ಹೊಸದಿಲ್ಲಿ: ಅಯೋಧ್ಯೆಯಲ್ಲಿರುವ 2.77 ಎಕರೆ ಜಮೀನು ಮಾಲಕತ್ವದ ಬಗೆಗಿನ ವಿಚಾರಣೆ ಅ.18ರ ಬದಲಾಗಿ 17ಕ್ಕೇ ಮುಕ್ತಾಯಗೊಳ್ಳಲಿದೆ. ಶುಕ್ರವಾರ ನಡೆದ 37ನೇ ದಿನದ ವಿಚಾರಣೆ ಮುಕ್ತಾಯವಾಗುವ ಹಂತದಲ್ಲಿ ಮಾತನಾ ಡಿದ ಮುಖ್ಯ ನ್ಯಾಯ ಮೂರ್ತಿ ರಂಜನ್ ಗೊಗೋಯ್ ಈ ಅಂಶ ಪ್ರಸ್ತಾವ ಮಾಡಿ ದರು. ಮುಸ್ಲಿಂ ಸಂಘಟ ನೆಗಳ ಪರ ವಕೀಲರು ಅ. 14ರಂದು ವಾದ ಮಂಡನೆ ಮುಕ್ತಾಯ ಮಾಡಲಿದ್ದಾರೆ. ಹಿಂದೂ ಪರ ಸಂಘಟನೆಗಳಿಗೆ ಅವುಗಳಿಗೆ ಉತ್ತರ ಸಲ್ಲಿಸಿ ಪ್ರತಿ ವಾದ ಮಂಡನೆಗೆ ಅ. 16 ಕೊನೆಯ ದಿನ ಎಂದು ತೀರ್ಮಾ ನಿಸಲಾಗಿದೆ. ಅ. 17ರಂದು ಕೊನೆಯ ಹಂತದ ವಾದ ಮಂಡನೆ ನಡೆಯಲಿದೆ. ಮುಖ್ಯ ನ್ಯಾಯಮೂರ್ತಿ ನ. 17ರಂದು ನಿವೃತ್ತಿಯಾಗಲಿದ್ದಾರೆ. ಅದಕ್ಕಿಂತ ಮೊದಲೇ ತೀರ್ಪು ಪ್ರಕಟವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ವಾದ ಮಂಡನೆಗೆ ದಿನ ನಿಗದಿ ಮಾಡಿರುವ ಹಿನ್ನೆಲೆಯಲ್ಲಿ ಇತರ ಯಾವುದೇ ಹೊಸ ಸಾಕ್ಷ್ಯ ಸಲ್ಲಿಕೆ ಮಾಡಕೂಡದು ಎಂದು ಎರಡೂ ಕಡೆಯವರಿಗೆ ನ್ಯಾಯಪೀಠ ತಾಕೀತು ಮಾಡಿದೆ.
ಸೋರಿಕೆಯಾಗಿದೆ ವಿವರ: ಶುಕ್ರವಾರ ವಿಚಾರಣೆ ವೇಳೆ, ಜಮೀನು ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಸಂಧಾನ ಪ್ರಕ್ರಿಯೆಯ ವಿವರ ಮೈಕ್ರೋಬ್ಲಾಗಿಂಗ್ ಜಾಲತಾಣ ಟ್ವಿಟರ್ ಮೂಲಕ ಸೋರಿಕೆಯಾಗಿದೆ. ಅದನ್ನು ರಹಸ್ಯವಾಗಿ ಇರಿಸುವ ಪ್ರಕ್ರಿಯೆ ನಡೆದಿಲ್ಲ ಎಂದು ಸುಪ್ರೀಂಕೋರ್ಟ್‌ನಲ್ಲಿ ಮುಸ್ಲಿಂ ಸಂಘಟನೆಗಳ ಪರ ವಕೀಲ ರಾಜೀವ್ ಧವನ್ ಆರೋಪಿಸಿದ್ದಾರೆ. ಕೆಲವೊಂದು ವಿಚಾರಗಳನ್ನು ಸಂಧಾನ ಸಮಿತಿಯಲ್ಲಿ ಚರ್ಚಿಸಲಾಗಿತ್ತು.
ಅವುಗಳನ್ನು ಅತ್ಯಂತ ರಹಸ್ಯ ಎಂದು ಪರಿಗಣಿಸಲಾಗಿದೆ. ಸಾಕ್ಷ್ಯಗಳು ಮತ್ತು ಅಭಿಪ್ರಾಯಗಳನ್ನು ಟ್ವಿಟರ್ ಮೂಲಕ ಸೋರಿಕೆ ಮಾಡಲಾಗಿದೆ ಎಂದು ದೂರಿದ್ದಾರೆ. ಅಯೋಧ್ಯೆಯ ಜಮೀನು ಮಾಲೀಕತ್ವ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಲಿರುವ ತೀರ್ಪು ದೂರಗಾಮಿ ಪರಿಣಾಮ ಬೀರಲಿದೆ. ದೇಗುಲ ಇತ್ತು ಎಂದು ಹೇಳಲಾಗಿರುವ ಜಮೀನಿನಲ್ಲಿ ಮಸೀದಿ ನಿರ್ಮಿಸಲಾಗಿದೆ ಎಂದು ಮುಂದಿನ ದಿನಗಳಲ್ಲಿ ಎದುರಾಗಲಿರುವ ಪ್ರಕರಣಗಳಿಗೆ ತೀರ್ಪು ನೀಡುವ ಸಂದರ್ಭದಲ್ಲಿ ಈ ತೀರ್ಪೆ ಮೂಲವಾಗಿ ಪರಿಣಮಿಸಲಿದೆ ಎಂದು ಧವನ್ ವಾದಿಸಿದ್ದಾರೆ.