತಿಲ್ಲ. ರೈತ ತನ್ನಲ್ಲಿದ್ದ ರಾಗಿಯನ್ನೆಲ್ಲಾ ಮಾರುವ ಮುಂಚೆ ಖರೀದಿ ಕೇಂದ್ರ ತೆರೆದರೆ ರೈತನ ನೆರವಾಗುತ್ತದೆ.
-ಕೆಂಕೆರೆ ಸತೀಶ್, ರಾಜ್ಯ ಉಪಾಧ್ಯಕ್ಷ, ರೈತ ಸಂಘ
ಸರ್ಕಾರ ಜಿಲ್ಲಾದ್ಯಂತ ರಾಗಿ ಖರೀದಿ ಕೇಂದ್ರ ತೆರೆಯಲು ನಿರ್ಧರಿಸಿದ್ದು, ಸೋಮವಾರ ಚಿಕ್ಕನಾಯಕನಹಳ್ಳಿ ಮತ್ತು ಹುಳಿಯಾರಿನಲ್ಲಿ ರಾಗಿ ಮಾರಾಟಗಾರರ ನೋಂದಣಿ ಆರಂಭವಾಗಲಿದ್ದು, ಎಪಿಎಂಸಿ ಆವರಣದಲ್ಲಿ ಸ್ಥಳ ನಿಗದಿ ಮಾಡಲಾಗಿದೆ. ಆದರೆ ಖರೀದಿ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಗೋದಾಮು, ಟ್ರಾನ್ಸ್‌ಪೊರ್ಟ್, ಹಮಾಲಿಗಳ ಟೆಂಡರ್ ಪ್ರಕ್ರಿಯೆ ಇನ್ನಷ್ಟೇ ನಡೆಸಬೇಕಿದೆ. ಇದು ಮುಗಿದ ನಂತರ ಖರೀದಿ ಆರಂಭಿಸಲಾಗುವುದು.
-ಲಕ್ಷ್ಮೀನರಸಿಂಹಯ್ಯ, ರಾಗಿ ಖರೀದಿ ಅಧಿಕಾರಿ, ಹುಳಿಯಾರು