Advertisement
ಜಿರಾಫೆಯ ನಾಲಗೆ ಕಪ್ಪೇಕೆ?ನಾಲಗೆ ಉದ್ದಕ್ಕೆ ಚಾಚುವವರನ್ನು ಕಂಡರೆ ನಾವು ಉರಿದುಬೀಳುತ್ತೇವೆ. ಅಂದರೆ ಅಗತ್ಯಕ್ಕಿಂತ ಹೆಚ್ಚಿಗೆ ಮಾತಾಡುವವರನ್ನು ಯಾರೂ ಇಷ್ಟಪಡುವುದಿಲ್ಲ. ಆದರೆ ಅಕ್ಷರಶಃ ನಾಲಗೆ ಚಾಚುವವರನ್ನು ಕಂಡರೆ, ಎಲ್ಲೋ ತಲೆ ಕೆಟ್ಟಿರಬೇಕು ಎಂದುಕೊಳ್ಳಬಹುದು. ಆದರೆ ಜಿರಾಫೆಯ ವಿಷಯದಲ್ಲಿ ಹಾಗೆ ತಿಳಿದುಕೊಳ್ಳುವಂತಿಲ್ಲ. ಏಕೆಂದರೆ ಅದು ಯಾರನ್ನೋ ಅಣಕಿಸಲು ನಾಲಗೆ ತೋರಿಸುತ್ತಿಲ್ಲ. ಅದು ಆಹಾರವನ್ನು ಬಾಯೊಳಗೆ ಸೆಳೆಯಲು ನಾಲಗೆಯನ್ನು ಬಳಸಿಕೊಳ್ಳುತ್ತವೆ. ಸಾಮಾನ್ಯವಾಗಿ ನಾಲಗೆ ಕೆಂಪು ಬಣ್ಣವನ್ನು ಹೊಂದಿರುತ್ತದೆ. ಆದರೆ ಜಿರಾಫೆಯ ನಾಲಗೆ ಕಪ್ಪು ಬಣ್ಣದ್ದಾಗಿದೆ. ಜಿರಾಫೆ ಹೊಟ್ಟೆ ತುಂಬಿಸಿಕೊಳ್ಳಲು ತುಂಬಾ ಸಮಯ ವ್ಯಯ ಮಾಡುತ್ತದೆ. ನಾಲಗೆಯನ್ನು ತುಂಬಾ ಸಮಯದವರೆಗೆ ಹೊರಕ್ಕೆ ಚಾಚಬೇಕಾಗಿರುವುದರಿಂದ ಸೂರ್ಯನ ಅಲ್ಟ್ರಾ ವಯಲೆಟ್ ಕಿರಣಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚು. ಸೂರ್ಯನ ಅಪಾಯಕಾರಿ ಕಿರಣಗಳಿಂದ ರಕ್ಷಣೆ ಪಡೆಯಲು ನಾಲಗೆ ಮೇಲಿನ ಕಪ್ಪು ಬಣ್ಣದ ಪದರ ಸಹಕರಿಸುತ್ತದೆ.
ಇಷ್ಟು ವಯಸ್ಸಾದರೂ ಬೆಳೆದೇ ಇಲ್ಲವಲ್ಲೋ ಎಂದು ತಾಯಂದಿರು ವ ುಗರಾಯಂದಿರಿಗೆ ಸಹಸ್ರ ನಾಮಾರ್ಚನೆ ಮಾಡುತ್ತಾರೆ. ಈ ನಾಮಾರ್ಚನೆಯನ್ನು ಮೊಸಳೆಗೆ ಮಾಡುವಂತಿಲ್ಲ. ಏಕೆಂದರೆ ಸಂಶೋಧನೆಯೊಂದರಿಂದ ತಿಳಿದು ಬಂದಿರುವ ಮಾಹಿತಿ ಪ್ರಕಾರ ಮೊಸಳೆ 30 ವರ್ಷವಾದರೂ ಬೆಳವಣಿಗೆ ಪೂರ್ತಿಯಾಗಿರುವುದಿಲ್ಲವಂತೆ. ಅಂದರೆ 33 ವರ್ಷದವರೆಗೂ ಬೆಳೆಯುತ್ತಲೇ ಇರುತ್ತವಂತೆ. ಆದರೆ ಮನುಷ್ಯ 19 ವರ್ಷ ತಲುಪಿದಾಗಲೇ ಅವನ ಬೆಳವಣಿಗೆ ನಿಲ್ಲುತ್ತದೆ. ಅದು ಸೃಷ್ಟಿಯ ನಿಯಮ. ಅದನ್ನು ಮೀರಲು ಆಗುವುದಿಲ್ಲ. ಅದಕ್ಕೇ ಅಲ್ಲವೆ ಉದ್ದ ಇಲ್ಲದೇ ಇದ್ದರೂ ಹಿಂಸೆಯನ್ನು ಸಹಿಸಿಕೊಂಡು ಉದ್ದಕ್ಕಿರುವ ಭ್ರಮೆ ಹುಟ್ಟಿಸಲು ಹೈಹೀಲ್ಡ್ ಚಪ್ಪಲಿ ಧರಿಸಿ ಬೀಗುವುದು. ಇನ್ನು ಕೆಲವರು ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಉದ್ದ ಆಗಲು ಟಾನಿಕ್ಕು, ಮಾತ್ರೆ ಹಾಗೂ ಪೇಯಗಳ ಮೊರೆ ಹೋಗುವುದಿದೆ. ಅವೆಲ್ಲಾ ಬರೀ ಸಮಾಧಾನ ತರಬಹುದೇ ಹೊರತು ಉದ್ದವನ್ನು ಹೆಚ್ಚಿಸಲಾಗದು! ಆದರೆ ಮೊಸಳೆಗೆ ಪ್ರಕೃತಿಯೇ 30 ವರ್ಷವಾದರೂ ಉದ್ದ ಆಗುತ್ತಲೇ ಇರುವ ವರವನ್ನು ನೀಡಿದೆ. ಆ ವರವನ್ನೇನಾದರೂ ಮನುಷ್ಯನಿಗೆ ನೀಡಿದ್ದರೆ ಮಾರುಕಟ್ಟೆಯಲ್ಲಿ ಬೆಳವಣಿಗೆ ಹೆಚ್ಚಿಸುವ ಉತ್ಪನ್ನಗಳೇ ಇರುತ್ತಿರಲಿಲ್ಲ! ಹರ್ಷವರ್ಧನ್ ಸುಳ್ಯ